ಸಾರಾಂಶ
ಕನ್ನಡಪ್ರಭ ವಾರ್ತೆ ತಿಕೋಟಾ
ಈ ಭೂಮಿ ಮೇಲೆ ಜನ್ಮತಾಳಿದ ಪ್ರತಿ ಮಗುವಿನಲ್ಲೂ ಒಂದಲ್ಲ ಒಂದು ರೀತಿಯ ಕೌಶಲ, ಪ್ರತಿಭೆ ಇರುತ್ತದೆ. ಅದನ್ನು ಹೊರ ತರುವಲ್ಲಿ ಈ ಸಮಾಜ ವಿಫಲವಾದಾಗ ಮಾತ್ರ ಆ ಮಗು ದಡ್ಡನೆನಿಸಿಕೊಳ್ಳುತ್ತಾನೆ. ಆದಕಾರಣ, ಮಕ್ಕಳಲ್ಲಿರುವ ವಿಶೇಷ ಪ್ರತಿಭೆ ಹೊರ ತರಲು ಈ 3 ದಿನಗಳ ಶಿಬಿರ ಅನುಕೂಲವಾಗಿದೆ ಎಂದು ಇಒ ಪ್ರವೀಣಕುಮಾರ ಸಾಲಿ ಹೇಳಿದರು.ತಾಲೂಕಿನ ಬಾಬಾನಗರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಗ್ರಾಮ ಪಂಚಾಯತಿ ಬಾಬಾನಗರ ಸಹಯೋಗದಲ್ಲಿ 3 ದಿನಗಳ ಕಾಲ ಜರುಗಿದ ಮಕ್ಕಳ ಸಾಹಿತ್ಯ ಸಂಭ್ರಮ-2024ರ ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ಅಭಿನಂದನಾ ಪತ್ರ ವಿತರಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಅಡಗಿರುವ ನಿಜವಾದ ಪ್ರತಿಭೆ ಹೊರಹಾಕಲು ಈ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ಉತ್ತಮ ವೇದಿಕೆಯಾಗಿ ಪರಿಣಮಿಸಿದೆ. ವಿಶೇಷವಾಗಿ ಗ್ರಾಮಿಣ ಭಾಗದ ಸರ್ಕಾರಿ ಶಾಲೆಯ ಮಕ್ಕಳಿಗೆ ಇದು ವರದಾನವಾಗಿದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯರಾದ ಸಿದ್ಧಗೊಂಡ ರುದ್ರಗೌಡರ ಮಾತನಾಡಿ, ಈ 3 ದಿನಗಳ ಶಿಬಿರವನ್ನು ನಮ್ಮ ಗ್ರಾಮದಲ್ಲಿ ಆಯೋಜಿಸಿರುವುದರಿಂದ ನಮ್ಮ ಗ್ರಾಮದ ಮಕ್ಕಳಿಗೆ ಅಷ್ಟೇ ಅಲ್ಲದೇ ಸುತ್ತ-ಮುತ್ತಲಿನ ಸರ್ಕಾರಿ ಶಾಲೆ ಮಕ್ಕಳಿಗೆ ತುಂಬಾ ಅನುಕೂಲವಾಗಿದೆ. ಮಕ್ಕಳಲ್ಲಿನ ವಿಶೇಷ ಪ್ರತಿಭೆ ಗುರುತಿಸುವ ಜೊತೆಗೆ ಅದನ್ನು ಹೊರ ಹಾಕಲು ವೇದಿಕೆ ಕಲ್ಪಿಸಿದ ಎಲ್ಲ ಅಧಿಕಾರಿಗಳಿಗೆ ಗ್ರಾಮದ ಪರವಾದಿ ವಂದನೆ ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಶಹರಾಬಾನು ಎಳಾಪುರ, ಉಪಾಧ್ಯಕ್ಷ ಅಶೋಕ ಐ.