ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ

| Published : Apr 03 2024, 01:30 AM IST

ಸಾರಾಂಶ

ಈ ಬಾರಿಯ ಲೋಕಸಭಾ ಚುನಾವಣೆ ಧರ್ಮಯುದ್ಧವಾಗಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ದೇಶದ ಸರ್ವತೋಮುಖ ಅಭಿವೃದ್ಧಿ ಮತ್ತು ಸಾಮರಸ್ಯದ ಸೌಹಾರ್ದಯುತ ಭಾರತ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್ ಚನ್ನಗಿರಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಚನ್ನಗಿರಿ

ಈ ಬಾರಿಯ ಲೋಕಸಭಾ ಚುನಾವಣೆ ಧರ್ಮಯುದ್ಧವಾಗಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ದೇಶದ ಸರ್ವತೋಮುಖ ಅಭಿವೃದ್ಧಿ ಮತ್ತು ಸಾಮರಸ್ಯದ ಸೌಹಾರ್ದಯುತ ಭಾರತ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ ಉದ್ದೇಶದಿಂದ 6ರಂದು ಪಟ್ಟಣದ ಜವಳಿ ಸಮುದಾಯ ಭವನದಲ್ಲಿ ಪಕ್ಷದ ಕಾರ್ಯಕರ್ತರು, ಎಲ್ಲ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಜಿ.ಪಂ, ತಾ.ಪಂ, ಗ್ರಾ.ಪಂ.ಗಳ ಎಲ್ಲ ಚುನಾಯಿತ ಸದಸ್ಯರು, ಮಾಜಿ ಸದಸ್ಯರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಸಭೆಗೆ ಕ್ಷೇತ್ರದ 250 ಬೂತ್‌ಗಳಿಂದಲೂ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ದೇಶದಲ್ಲಿ ಸಂವಿಧಾನದ ಉಳಿವಿಗಾಗಿ, ನಿರುದ್ಯೋಗ ನಿವಾರಣೆಗಾಗಿ ಸಾಮಾನ್ಯರು ಎದುರಿಸುತ್ತಿರುವ ಬೆಲೆ ಏರಿಕೆ ಹೊರೆ ನೀಗಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ ಮತಗಳಿಗಿಂತ ಹೆಚ್ಚಿನ ಮತಗಳನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಕೊಡಿಸಲು ಕ್ಷೇತ್ರದ ಎಲ್ಲ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಲಿದ್ದಾರೆ ಎಂದರು.

ಕ್ಷೇತ್ರದಲ್ಲಿ ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಶಾಸಕ ಶಿವಗಂಗಾ ವಿ.ಬಸವರಾಜ್, ಹೊದಿಗೆರೆ ರಮೇಶ್, ವಡ್ನಾಳ್ ಜಗದೀಶ್, ವೀರೇಶ್ ನಾಯ್ಕ್ ಇನ್ನು ಅನೇಕ ಮುಖಂಡರ ನೇತೃತ್ವದಲ್ಲಿ ಸಾಮೂಹಿಕ ನಾಯತ್ವದಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟನೆ ಮಾಡಲಾಗುವುದು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ನಿಶ್ಚಿತವಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜಬೀಉಲ್ಲಾ, ಅಮಾನುಲ್ಲಾ, ಹೊದಿಗೆರೆ ರಮೇಶ್, ವಡ್ನಾಳ್ ಜಗದೀಶ್, ಸಂತೆಬೆನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಬೀಉಲ್ಲಾ, ಪಾಂಡೋಮಟ್ಟಿ ಲೋಕಣ್ಣ, ಸಿ.ನಾಗರಾಜ್, ವೀರೇಶ್ ನಾಯ್ಕ್, ಜಿ.ನಿಂಗಪ್ಪ, ಗೌಸ್ ಪೀರ್, ತನ್ವೀರ್, ತಾಪಂ ಮಾಜಿ ಸದಸ್ಯ ಶ್ರೀಕಾಂತ್, ಜಗದೀಶ್ ಹಾಜರಿದ್ದರು.

- - -

ಕೋಟ್‌ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ವಂಚಿತ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಅವರ ಅಸಮಾಧಾನ ಶಮನ ಮಾಡಲು ಈಗಾಗಲೇ ಕಾಂಗ್ರೆಸ್ ರಾಜ್ಯಮಟ್ಟದ ನಾಯಕರು ವಿನಯಕುಮಾರ್ ಬಳಿ ಮಾತನಾಡಿದ್ದಾರೆ. ಮುಂದಿನ ಎರಡು ಮೂರು ದಿನಗಳಲ್ಲಿ ಅಸಮಾಧಾನ ಶಮನಗೊಂಡು ಅವರು ನಮ್ಮೊಂದಿಗೆ ಪಕ್ಷಸಂಘಟನೆಯಲ್ಲಿ ತೊಡಗಿಕೊಳ್ಳುವ ವಿಶ್ವಾಸ ವಿದೆ

- ಸಿ.ಎಚ್. ಶ್ರೀನಿವಾಸ್, ತಾಲೂಕು ಅಧ್ಯಕ್ಷ, ಕಾಂಗ್ರೆಸ್‌

- - - -2ಕೆಸಿಎನ್‌ಜಿ2: ತಾಲೂಕು ಕಾಂಗ್ರೆಸ್ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.