ಮೆಡಿಕಲ್ ಸ್ಟೋರ್ ಪರವಾನಗಿ ನವೀಕರಣಕ್ಕಾಗಿ ೩೮,೦೦೦ ರೂ ಲಂಚಕ್ಕೆ ಜಿಲ್ಲಾ ಡ್ರಗ್‌ಕಂಟ್ರೋಲರ್ ಬೇಡಿಕೆ ಇಟ್ಟಿದ್ದ ಬಗ್ಗೆ ದೂರು ಬಂದಿತ್ತು, ಆ ಹಿನ್ನೆಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಟೇಕಲ್

ಮೆಡಿಕಲ್ ಸ್ಟೋರ್ ಪರವಾನಗಿ ನವೀಕರಣ ಸಂಬಂಧ ಅರ್ಜಿದಾರನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ಶ್ಯಾಮಲ ಸೇರಿ ಮೂವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದಿದ್ದಾರೆ.

ಕರ್ನಾಟಕ ದಲಿತ ಸಿಂಹ ಸೇನೆ ಅಧ್ಯಕ್ಷ ಹೂಹಳ್ಳಿ ಪ್ರಕಾಶ್, ಕೃಷ್ಣಯ್ಯ ದೂರಿನ ಮೇರೆಗೆ ಲೋಕಾಯುಕ್ತ ಉಪ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಈ ಸಂಬಂಧ ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ಶ್ಯಾಮಲಾ, ವಾಹನ ಚಾಲಕ ಮಹಂತೇಶ್ ಮತ್ತು ನಿವೃತ್ತ ನೌಕರ ಶ್ರೀನಿವಾಸರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆಂದು ೩೫ ಸಾವಿರ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಬಳಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆ ವೇಳೆ ಅಧಿಕಾರಿಗಳನ್ನು ಕಂಡು ಶ್ಯಾಮಲಾ ಹಾಗೂ ಮತ್ತಿಬ್ಬರು ತಲೆ ಮರಿಸಿಕೊಳ್ಳಲು ಯತ್ನಿಸಿದ್ದಾರೆ.

ಕಾರನ್ನು ಬೆನ್ನಟ್ಟಿದ್ದ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ, ಆದರೆ ಸ್ವೀಕರಿಸಿದ್ದ ಹಣದ ಕಂತೆಯನ್ನು ಮಾರ್ಗ ಮಧ್ಯದಲ್ಲಿ ಬಿಸಾಡಿರುವುದಾಗಿ ವಿಚಾರಣೆಯಲ್ಲಿ ಅಧಿಕಾರಿ ಒಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

ಹಣಕ್ಕಾಗಿ ತಡರಾತ್ರಿವರೆಗೂ ಲೋಕಾಯುಕ್ತ ಅಧಿಕಾರಿಗಳು ಹುಡುಕಾಡಿದ್ದರು ಸಹ ದೊರೆತಿಲ್ಲ. ಆದರೆ ಹಣ ಸ್ವೀಕರಿಸುವ ವಿಡಿಯೋ ಅಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಮೆಡಿಕಲ್ ಸ್ಟೋರ್ ಪರವಾನಗಿ ನವೀಕರಣಕ್ಕಾಗಿ ೩೮,೦೦೦ ರೂ ಲಂಚಕ್ಕೆ ಜಿಲ್ಲಾ ಡ್ರಗ್‌ಕಂಟ್ರೋಲರ್ ಬೇಡಿಕೆ ಇಟ್ಟಿದ್ದ ಬಗ್ಗೆ ದೂರು ಬಂದಿತ್ತು, ಆ ಹಿನ್ನೆಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಯ ಕಾರ್ಯವೈಖರಿಗೆ ಅಸಮಾಧಾನಗೊಂಡ ಜಿಲ್ಲಾ ಸಚಿವ ಬೈರತಿ ಸುರೇಶ್ ಅವರು ತರಾಟೆಗೂ ಸಹ ತೆಗೆದುಕೊಂಡಿದ್ದರು. ಹೊಸ ಲೈಸನ್ಸ್ ನೀಡಲು, ನವೀಕರಣ ಮಾಡಲು ಅರ್ಜಿ ಸಲ್ಲಿಸಿದರೆ ಸತಾಯಿಸುತ್ತಿದ್ದರು, ನಗದು ನೀಡಿದವರ ಕೆಲಸ ಬೇಗ ಆಗುತ್ತಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಇದು ಔಷಧಿ ಮಾರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು ಇದೀಗ ಇಲಾಖೆಯ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವುದು ಔಷಧ ಮಾರಾಟಗಾರರ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.