ಸಾರಾಂಶ
ಎಚ್.ಎನ್.ಪ್ರಸಾದ್
ಕನ್ನಡಪ್ರಭ ವಾರ್ತೆ ಹಲಗೂರುಕಾವೇರಿ ನದಿಗೆ ಹೆಚ್ಚಿನ ನೀರು ಬಿಟ್ಟಾಗಲೆಲ್ಲ ಮುತ್ತತ್ತಿ ಬಳಿ ಇರುವ ಕೆಸರಕ್ಕಿ ಹಳ್ಳ- ಸೋಜಿಗಲ್ ಹಳ್ಳಗಳೆರಡು ನೀರಿನಿಂದ ಮುಳುಗಡೆ ಆಗುತ್ತಿರುವುದರಿಂದ ಗ್ರಾಮಸ್ಥರ ಸುಗಮ ಸಂಚಾರಕ್ಕೆ ತೀವ್ರ ತೊಂದರೆ ಎದುರಾಗಿದೆ.
ಹೇಳಿಕೇಳಿ ಹಲಗೂರಿನ ಸುತ್ತಮುತ್ತಲ ಪ್ರದೇಶ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಹಲಗೂರಿನಿಂದ ಮುತ್ತತ್ತಿಗೆ ಹೋಗುವ ಮಾರ್ಗ ಮಧ್ಯ ಸಿಗುವ ಕೆಸರಕ್ಕಿ ಹಳ್ಳ ಮತ್ತು ಸಾತನೂರು ಮಾರ್ಗವಾಗಿ ಮುತ್ತತ್ತಿಗೆ ಬರುವಾಗ ಸಿಗುವ ಸೋಜಿಗಲ್ ಹಳ್ಳಗಳು ಕೆಆರ್‌ಎಸ್- ಕಬಿನಿ ಜಲಾಶಯಗಳಿಂದ ಹೆಚ್ಚಿನ ನೀರನ್ನು ಬಿಟ್ಟಾಗ ಮುಳುಗಡೆಯಾಗುತ್ತಿವೆ.ರಮ್ಯ ಮನೋಹರ, ಹಚ್ಚ ಹಸಿರಿನಿಂದ ಕೂಡಿರುವ ಪ್ರದೇಶದ ಮಧ್ಯಭಾಗದಲ್ಲಿ ಇರುವ ಮುತ್ತತ್ತಿ ಗ್ರಾಮ 500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ನಿತ್ಯ ಹಲಗೂರು ಮತ್ತು ಸಾತನೂರು ಪಟ್ಟಣಗಳಿಗೆ ನೂರಾರು ಜನರು ಸಂಚಾರ ಮಾಡುತ್ತಾರೆ. ಗ್ರಾಮದಲ್ಲಿ ನೆಲೆಸಿರುವ ಮುತ್ತತ್ತಿರಾಯ ಸ್ವಾಮಿ ರಾಜ್ಯಾದ್ಯಂತ ಅಪಾರ ಭಕ್ತಾದಿಗಳನ್ನು ಒಳಗೊಂಡಿದೆ.
ಶ್ರಾವಣ ಮಾಸ, ಧನುರ್ಮಾಸಗಳಲ್ಲಿ ಮುತ್ತತ್ತಿ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ವರ್ಷಕ್ಕೊಮ್ಮೆ ದೊಡ್ಡ ಜಾತ್ರೆಯು ಜರುಗತ್ತದೆ. ನಿತ್ಯ ನೂರಾರು ಜನರು, ಭಕ್ತರು, ಪ್ರವಾಸಿಗರು ಗ್ರಾಮಕ್ಕೆ ಬರುತ್ತಾರೆ. ಕಿರಿದಾದ ರಸ್ತೆಯಲ್ಲಿ ವಾಹನ ಸವಾರರು ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ.ಮುತ್ತತ್ತಿ ಗ್ರಾಮ ಹಲಗೂರಿನಿಂದ 22 ಕಿಲೋ ಮೀಟರ್ ಹಾಗೂ ಸಾತನೂರು ಮಾರ್ಗವಾಗಿ 20 ಕಿಮೀ ದೂರದಲ್ಲಿ ಸಿಗುತ್ತದೆ.
