ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಿದ ಹಲವು ಕೋಟಿ ರು.ಗಳ ಅನುದಾನವನ್ನು ಈಗಿನ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, ಜಿಲ್ಲಾ ಉಸ್ತುವಾರಿ ಸಚಿವರು ದ್ವೇಷದ, ಕೀಳುಮಟ್ಟದ ರಾಜಕಾರಣ ಬಿಟ್ಟು ಜಿಲ್ಲೆಯ ಅಭಿವೃದ್ಧಿಗಾಗಿ ಸಿಎಂ ಸಿದ್ದರಾಯ್ಯನವರ ಕೈಹಿಡಿದು ವಾಪಸ್ ಪಡೆದ ಹಣವನ್ನು ಅಭಿವೃದ್ಧಿಗೆ ಕೊಡಿಸಬೇಕು ಎಂದು ಸವಾಲು ಹಾಕಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಟೀಕೆ ಟಿಪ್ಪಣಿಗಳಿಗೆ ಅಂಕಿಅಂಶ ಸಹಿತ ಉತ್ತರ ನೀಡಿ, ಮಹತ್ವದ ಮಾಹಿತಿಯನ್ನು ಹೊರಹಾಕಿದರು.ಅನುಭಾವಿ ಅಲ್ಲಮ ಪ್ರಭು ಅವರ ಜನ್ಮ ಸ್ಥಳವಾದ ಬಳ್ಳಿಗಾವಿ ಸೇರಿದಂತೆ ಜಿಲ್ಲೆಯ ಪ್ರವಾಸೋಧ್ಯಮ ಅಭಿವೃದ್ಧಿಗೆ ನೀಡಲಾದ ಸುಮಾರು ₹36 ಕೋಟಿ ಹಣವನ್ನು ಈಗಿನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ವಾಪಸ್ ಪಡೆದಿದೆ. ಅಭಿವೃದ್ಧಿ ಕಾರ್ಯವನ್ನು ಸ್ಥಗಿತಗೊಳಿಸಿದೆ ಎಂದು ದೂರಿದರು.
ಬಳ್ಳಿಗಾವಿ ಪ್ರದೇಶದ ಅಭಿವೃದ್ಧಿಗೆ ಕೇಂದ್ರದ ಆರ್ಕಿಯಾಲಜಿಕಲ್ ಇಲಾಖೆಯಿಂದ ಪರವಾನಗಿ ಕೊಡಿಸಿದ್ದೇನೆ. ₹3 ಕೋಟಿ ಅನುದಾನ ಕೊಡಿಸಿ, ಮೊದಲ ಕಂತಿನಲ್ಲಿ ₹50 ಲಕ್ಷ ಬಿಡುಗಡೆ ಮಾಡಲಾಗಿತ್ತು. ಉಳಿದ ಹಣ ಕೊಡಿಸಬೇಕು ಎನ್ನುವಷ್ಟರಲ್ಲಿ ಈಗಿನ ಸರ್ಕಾರ ಆ ₹50 ಲಕ್ಷವನ್ನು ವಾಪಸ್ ಮಾಡುವಂತೆ ಪತ್ರ ಬರೆದಿದೆ. ಮಧು ಬಂಗಾರಪ್ಪ ಪ್ರತಿನಿಧಿಸುವ ಸೊರಬ ಕ್ಷೇತ್ರದ ಚಂದ್ರಗುತ್ತಿ ಯಾತ್ರಾ ಸ್ಥಳದ ಅಭಿವೃದ್ಧಿಗೆಂದು ಬಿಡುಗಡೆ ಮಾಡಿದ ₹1.30 ಕೋಟಿ ವಾಪಸ್ ಕೇಳಿದೆ. ಕೆಳದಿ ಅಭಿವೃದ್ಧಿಗೆ ನೀಡಿದ ₹50 ಲಕ್ಷ, ಬಂದಳಿಕೆಯ ಕದಂಬರ ಕ್ಷೇತ್ರದ ಅಭಿವೃದ್ಧಿಗೆ ₹50 ಲಕ್ಷ, ಕಡ್ಲೆ ಒಡ್ಡುಗೆ ₹1 ಕೋಟಿ, ಸಕ್ರೆಬೆಲು ಆನೆ ಬಿಡಾರದ ಅಭಿವೃದ್ಧಿಗೆ ನೀಡಿದ ₹17 ಕೋಟಿ ಅನುದಾನವನ್ನು ವಾಪಸ್ ಪಡೆಯಲು ಮುಂದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ನೈತಿಕತೆ ಇದ್ದರೆ ಮುಖ್ಯಮಂತ್ರಿ ಅವರ ಕೈ ಹಿಡಿದು, ಈ ಎಲ್ಲ ಹಣ ವಾಪಸ್ ಕೊಡಿಸಲಿ ಎಂದು ಸವಾಲು ಹಾಕಿದರು.