ಸಾರಾಂಶ
ಶಿವಮೊಗ್ಗ: ಸಿಗಂದೂರು ಸೇತುವೆ ಉದ್ಘಾಟನಾ ಸಮಾರಂಭದ ವೇಳೆ ಮಳೆಯಷ್ಟೇ ಜೋರಾಗಿ ಅಪಪ್ರಚಾರ ನಡೆದಿದೆ. ನಮ್ಮ ಜಿಲ್ಲೆಯ ಕೆಲವು ರಾಜಕಾರಣಿಗಳು ಸಣ್ಣತನ ಪ್ರದರ್ಶಿಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದರೆ ಲಾಂಚ್ ಸಂಚಾರಕ್ಕೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಅಧಿವೇಶನಕ್ಕೂ ಮುನ್ನವೇ ಸೇತುವೆ ಉದ್ಘಾಟನೆ ನಡೆಸಲಾಯಿತು. ಜಿಲ್ಲೆಯ ರಾಜಕಾರಣಿಗಳು ಸೇತುವೆ ನಿರ್ಮಾಣವಾದರೂ ಸಹ ಇನ್ನೂ ಏಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಅಪಪ್ರಚಾರ ಮಾಡುತ್ತಾರೆ. ಇದೇ ಕಾರಣದಿಂದಾಗಿ ಸೇತುವೆಯನ್ನು ಬೇಗ ಉದ್ಘಾಟನೆ ಮಾಡಲಾಯಿತು. ಈ ವೇಳೆ ಹತಾಶ ಮನೋಭಾವನೆಯಿಂದ ಜಿಲ್ಲೆಯ ರಾಜಕಾರಣಿಗಳು ಸಣ್ಣತನ ಪ್ರದರ್ಶನ ಮಾಡಿದ್ದಾರೆ ಎಂದು ಆರೋಪಿಸಿದರು.ಈ ಹಿಂದೆ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಸಚಿವ ಮಧು ಬಂಗಾರಪ್ಪ ಇಬ್ಬರೂ ಸೇತುವೆಯನ್ನು ವೀಕ್ಷಿಸಲು ಹೋದಾಗ ತಮಗೆ ಬಹಳ ಸಂತೋಷವಾಗಿತ್ತು. ಈಗಲಾದರೂ ಅಭಿವೃದ್ಧಿ ವಿಚಾರದಲ್ಲಿ ಸ್ಪರ್ಧೆ ಏರ್ಪಾಡು ಆಯ್ತಲ್ಲ ಎಂದು ನಾನು ಸಂತೋಷಪಟ್ಟಿದ್ದೆ, ಆದರೆ, ಇಬ್ಬರೂ ಸೇತುವೆ ವಿಚಾರದಲ್ಲಿ ಹಗುರವಾಗಿ ಮಾತನಾಡಿ ಅಪ್ಪನ ದುಡ್ಡಿನಿಂದ ಮಾಡಿಲ್ಲ, ಯಾರಪ್ಪನ ಮನೆ ದುಡ್ಡು, ಟ್ರಂಪ್ ಕರೆಸಿ, ಮೋದಿ ಕರೆಸಿ ಎಂದು ಹಗುರವಾಗಿ ಮಾತನಾಡುವ ಪ್ರಯತ್ನ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ವೈಯಕ್ತಿಕಗೊಳಿಸಿ ಮಾತನಾಡುವುದು ಸರಿಯಲ್ಲ ಎಂದು ಟೀಕಿಸಿದರು.ಹೃದಯ ಶ್ರೀಮಂತಿಕೆ ಇರುವ ಸಿಎಂ ಸಿದ್ದರಾಮಯ್ಯರನ್ನು ಜಿಲ್ಲೆಯ ಶಾಸಕರು, ಸಚಿವರು ದಾರಿ ತಪ್ಪಿಸಿದ್ದಾರೆ. ಹತಾಶ ಮನೋಭಾವದಿಂದಲೇ ಈ ರೀತಿ ಮಾಡಲಾಗಿದೆ. ಈ ಮೂಲಕ ನಮ್ಮ ಜಿಲ್ಲೆಯ ಮುಖಂಡರು ಸಿಎಂ ಅವರನ್ನೂ ಕೂಡ ಸಣ್ಣವರನ್ನಾಗಿ ಮಾಡುವ ಕೆಲಸ ಆಗಿದೆ ಎಂದು ಕುಟುಕಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ, ಶಾಸಕರಾದ ಡಿ.ಎಸ್.ಅರುಣ್, ಎಸ್.ಎನ್.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಶಿವರಾಜ್, ಮಾಲತೇಶ್, ಹರಿಕೃಷ್ಣ, ಅಣ್ಣಪ್ಪ ಕೆ.ವಿ., ಚಂದ್ರಶೇಖರ್ ಮತ್ತಿತರರಿದ್ದರು.
ಸ್ಮರಣಿಕೆಗಳನ್ನು ತೆಗೆದುಕೊಂಡು
ಹೋದ ಅಧಿಕಾರಿಗಳುಈ ಕಾರ್ಯಕ್ರಮಕ್ಕೂ ಮುನ್ನವೇ ಐಪಿಎಸ್, ಐಎಎಸ್ ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳು ನಾವು ವಾಪಸ್ ಹೋಗುತ್ತೇವೆ ಎಂದು ಹೇಳಿ ಉದ್ಘಾಟನಾ ಸಮಾರಂಭಕ್ಕೆ ತರಲಾಗಿದ್ದ ಸ್ಮರಣಿಕೆಗಳನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ಕೇಂದ್ರ ಸಚಿವರು ವಿಮಾನದ ಬಗ್ಗೆ, ಹೆಲಿಕಾಪ್ಟರ್ ಹಾರುವ ಬಗ್ಗೆ ತಲೆಕೆಡಿಸಿಕೊಂಡಿದ್ದರೆ, ನನಗೆ ಶಾಲು ಇಲ್ಲ, ಹಾರ ಇಲ್ಲ, ಮುಮೆಂಟೋ ಇಲ್ಲ ಎಂದು ಫೋನ್ ಬರುತ್ತೆ. ಆಗ ನಮ್ಮ ಮುಖಂಡರ ಮನೆಯಲ್ಲಿದ್ದ ಮುಮೆಂಟೋ, ಶಾಲು, ಹಾರ ತರಿಸಿಕೊಂಡು ಕಾರ್ಯಕ್ರಮ ಮಾಡಿದ್ದೇವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.