ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿಲ್ಲದಿದ್ದರೂ ಸಾವಿರಾರು ಕೋಟಿ ರೂ.ಗಳ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆಂದು ಶಾಸಕ ಡಾ.ಎಂ. ಚಂದ್ರಪ್ಪ ಹೇಳಿದರು. ತಾಲೂಕಿನ ಗುಂಡೇರಿ ಗ್ರಾಮದಲ್ಲಿ ₹112 ಲಕ್ಷ ವೆಚ್ಚದಲ್ಲಿ ನೂತನ ಚೆಕ್‍ಡ್ಯಾಮ್ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ತಾಲೂಕಿನಾದ್ಯಂತ ಎಲ್ಲಾ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ ಹಿರಿಯೂರಿನ ವಾಣಿವಿಲಾಸ ಸಾಗರದ ಮಧ್ಯೆ ₹60 ಕೋಟಿ ವೆಚ್ಚದಲ್ಲಿ ಫಿಲ್ಟರ್ ಕೂರಿಸಲಾಗಿದೆ. ಶೇ.90 ರಷ್ಟು ಕೆಲಸ ಮುಗಿದಿದ್ದು, ಇನ್ನು ಶೇ. ಹತ್ತರಷ್ಟು ಕಾಮಗಾರಿ ಬಾಕಿಯಿದೆ ಎಂದು ಹೇಳಿದರು. ಹೆಚ್.ಡಿ.ಪುರ, ನಂದನಹೊಸೂರು, ಶಿವಗಂಗ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಪೈಪ್‍ಲೈನ್ ಅಳವಡಿಸಲಾಗಿದೆ. ಇದರಿಂದ ರೈತರ ತೋಟಗಳು ಒಣಗುವುದಿಲ್ಲ. ಮತಿಘಟ್ಟದಿಂದ ತಿರುಮಲಾಪುರದವರೆಗೆ ₹33 ಕೋಟಿ ರೂ. ವೆಚ್ಚದಲ್ಲಿ ಗುಣಮಟ್ಟದ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗುವುದು. ಇನ್ನು ಇನ್ನೂರು ವರ್ಷಗಳಾದರೂ ಈ ರಸ್ತೆ ಹಾಳಾಗುವುದಿಲ್ಲ ಎಂದು ತಿಳಿಸಿದರು.
ನಗರಘಟ್ಟ ಗ್ರಾಮದಲ್ಲಿ ₹1.2 ಕೋಟಿ ವೆಚ್ಚದಲ್ಲಿ ನೂತನ ಚೆಕ್‍ಡ್ಯಾಮ್ ಮತ್ತು ಬ್ರಿಡ್ಜ್ ಕಮ್ ಬ್ಯಾರೇಜ್, ಬೋರನಹಳ್ಳಿ ಗ್ರಾಮದಲ್ಲಿ ₹98 ಲಕ್ಷ ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆಯನ್ನು ಸಲ್ಲಿಸಿದರು.ಚಿತ್ರಹಳ್ಳಿ ದೇವರಾಜ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪರಮೇಶ್ವರಪ್ಪ, ರಂಗಸ್ವಾಮಿ, ನಾಗರಾಜ್, ತಾಲೂಕು ಪಂಚಾಯಿತಿ ಸದಸ್ಯ ದುಗ್ಗಣ್ಣ, ರಂಗಪ್ಪ, ಅಂಕಳಪ್ಪ, ಪ್ರವೀಣ್, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‍ಗಳಾದ ನಾಗರಾಜ್, ಶರಣಯ್ಯ, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.------
17ಎಚ್‌ಎಲ್ ಕೆ 3: ಗುಂಡೇರಿ ಗ್ರಾಮದಲ್ಲಿ ₹1.12ಕೋಟಿ ವೆಚ್ಚದ ಚೆಕ್‍ಡ್ಯಾಮ್ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ. ಚಂದ್ರಪ್ಪ ಭೂಮಿಪೂಜೆ ಸಲ್ಲಿಸಿದರು.