ಇದಲ್ಲದೇ, ನೀರಾವರಿ ಕ್ಷೇತ್ರಕ್ಕೆ ನೀಡಿದ ಸುಮಾರು ₹50 ಕೋಟಿಗಳಿಗೂ ಅಧಿಕ ಹಣವನ್ನು ಕೂಡ ವಾಪಸ್ ಕೇಳುತ್ತಿದೆ. ತಮಗೆ ಯಾವುದೇ ನೈತಿಕತೆ ಇಲ್ಲದಿದ್ದರೂ ಅನಗತ್ಯ ಟೀಕೆಗಳನ್ನು ಮಾಡುತ್ತಿದ್ದಾರೆ. ಮಲೆನಾಡನ್ನು ದ್ವೇಷಿಸುತ್ತಿದ್ದಾರೆ. ಅಭಿವೃದ್ಧಿ ವಿರೋಧಿಯಾಗಿದ್ದಾರೆ ಎಂದು ಕಟುಮಾತುಗಳಲ್ಲಿ ಹೇಳಿದರು.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಾಗಲೀ, ಬಳಿಕ ಸಮ್ಮಿಶ್ರ ಸರ್ಕಾರ ಇದ್ದ ಕಾಲದಲ್ಲಾಗಲೀ ಒಂದೇ ಒಂದು ರುಪಾಯಿ ಕೂಡ ಜಿಲ್ಲೆ ಅಭಿವೃದ್ಧಿಗೆ ನೀಡದ ಈ ಸರ್ಕಾರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ನೀಡಿದ ಅನುದಾನ ವಾಪಸ್ ಪಡೆಯುತ್ತಿದೆ. ಬಳಿಕ ನಮಗೆ ನೈತಿಕತೆ ಪಾಠ ಹೇಳುತ್ತಾ, ಕೀಳು ಅಭಿರುಚಿ ಮಾತುಗಳನ್ನು ಸಚಿವರು ಆಡುತ್ತಿದ್ದಾರೆ. ಮಹಾನುಭಾವರು ಜನಿಸಿದ ನೆಲದಲ್ಲಿ, ಬಂಗಾರಪ್ಪ ಅವರಂತಹವರ ಹೊಟ್ಟೆಯಲ್ಲಿ ಹುಟ್ಟಿದವರಾಗಿ ಈ ರೀತಿ ಕೀಳು ಅಭಿರುಚಿ ರಾಜಕಾರಣ ಬಿಟ್ಟು ಅಭಿವೃದ್ಧಿಯತ್ತ ಗಮನಹರಿಸಿ ಎಂದು ಸಲಹೆ ನೀಡಿದರು.ಕಳೆದ 12 ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಸರ್ಕಾರದ ಕೊಡುಗೆ ಏನು ಎಂಬುದನ್ನು ಹೇಳಲಿ. ಮೆಡಿಕಲ್ ಕಾಲೇಜು, ಕೃಷಿ ಮತ್ತು ತೋಟಗಾರಿಕೆ ವಿವಿ, ಆಯುರ್ವೇದ ವಿವಿ, ವಿಮಾನ ನಿಲ್ದಾಣ ಪೂರ್ಣಗೊಂಡಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ರಾಷ್ಟ್ರೀಯ ಹೆದ್ದಾರಿಗೆ ₹15 ಸಾವಿರ ಕೋಟಿ ಅನುದಾನವನ್ನು ಕೇಂದ್ರದಿಂದ ತರಲಾಗಿದೆ. ಇನ್ನೂ ಹಲವಾರು ಅಭಿವೃದ್ಧಿ ಕಾಮಗಾರಿ ಜಿಲ್ಲೆಯಲ್ಲಿ ನಡೆಯುತ್ತಿದೆ ಎಂದರು. ಅಧಿಕಾರಿಗಳಿಗೆ ಧಮ್ಕಿ: ಸಚಿವರ ಧಮಕಿಗೆ ಹೆದರಿ ಬಿಎಸ್ಎನ್‌ಎಲ್ ಟವರ್ ಹಾಕಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಕಾಮಗಾರಿಗೆ ಹಿನ್ನಡೆಯಾಗಿದೆ. ಆದರೂ 40 ಟವರ್ ಅಳವಡಿಸಲು ಅರಣ್ಯ ಇಲಾಖೆಯಿಂದ ಎನ್‌ಒಸಿ ಕೊಡಿಸಲಾಗಿದೆ. ಅಧಿಕಾರಿಗಳಿಗೆ ಹೆದರಿಸುವುದು ಬಿಟ್ಟು, ಜಿಲ್ಲೆಗೆ ಬೇಕಾದ ಯೋಜನೆಗಳನ್ನು ತರುವುದರತ್ತ ಗಮನ ನೀಡುವುದು ಉತ್ತಮ ಎಂದರು.
