ಶಾಸಕ ಸುರೇಶ್‌ರಿಂದ ಲಂಚಾವತಾರ ಕಡಿಮೆ ಆಗಿದೆ

| Published : Jul 11 2024, 01:37 AM IST

ಸಾರಾಂಶ

ಕಾಂಗ್ರೆಸ್‌ನ ಕೆಡಿಪಿ ಸದಸ್ಯರು ಬೇಲೂರಿನ ಶಾಸಕರಾದ ಸುರೇಶ್ ಅವರು ಅಧಿಕಾರಿಗಳ ಮೇಲೆ ದರ್ಪ ತೋರುತ್ತಿದ್ದಾರೆ , ಯಾವುದೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ. ಅವರು ಶೋಕಿಗಾಗಿ ಶಾಸಕರಾಗಿದ್ದಾರೆಂದು ಹೇಳಿರುವುದು ಅವರ ರಾಜಕೀಯ ತಿಳಿವಳಿಕೆ ಮಟ್ಟವನ್ನು ತೋರಿಸುತ್ತದೆ. ಶಾಸಕರಾದ ನಂತರ ಪ್ರತಿ ಇಲಾಖೆ ಎಲ್ಲಾ ಇಲಾಖೆ ಅಧಿಕಾರಿಗಳ ವಿಶ್ವಾಸ ಪಡೆದು ಉತ್ತಮ ಕೆಲಸ ಮಾಡುತ್ತಿದ್ದಾರೆ.ಕಚೇರಿಗಳಲ್ಲಿ ಲಂಚಾವತಾರ ಕಡಿಮೆ ಮಾಡುವ ಮೂಲಕ ತಾಲೂಕಿನಲ್ಲಿ ಶಾಸಕರು ಜನಪ್ರಿಯತೆ ಗಳಿಸಿದ್ದಾರೆ ಎಂದು ರಾಜ್ಯ ಎಸ್ಸಿ ಮೋರ್ಚ ಕಾರ್ಯದರ್ಶಿ ಪರ್ವತಯ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಶಾಸಕ ಎಚ್ ಕೆ ಸುರೇಶ್‌ರವರು ೩೭ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಭ್ರಷ್ಟಾಚಾರ ರಹಿತವಾಗಿ ಕಾರ್ಯ ನಿರ್ವಹಿಸಬೇಕೆಂದು ಸ್ಪಷ್ಟ ಸಂದೇಶ ನೀಡಿದ್ದು, ಅದರಂತೆ ಕಚೇರಿಗಳಲ್ಲಿ ಲಂಚಾವತಾರ ಕಡಿಮೆ ಮಾಡುವ ಮೂಲಕ ತಾಲೂಕಿನಲ್ಲಿ ಶಾಸಕರು ಜನಪ್ರಿಯತೆ ಗಳಿಸಿದ್ದಾರೆ. ಈ ಬೆಳವಣಿಗೆಯನ್ನು ಸಹಿಸದ ಕೆಲವರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ರಾಜ್ಯ ಎಸ್ಸಿ ಮೋರ್ಚ ಕಾರ್ಯದರ್ಶಿ ಪರ್ವತಯ್ಯ ಹಾಗೂ ಮಾಜಿ ಜಿಪಂ ಸದಸ್ಯ ಸಿ ಎಚ್ ಪ್ರಕಾಶ್ ಹೇಳಿದರು.

ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ೨ ದಿನಗಳ ಹಿಂದೆ ಕಾಂಗ್ರೆಸ್‌ನ ಕೆಡಿಪಿ ಸದಸ್ಯರು ಬೇಲೂರಿನ ಶಾಸಕರಾದ ಸುರೇಶ್ ಅವರು ಅಧಿಕಾರಿಗಳ ಮೇಲೆ ದರ್ಪ ತೋರುತ್ತಿದ್ದಾರೆ , ಯಾವುದೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ. ಅವರು ಶೋಕಿಗಾಗಿ ಶಾಸಕರಾಗಿದ್ದಾರೆಂದು ಹೇಳಿರುವುದು ಅವರ ರಾಜಕೀಯ ತಿಳಿವಳಿಕೆ ಮಟ್ಟವನ್ನು ತೋರಿಸುತ್ತದೆ. ಶಾಸಕರಾದ ನಂತರ ಪ್ರತಿ ಇಲಾಖೆ ಎಲ್ಲಾ ಇಲಾಖೆ ಅಧಿಕಾರಿಗಳ ವಿಶ್ವಾಸ ಪಡೆದು ಉತ್ತಮ ಕೆಲಸ ಮಾಡುತ್ತಿದ್ದಾರೆ. ಜಡ್ಡು ಹಿಡಿದಿರುವ ಅಧಿಕಾರಿಗಳಿಗೆ ಚಾಟಿ ಬೀಸುವ ಮೂಲಕ ಅವರಿಂದ ಕೆಲಸ ಮಾಡಿಸುತ್ತಿದ್ದಾರೆ. ಇದು ಕೆಲವರಿಗೆ ಇರಿಸು ಮುರಿಸಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಭ್ರಷ್ಟಾಚಾರ ರಹಿತ ತಾಲೂಕನ್ನಾಗಿ ಮಾಡುವ ಭರವಸೆಯನ್ನು ನೀಡಿದ್ದು ಅದರಂತೆ ಕಾರ್ಯ ನಿರ್ವಹಿಸಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎಂದರು.