ಕಾವೇರಿ ನದಿಗೆ ಹೆಚ್ಚಿನ ಬಿಟ್ಟಾಗ ಮುತ್ತತ್ತಿ ಸಮೀಪದ ಕೆಸರಕ್ಕಿ ಹಳ್ಳ- ಸೋಜಿಗಲ್ ಹಳ್ಳ ಸೇತುವೆಗಳು ಅತಿ ಚಿಕ್ಕದಾಗಿ, ತಳಮಟ್ಟದಲ್ಲಿ ಇರುವುದರಿಂದ 50 ಮೀಟರ್‌ಗೂ ಹೆಚ್ಚು ಉದ್ದ ನೀರಿನಿಂದ ಜಲಾವೃತವಾಗಿ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.ಜನರು ಆರೋಗ್ಯ ಸಮಸ್ಯೆ, ಅನಿವಾರ್ಯ, ತುರ್ತು ಕಾರ್ಯನಿಮಿತ ಗ್ರಾಮಕ್ಕೆ ಹೋಗಲು ಅಥವಾ ವ್ಯಾಪಾರ ವಹಿವಾಟಿಗಾಗಿ ಪಟ್ಟಣ ಪ್ರದೇಶಗಳಿಗೆ ಬರಲು ಜನರು ಸೇತುವೆ ಮುಳುಗಿರುವ ರಸ್ತೆಯಲ್ಲೇ ನೀರಿನ ಮಧ್ಯೆ ತಮ್ಮ ವಸ್ತುಗಳನ್ನು ರಕ್ಷಿಸಿಕೊಂಡು ಬರಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ. ಕೆಲವರು ತಮ್ಮ ದ್ವಿಚಕ್ರ ವಾಹನಗಳನ್ನು ನಾಲ್ಕು ಜನರ ಸಹಾಯದಿಂದ ಎತ್ತಿ ಹಿಡಿದುಕೊಂಡು ನೀರಿನಿಂದ ಜಲಾವೃತವಾಗಿರುವ ಸೇತುವೆ ದಾಟಿ ಬರುತ್ತಿದ್ದ ದೃಶ್ಯ ಇತ್ತೀಚೆಗೆ ಕಂಡ ಬಂದಿದೆ.
ಮುತ್ತತ್ತಿ ಮಾರ್ಗವಾಗಿ ಪ್ರವಾಸಿ ತಾಣ ಕಾವೇರಿ ಫಿಸಿಂಗ್ ಕ್ಯಾಂಪ್ ಸಹ ಇದೆ. ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿ ಗ್ರಾಮಸ್ಥರು- ಪ್ರವಾಸಿಗರ ಅನುಕೂಲಕ್ಕಾಗಿ ಹೊಸದಾಗಿ ಎತ್ತರದ ಸೇತುವೆ ನಿರ್ಮಿಸಿಕೊಟ್ಟರೆ ಸಾಕಷ್ಟು ಅನುಕೂಲವಾಗುತ್ತದೆ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.ಕಾವೇರಿ ನದಿಗೆ ಹೆಚ್ಚಿನ ನೀರು ಬಿಟ್ಟಾಗ, ಭಾರೀ ಮಳೆ ಸಂದರ್ಭದಲ್ಲಿ ಕೆಸರಕ್ಕಿ ಹಳ್ಳದ ತುಂಬಿಕೊಳ್ಳುವುದರಿಂದ ನೀರನ್ನು ದಾಟಿ ಹೋಗುವುದೇ ಪ್ರಾಯಸದ ಕೆಲಸವಾಗಿದೆ. ಮುತ್ತತ್ತಿಗೆ ಹೋಗುವ ಭಕ್ತರಿಗೆ ಹಾಗೂ ಗ್ರಾಮಸ್ಥರಿಗೆ ತುಂಬಾ ತೊಂದರೆ ಆಗುತ್ತಿದೆ. ಆದಷ್ಟು ಬೇಗ ಎತ್ತರದ ಸೇತುವೆ ನಿರ್ಮಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ವಹಿಸಬೇಕು.- ರಾಜೇಶ್, ಗ್ರಾಪಂ ಸದಸ್ಯರು, ಬ್ಯಾಡರಹಳ್ಳಿ
ಕಾವೇರಿ ನದಿ ತುಂಬಿ ಹರಿಯುತ್ತಿರುವುದರಿಂದ ಮುತ್ತತ್ತಿ ರಸ್ತೆ ಕೇಸರಕ್ಕಿ ಮತ್ತು ಸೂಜೀಗಲ್ ಹಳ್ಳಗಳು ಮುಳುಗಡೆಯಾಗಿದೆ. ಕಾವೇರಿ ನದಿ ನೀರು ಕಡಿಮೆಯಾಗುವವರೆಗೂ ಈ ಸಮಸ್ಯೆ ತಪ್ಪುವುದಿಲ್ಲ. ಅಹಿತಕರ ಘಟನೆ ನಡೆಯುವುದಕ್ಕೂ ಮುಂಚಿತವಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು.- ಜಿ.ಕೆ.ನಾಗೇಶ್, ಗೊಲ್ಲರಹಳ್ಳಿ