ಸುದ್ದಿಗೋಷ್ಟಿಯಲ್ಲಿ ಶಾಸಕ ಚನ್ನಬಸಪ್ಪ ಮತ್ತಿತರರು ಇದ್ದರು.- - - ಬಾಕ್ಸ್-1 ಸೇತುವೆ ಉದ್ಘಾಟನೆ ಮಾಡಿಲ್ಲಸಂಸದನಾಗಿ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಯನ್ನು ನಡೆಸುತ್ತೇನೆ. ನಾವೇ ಆರಂಭಿಸಿದ ಕಾಮಗಾರಿಗಳಿಗೆ ರಿಬ್ಬನ್ ಕಟ್ ಮಾಡುತ್ತೇವೆಯೇ ಹೊರತು, ಬೇರೆಯವರು ಮಾಡಿದ್ದಕ್ಕೆ ರಿಬ್ಬನ್ ಕಟ್ ಮಾಡುವ ಸಣ್ಣತನ ನನಗಿಲ್ಲ. ಯಾರೋ ಮಾಡಿದ ಕೆಲಸವನ್ನು ನಮ್ಮದೆಂದು ಹೇಳಿಕೊಳ್ಳುವ ದಾರಿದ್ರ್ಯ ನನಗೆ ಬಂದಿಲ್ಲ. ಅಷ್ಟಲ್ಲದೇ, ಸೇತುವೆ ಉದ್ಘಾಟನೆಯನ್ನು ಮಾಡಿಲ್ಲ, ಬದಲಾಗಿ ಪರಿಶೀಲನೆ ಮಾತ್ರ ನಡೆಸಿದ್ದೇನೆ. ಇದನ್ನು ತಿಳಿಯದೇ, ಸಚಿವ ಮಧು ಬಂಗಾರಪ್ಪ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
- - - ಬಾಕ್ಸ್-2ಫ್ರೀಡಂ ಪಾರ್ಕ್ ಆಗಿದ್ದು ಬಿಎಸ್‌ವೈ ಕಾಲದಲ್ಲಿ
ಯುವನಿಧಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಾವೇ ಫ್ರೀಡಂ ಪಾರ್ಕ್ ಅಭಿವೃದ್ಧಿ ಮಾಡಿದ್ದಾಗಿ ಹೇಳಿದ್ದಾರೆ. ಪಕ್ಕದಲ್ಲಿ ಕಿವಿ ಊದುವವರು ಅವರಿಗೆ ತಪ್ಪಾಗಿ ಹೇಳಿ ಸಿಎಂಗೆ ಮುಜುಗರ ಮಾಡಿದ್ದಾರೆ. ಅದು ಯಡಿಯೂರಪ್ಪನವರ ಕಾಲದಲ್ಲಿ ಆಗಿದ್ದು. ಹೊಸದಾಗಿ 50 ಎಕರೆ ಜಾಗದಲ್ಲಿ ನಿರ್ಮಿಸಿದ ನೂತನ ಜೈಲಿಗೆ ಹಳೇ ಜೈಲನ್ನು ಸ್ಥಳಾಂತರ ಮಾಡಿ, 24 ಗಂಟೆಗಳಲ್ಲಿ ಯಡಿಯೂರಪ್ಪ ಆದೇಶ ಮಾಡಿದ್ದರು ಎಂದು ತಿಳಿಸಿದರು.- - - -ಫೋಟೋ:
ಶಿವಮೊಗ್ಗದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.