ಕೆಲವೇ ತಿಂಗಳುಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆಯಲಿವೆ. ಬೇರು ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಭದ್ರವಾಗಿ ನಿಲ್ಲಬೇಕಿದೆ. ಹೀಗಾಗಲು ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಬೇಕು ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದ್ದಾರೆ.
- ಚನ್ನಗಿರಿಯಲ್ಲಿ ಕಾಂಗ್ರೆಸ್ನಿಂದ ಸಂಘಟನ್ ಸೃಜನ ಅಭಿಯಾನ-2 ಕಾರ್ಯಕ್ರಮ ಉದ್ಘಾಟನೆ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಕೆಲವೇ ತಿಂಗಳುಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆಯಲಿವೆ. ಬೇರು ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಭದ್ರವಾಗಿ ನಿಲ್ಲಬೇಕಿದೆ. ಹೀಗಾಗಲು ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಬೇಕು ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದರು.ಬುಧವಾರ ಪಟ್ಟಣದ ಹೊರವಲಯದ ಶ್ರೀ ಮೌದ್ಗಲ್ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ತಾಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಂಘಟನ್ ಸೃಜನ ಅಭಿಯಾನ-2 ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ, ಕಾರ್ಯಕರ್ತರ ಉದ್ದೇಶಿಸಿ ಅವರು ಮಾತನಾಡಿದರು. ಈ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಪಕ್ಷವನ್ನು ಗಟ್ಟಿಗೊಳಿಸುವಂತಹ ಚುನಾವಣೆಗಳಾಗಿವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿ ಸ್ಥಳೀಯ ಸಂಸ್ಥೆಯ ಅಧಿಕಾರವನ್ನು ಹಿಡಿಯಬೇಕು ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಪಡೆದುಕೊಂಡು ವಿಸಿಟಿಂಗ್ ಕಾರ್ಡ್ ಮಾಡಿಸಿಕೊಂಡು ತಿರುಗುವಂತಹ ನಾಯಕರನ್ನು ಪಕ್ಷ ಒಪ್ಪುವುದಿಲ್ಲ. ಅಧಿಕಾರ ಹಿಡಿಯಲೇ ಬೇಕು ಎಂದು ಶಾಸಕರು ಸಂಸದರು ಪಕ್ಷದ ನಾಯಕರ ಹಿಂದೆ ಸುತ್ತಿದರೆ ಯಾವುದೇ ಪ್ರಯೋಜನವಿಲ್ಲ. ಕಾಂಗ್ರೆಸ್ ಪಕ್ಷಕ್ಕಾಗಿ ಅನೇಕ ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಮಾಡಿದಂತವರನ್ನು ಪಕ್ಷವು ಗುರುತಿಸಲಿದೆ ಎಂದರು.ಶಿಕ್ಷಕರ ಮತ್ತು ಪದವೀಧರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ 4 ಸ್ಥಾಗಳಲ್ಲಿಯೋ ನಮ್ಮ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಿದ್ದಾರೆ. ಆದರೂ ಬುದ್ಧಿವಂತ ಮತದಾರರು ಅಂತವರನ್ನು ಗೆಲ್ಲಿಸಿದ್ದಾರೆಂದರೆ ನಮ್ಮಲ್ಲಿ ಸಂಘಟನೆ ಕೊರತೆ ಇದೆ ಎನ್ನುವುದನ್ನು ತಿಳಿಯಬೇಕಾಗಿದೆ ಎಂದರು.
ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು ದೇಶದ ಸಾಲ ₹52 ಲಕ್ಷ ಕೋಟಿ ಇತ್ತು, ಅದು ಇಂದು ₹216.98 ಲಕ್ಷ ಕೋಟಿ ಆಗಿದೆ. ರಾಜ್ಯದಲ್ಲಿ ಎಸ್.ಐ.ಆರ್. ಹೆಸರಿನಲ್ಲಿ 99 ಲಕ್ಷ ಮತದಾರರನ್ನು ಕೈ ಬಿಡಲಾಗಿದೆ. ಮೋದಿ ಅವರನ್ನು ಅಧಿಕಾರದಿಂದ ಇಳಿಸಲು ಕಾಂಗ್ರೆಸ್ ಕಾರ್ಯಕರ್ತರು ಸಂಘಟಿತರಾಗಬೇಕು ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಪ್ರಸನ್ನಕುಮಾರ್ ಮಾತನಾಡಿ, ಈ ಹಿಂದೆ ದೇಶದ ಪ್ರಧಾನ ಮಂತ್ರಿಗಳಾಗಿದ್ದ ಇಂದಿರಾ ಗಾಂಧಿ ಇರುವವರೆಗೆ ಪಕ್ಷದಿಂದ ಯಾರೇ ಸ್ಫರ್ಧೆ ಮಾಡಿದರೂ ಗೆಲುವು ಸಾಧಿಸುತ್ತಿದ್ದರು. ಇಂದು ಕಾಲ ಬದಲಾಗಿದ್ದು, ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿದೆ. ಆದರೂ, ಜನರು ಅದನ್ನು ಮರೆತು ಹೋಗುತ್ತಿದ್ದಾರೆ. ಜನತೆಗೆ ಸರ್ಕಾರದ ಯೋಜನೆಗಳನ್ನು ತಿಳಿಸುವಂತಹ ಕೆಲಸ ಮೊದಲು ಆಗಬೇಕಾಗಿದೆ. ಪಕ್ಷದ ಸಂಘಟನೆಗಾಗಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವಂತಹ ಯುವಪಡೆ ಬೇಕಾಗಿದೆ ಎಂದರು.
ಸಮಾರಂಭದಲ್ಲಿ ಜೀವ ವೈವಿಧ್ಯ ನಿಗಮದ ಅಧ್ಯಕ್ಷ ವಡ್ನಾಳ್ ಜಗದೀಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ಕಲೀಲ್, ಕಾಂಗ್ರೆಸ್ ವಕ್ತಾರ ಹೊದಿಗೆರೆ ರಮೇಶ್, ಸಿ.ಎಚ್.ಶ್ರೀನಿವಾಸ್, ಜಬೀಉಲ್ಲಾ, ಪಕ್ಷದ ಮುಖಂಡರಾದ ಬಿ.ಎನ್.ವೀರೇಶ್ ನಾಯ್ಕ್, ಸಿ.ನಾಗರಾಜ್, ಜ್ಯೋತಿ ಕೋರಿ, ಅಮಾನುಲ್ಲಾ, ಪಾಂಡೋಮಟ್ಟಿ ಲೋಕಣ್ಣ, ಸವಿತಾ, ಪ್ರಕಾಶ್, ಅನಿತಾ ಕುಮಾರಿ, ಜೋಳದಾಳ್ ಕುಮಾರ್, ಜಿತೇಂದ್ರರಾಜ್, ಜಿ.ನಿಂಗಪ್ಪ, ಪಕ್ಷದ ಕಾರ್ಯಕರ್ತರು ಹಾಜರಿದ್ದರು.- - -
(ಕೋಟ್) ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ 2028ರಲ್ಲಿಯೂ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಶಾಸಕರು ಸಂಸದರು ಮಾತ್ರವಲ್ಲದೆ, ಪಕ್ಷದ ಕಾರ್ಯಕರ್ತರ ಪ್ರಾಮಾಣಿಕವಾದ ಕೆಲಸದಿಂದ ಮಾತ್ರ ಸಾಧ್ಯವಾಗಲಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಆಸಕ್ತಿ ಇರುವಂತಹ ಎಲ್ಲರೂ ಅರ್ಜಿಯನ್ನು ಸಲ್ಲಿಸಬೇಕು. ಅದನ್ನು ಪಕ್ಷದ ಹೈಕಮಾಂಡ್ಗೆ ಕಳಿಸಿಕೊಡಲಾಗುವುದು.- ಬಸವರಾಜು ವಿ. ಶಿವಗಂಗಾ, ಶಾಸಕ.
- - --28ಕೆಸಿಎನ್ಜಿ1:
ಚನ್ನಗಿರಿ ಪಟ್ಟಣದ ಹೊರವಲಯದ ಶ್ರೀ ಮೌದ್ಗಲ್ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ತಾಲೂಕು ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಸಂಘಟನ್ ಸೃಜನ ಅಭಿಯಾನ-2 ಕಾರ್ಯಕ್ರಮವನ್ನು ಮಾಜಿ ಸಂಸದ ಉಗ್ರಪ್ಪ ಉದ್ಘಾಟಿಸಿದರು. ಶಾಸಕ ಬಸವರಾಜು ವಿ. ಶಿವಗಂಗಾ ಮೊದಲಾದವರು ಇದ್ದಾರೆ.