ಸಾರಾಂಶ
- ಜಿಲ್ಲಾ ಎಸ್‌ಪಿ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆ ಜನರಿಂದ ದೂರುಗಳ ಸುರಿಮಳೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಸಂಚಾರ ನಿಯಮ ಉಲ್ಲಂಘಿಸುವವರು, ಅತಿ ವೇಗ, ಅಜಾಗರೂಕತೆಯ ವಾಹನ ಚಾಲನೆ ಮಾಡುವವರಿಗೆ ಬ್ರೇಕ್ ಹಾಕಿ.. ಮರಳು, ಜಲ್ಲಿ, ಎಂ ಸ್ಯಾಂಡ್ ತುಂಬಿಕೊಂಡು ಹೋಗುವ ಲಾರಿಗಳಿಗೆ ಪಾಟುಗಳನ್ನು ಹಾಕಲು ಕ್ರಮ ಕೈಗೊಳ್ಳಿ.. ಸ್ಪೀಡ್ ಬ್ರೇಕರ್ಸ್ ಅಳವಡಿಸಿ.. ಬೇಕಾಬಿಟ್ಟಿ ವಾಹನ ನಿಲ್ಲಿಸುವವ ವಿರುದ್ಧ ಕ್ರಮ ಜರುಗಿಸಿ.. ಬಾರ್ ಅಂಡ್ ರೆಸ್ಟೋರೆಂಟ್, ನಾನ್ ವೆಜ್ ಹೋಟೆಲ್‌ಗಳ ಹಾವಳಿಯಿಂದಾಗಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವವರಿಂದ ಆಗುತ್ತಿರುವ ತೀವ್ರ ಸಮಸ್ಯೆಗಳ ತಪ್ಪಿಸಿ...ಇವು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ನಡೆಸಿದ ಫೋನ್-ಇನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ, ಯುವಜನರು, ಮಹಿಳೆಯರು, ಹಿರಿಯ ನಾಗರೀಕರು, ವಿಶೇಷಚೇತನರು, ಬಡವವರು, ಉದ್ಯೋಗಿ-ನಿರುದ್ಯೋಗಿಗಳು ಹೇಳಿಕೊಂಡ ಅಹವಾಲು, ಸಮಸ್ಯೆ, ಸಲಹೆಗಳು.
ವಿದ್ಯಾರ್ಥಿಯೊಬ್ಬ ಮಾತನಾಡಿ, ಸರ್ಕಾರಿ ವಾಹನಗಳ ಚಾಲಕರೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿಸುತ್ತಿದ್ದಾರೆ. ಪೊಲೀಸ್ ಸಮವಸ್ತ್ರ ಧರಿಸದೇ, ವಾಹನಗಳನ್ನು ನಿಲ್ಲಿಸಿ, ಕೇಸ್ ದಾಖಲಿಸುವುದಾಗಿ ಬೆದರಿಸುತ್ತಿದ್ದಾರೆ. ಎಂ-ಸ್ಯಾಂಡ್, ಮರಳು, ಸಿಮೆಂಟ್ ಸಾಗಿಸುವ ಲಾರಿಗಳು ಪಾಟುಗಳನ್ನು ಮುಚ್ಚದೇ ಸಂಚರಿಸುತ್ತಿವೆ ಎಂದರು. ಜಗಳೂರು ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನ ಸವಾರರು ಎಲ್ಲೆಂದರಲ್ಲಿ ವಾಹನಗಳ ನಿಲ್ಲಿಸಿ, ಸಂಚಾರ ವ್ಯವಸ್ಥೆಗೆ ಅಡ್ಡಿ ಮಾಡುತ್ತಿದ್ದಾರೆ. ಪಾರ್ಕಿಂಗ್ ವ್ಯವಸ್ಥೆ ಸಹ ಇಲ್ಲ. ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಸಹ ಧರಿಸುವುದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಗಳೂರು ನಿವಾಸಿ ಮನವಿ ಮಾಡಿದರು. ನ್ಯಾಮತಿ ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ, ಈ ಹಿಂದೆ ಕಳುವಾಗಿ ಪತ್ತೆಯಾದ ತಮ್ಮ ಬಂಗಾರವನ್ನೇ ಇನ್ನೂ ಹಿಂದಿರುಗಿಸಿಲ್ಲವೆಂದು ಗ್ರಾಹಕರೊಬ್ಬರು ದೂರಿದರು. ಇಷ್ಟೇ ಅಲ್ಲದೇ, ಇನ್ನೂ ಹಲವಾರು ಅವ್ಯವಸ್ಥೆಗಳ ವಿರುದ್ಧ ನಾಗರಿಕರು ಎಸ್‌ಪಿ ಅವರಿಗೆ ದೂರುಗಳ ಸುರಿಮಳೆಗರೆದರು.ಇದೇ ವೇಳೆ ಮಾತನಾಡಿದ ಎಸ್‌ಪಿ ಉಮಾ ಪ್ರಶಾಂತ, ಅಂಬೇಡ್ಕರ್ ವೃತ್ತದ ಸಿಂಗ್ನಲ್ ಸ್ಟಾಪ್ ಆಗುತ್ತಿಲ್ಲ. ಅಕ್ಕ ಮಹಾದೇವಿ ಒಮ್ಮುಖ ರಸ್ತೆಯಲ್ಲಿ ಎದುರಿನಿಂದ ಸಾಕಷ್ಟು ದ್ವಿಚಕ್ರ ವಾಹನ, ನಾಲ್ಕು ಚಕ್ರಗಳ ವಾಹನ ಸಂಚಾರ ಮಾಡುತ್ತಿರುವ ಬಗ್ಗೆ ದೂರು ಬಂದಿದೆ. ಹರಳೆಣ್ಣೆ ಕೊಟ್ರ ಬಸಪ್ಪ ವೃತ್ತ ಮತ್ತು ಫುಟ್ ಪಾತ್ ಒತ್ತುವರಿ ಮಾಡಿ, ಅಂಗಡಿ ಮಾಡಿಕೊಂಡಿರುವುದು. ರಸ್ತೆಯ ಎರಡೂ ಬದಿ ವಾಹನ ನಿಲ್ಲಿಸಿರುವ ಬಗ್ಗೆ ದೂರು ಬಂದಿವೆ. ಸಂಚಾರ ಪೊಲೀಸರು ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತಾರೆ ಎಂದರು.