ಶಾಸಕರಾದ ನಂತರ ಸುರೇಶ್ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಬಡವರ ಮತ್ತು ದೀನ ಪರ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಆರೋಪ ಮಾಡುವವರು ತಿಳಿಯಲಿ, ಸರ್ಕಾರದಿಂದ ಬರುವ ಅನುದಾನಕ್ಕೆ ಯಾರು ಅಡ್ಡಿಯಾಗುತ್ತಿದ್ದಾರೆ ಮತ್ತು ಅಧಿಕಾರಿಗಳ ವರ್ಗಾವಣೆಯಲ್ಲಿ ಯಾರು ನಿರತರಾಗಿದ್ದಾರೆ ಎಂಬ ಬಗ್ಗೆ ತಾಲೂಕಿನ ಜನತೆಗೆ ತಿಳಿದಿದೆ. ಸುಮಾರು ೯ ಸಾವಿರ ಬಗರ್‌ಹುಕುಂ ಅರ್ಜಿ ವಿಲೇವಾರಿ ಆಗದೆ ಇದ್ದ ಅರ್ಜಿಗಳಲ್ಲಿ ನಿಜವಾದ ಫಲಾನುಭವಿಗಳಿಗೆ ಶಾಸಕರು ಅಧಿಕಾರಿಗಳ ಮೂಲಕ ವಿಲೇವಾರಿ ಮಾಡಿಸಿದ್ದಾರೆ. ಈಗಾಗಲೇ ಸರ್ಕಾರ ಇಲ್ಲದಿದ್ದರೂ ಸಹ ಸರ್ಕಾರದಿಂದ ಇವರು ತಾಲೂಕಿನ ಅಭಿವೃದ್ಧಿಗಾಗಿ ಹಣವನ್ನು ತಂದು ಅಭಿವೃದ್ಧಿ ಮಾಡಿರುವುದಕ್ಕೆ ಹಲವಾರು ದಾಖಲೆಗಳು ನಮ್ಮ ಬಳಿ ಇದೆ ಎಂದು ತಿಳಿಸಿದರು.

ಕೆಡಿಪಿ ಸಭೆಗಳನ್ನು ನಮ್ಮನ್ನು ಆಹ್ವಾನಿಸದೆ ಏಕಪಕ್ಷೀಯವಾಗಿ ಇವರೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಈವರೆಗೆ ಉಸ್ತುವಾರಿ ಸಚಿವರ ಕೆಡಿಪಿ ಸಭೆಯನ್ನು ಕರೆದಿಲ್ಲ. ಚುನಾವಣೆ ನೀತಿ ಸಂಹಿತೆ ಇದ್ದ ಕಾರಣ ಶಾಸಕರು ಕೆಡಿಪಿ ಸಭೆ ಕರೆಯಲು ಕರೆಯಲು ಸಾಧ್ಯವಾಗಿರಲಿಲ್ಲ ಎಂಬುದನ್ನು ಆರೋಪ ಮಾಡಿರುವವರು ಮನಗಾಣಬೇಕು. ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪಟ್ಟಣದ ಅಂಬೇಡ್ಕರ್ ಭವನ ಪಕ್ಕದಲ್ಲಿ ಕೋಳಿ ಅಂಗಡಿಗಳ ತೆರವಿಗೆ ಯಾವುದೇ ಅಡಚಣೆ ಬಂದರೂ ಎದೆಗುಂದದೆ ಶಾಸಕ ಎಚ್‌ ಕೆ ಸುರೇಶ ತೆರವುಗೊಳಿಸುವಲ್ಲಿ ಪ್ರಮುಖ ರಾಗಿದ್ದಾರೆ ಎಂಬುದನ್ನು ತಿಳಿಯಬೇಕು. ರಾಜ್ಯದಲ್ಲಿ ನಮ್ಮ ಸರ್ಕಾರ ಇಲ್ಲದಿದ್ದರೂ ಶಾಸಕರು ತಮ್ಮ ನೈಪುಣ್ಯತೆಯಿಂದ ಅನುದಾನ ತಂದು ಅಭಿವೃದ್ಧಿ ಕೆಲಸದಲ್ಲಿ ಮುಂದಾಗಿದ್ದಾರೆ. ಶಾಸಕರ ಬಗ್ಗೆ ಮಾತನಾಡುವ ನೈತಿಕತೆ, ಕಾಂಗ್ರೆಸ್ ನಾಯಕರಿಗಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಂಜುನಾಥ್, ಪುರಸಭೆ ಸದಸ್ಯ ಪ್ರಭಾಕರ್, ನಗರಾಧ್ಯಕ್ಷ ವಿನಯ್, ಗಂಗೇಶ್, ಹಾಜರಿದ್ದರು.