ರುದ್ರಗೌಡರ, ಪಿಡಿಒ ರೇಣುಕಾ ಆರ್. ಸೊಲ್ಲಾಪುರ, ಜ್ಞಾನ ವಿಜ್ಞಾನ ಸಮಿತಿಯ ಸುಮಾ ಚೌದರಿ, ಕಾರ್ಯಕ್ರಮದ ಸಂಯೋಜಕ ಬೀರಪ್ಪ ಖಂಡೇಕಾರ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಮಂಜುನಾಥ ಯ.ಹೊನಕಟ್ಟಿ, ಯಲ್ಲಾಲಿಂಗ ಹೊನವಾಡ, ಜೋತಿಂದ್ರ ಆಯತವಾಡ, ಅಕ್ಬರ್ ಮುಲ್ಲಾ, ಜಿ.ಟಿ.ಕಾಗವಾಡ, ಬಿ.ಎಸ್.ಕುಮಠಗಿ, ಎಲ್.ಟಿ.ಮುಲ್ಲಾ, ಎಸ್.ಐ.ಬಾಗಲಕೋಟ, ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ನಂದಾ.ಎಸ್.ತಿಕೋಟಿ, ಎಂ.ಎಸ್.ಮಠಪತಿ, ರಮೇಶ ಎಂ.ಅರಕೇರಿ, ಎಂ.ವೈ.ಧನಗೊಂಡ, ಐ.ಎ.ತೇಲಿ, ಎಂ.ಐ.ಮುಲ್ಲಾ ಉಪಸ್ಥಿತರಿದ್ದರು.
ಗಮನ ಸೆಳೆದ ಪ್ರದರ್ಶನ: ಮಕ್ಕಳು ಮೂರು ದಿನಗಳವರೆಗೆ ಸ್ವರಚಿತ ಕಥೆ, ಕವನ, ನಾಟಕ ಹಾಗೂ ಸಂದರ್ಶನದ ವರದಿಗಳನ್ನು ಪ್ರದರ್ಶನ ಮಾಡಿದರು. ಸಮಾರಂಭದಲ್ಲಿ ಹಾಜರಿದ್ದ ಎಲ್ಲ ಅಧಿಕಾರಿಗಳಿಗೆ, ಗಣ್ಯರಿಗೆ ಹಾಗೂ ಮಕ್ಕಳಿಗೆ ಸ್ವಾಗತಿಸಲು ಬಳಸುವ ಹೂವುಗಳು, ತಲೆಗೆ ಕ್ಯಾಪ್ ಹಾಗೂ ಕಿಸೆಗೆ ಧರಿಸುವ ಬಿಲ್ಲೆಗಳನ್ನು ಸಹ ಮಕ್ಕಳು ತಮ್ಮ ಕೈಯಿಂದ ಪೇಪರ್‌ನಲ್ಲಿ ಮಾಡಿರುವು ಹೆಚ್ಚು ಆಕರ್ಷಣಿಯವಾಗಿತ್ತು.ಮಕ್ಕಳಲ್ಲಿ ವಿವಿಧ ರೀತಿಯ ಆಸಕ್ತಿ ಇರುತ್ತದೆ. ವಿಶೇಷವಾಗಿ ಕಲೆ, ನಾಟಕ, ಕವನ, ಪತ್ರಿಕಾ ವರದಿಗಾರ ಹೀಗೆ ಹಲವಾರು ಸಾಹಿತ್ಯಾಭಿರುಚಿಯನ್ನು ಹೊರ ಹಾಕಲು ಈ ಕಾರ್ಯಕ್ರಮ ಅನುಕೂಲವಾಗಿ ಪರಿಣಮಿಸಿದೆ. ಈ ಕಾರ್ಯಕ್ರಮದಲ್ಲಿ ಕಲಿತಿರುವ ವಿಷಯಗಳನ್ನು ಮಕ್ಕಳು ಇಲ್ಲಿಗೆ ಬಿಡದೇ ಪ್ರತಿ ನಿತ್ಯ ತಮ್ಮ-ತಮ್ಮ ಶಾಲೆಗಳಲ್ಲಿ ಸಹಪಾಠಿಗಳ ಜೊತೆ ಅಧ್ಯಯನ ಮಾಡಬೇಕು.
-ಪ್ರವೀಣಕುಮಾರ ಸಾಲಿ, ತಾಪಂ ಇಒ.