ಕೆ.ಆರ್. ರಸ್ತೆಯ ಪಾರ್ಕಿಂಗ್ ಸ್ಥಳದಲ್ಲಿ ಹಣ್ಣು, ತರಕಾಗಿ ಮಾರುವವರು ಗಾಡಿ ನಿಲ್ಲಿಸಿ, 4 ಚಕ್ರ ವಾಹನಗಳ ನಿಲ್ಲಿಸುವ ಸ್ಥಳದಲ್ಲಿ ದ್ವಿಚಕ್ರ ವಾಹನ ನಿಲ್ಲಿಸುತ್ತಾರೆ. ಒಂದೇ ಕಡೆ ವಾಹನ ಪಾರ್ಕಿಂಗ್ ಮಾಡುವುದಿಲ್ಲವೆಂಬ ದೂರು ಬಂದಿದೆ. ಹಳೆ ಜೀಪುಗಳನ್ನು ವಿನೋಬ ನಗರ 1ನೇ ಮುಖ್ಯರಸ್ತೆ ಮಾಚಿದೇವ ಸಮುದಾಯ ವನದ ಬಳಿ ನಿಲ್ಲಿಸಿದ್ದಾರೆ. ಈ ಬಗ್ಗೆಯೂ ಪರಿಶೀಲಿಸಲಾಗುವುದು. ಮಾಮಾಸ್ ಜಾಯಿಂಟ್ ಬಳಿ, ಪಿ.ಜೆ. ಬಡಾವಣೆ ಬಾಣಾಪುರ ಮಠ ಆಸ್ಪತ್ರೆ, ವಿಶ್ವೇಶ್ವರಯ್ಯ ಪಾರ್ಕ್ ರಸ್ತೆಗಳಲ್ಲಿ ವಾಹನ ಪಾರ್ಕ್ ಮಾಡುವುದಾಗಿ, ಪ್ರಮುಖ ಸರ್ಕಲ್‌ಗಳ ಸಿಗ್ನಲ್‌ಗಳ ಸೆಕೆಂಡ್ ಅವಧಿ ಮತ್ತು ದ್ವಿಚಕ್ರ ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸಿ, ವಾಹನಗಳನ್ನು ಓಡಿಸುತ್ತಿದ್ದು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಆಟೋ, ಒಮಿನಿ ವಾಹನಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಶಾಲಾ ಮಕ್ಕಳನ್ನು ಕುರಿಸಿಕೊಂಡು ವೇಗವಾಗಿ ಹಾರ್ನ್ ಸಹ ಮಾಡದೇ, ಯಾವುದೇ ಜಾಗ್ರತೆ ವಹಿಸದೇ ಇರುವುದು, ಎಲೆಬೇತೂರು ಗ್ರಾಮದಲ್ಲಿ ಶಾಲೆ ಪಕ್ಕದಲ್ಲೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಸಣ್ಣ ಮಕ್ಕಳು ಕುಡಿದು ಮದ್ಯವನ್ನು ಕಳವು ಮಾಡುತ್ತಿರುವುದಾಗಿ ಕೆಲವರು ದೂರಿದ್ದಾರೆ. ನಗರ, ಗ್ರಾಮಾಂತರ ಡಿವೈಎಸ್ಪಿಗಳು, ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಂಡು ವರದಿ ನೀಡಲು ಸೂಚನೆ ನೀಡುತ್ತೇನೆ ಎಂದು ಎಸ್‌ಪಿ ಅವರು ಪ್ರತಿಕ್ರಿಯಿಸಿದರು.
ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ, ನಗರ ಡಿವೈಎಸ್ಪಿ ಬಿ.ಶರಣ ಬಸವೇಶ್ವರ, ಪೊಲೀಸ್ ನಿರೀಕ್ಷಕಿ ತೇಜಾವತಿ, ಪಿಎಸ್‌ಐಗಳಾದ ಅರವಿಂದ, ರವೀಂದ್ರ ಕಾಲಭೈರವ, ಮಹಾದೇವ ಭತ್ತೆ, ನಿರ್ಮಲ ಇತರೆ ಅಧಿಕಾರಿ, ಸಿಬ್ಬಂದಿ ಪೋನ್-ಇನ್ ಕಾರ್ಯಕ್ರಮದ ವೇಳೆ ಇದ್ದರು.- - -
-12ಕೆಡಿವಿಜಿ6, 7, 8.ಜೆಪಿಜಿ:ದಾವಣಗೆರೆ ಎಸ್‌ಪಿ ಕಚೇರಿಯಲ್ಲಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಪೋನ್-ಇನ್ ಕಾರ್ಯಕ್ರಮದಲ್ಲಿ ಜನರ ಅಹವಾಲು ಆಲಿಸಿ, ಪರಿಹಾರ ಭರವಸೆ ನೀಡಿದರು.