ಸಾರಾಂಶ
ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವುದು ದೊಡ್ಡ ಸವಾಲಿನ ಕೆಲಸವಾಗಿದೆ
ಬಳ್ಳಾರಿ: ನಗರದ ಹವಾಂಭಾವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದಿಂದ ಮಕ್ಕಳನ್ನು ಶಾಲೆಗೆ ಕರೆತರುವ “ಬಾ ಮರಳಿ ಶಾಲೆಗೆ” ಯೋಜನೆಯ ತೊಗಲುಗೊಂಬೆ ಪ್ರದರ್ಶನ ಜರುಗಿತು.
ಉದ್ಘಾಟಿಸಿದ ಡಿಡಿಪಿಐ ಆರ್. ಉಮಾದೇವಿ ಅವರು, ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಈ ದಿಸೆಯಲ್ಲಿ ಇಲಾಖೆ ಪೋಷಕರಿಗೆ ಶೈಕ್ಷಣಿಕ ಮಹತ್ವ ಕುರಿತು ಮನವರಿಕೆ ಮಾಡಿಕೊಟ್ಟು ಮಕ್ಕಳನ್ನು ಶಾಲೆಯತ್ತ ಕರೆತರುವ ಕೆಲಸ ಮಾಡುತ್ತಿದೆ. ಶಾಲೆಗೆ ಮಕ್ಕಳನ್ನು ಕರೆತರುವ ವಿಷಯವನ್ನೇ ಕಥಾವಸ್ತುವನ್ನಾಗಿಸಿಕೊಂಡು ತೊಗಲುಗೊಂಬೆ ಪ್ರದರ್ಶನ ಮಾಡಿರುವುದು ನಿಜಕ್ಕೂ ಸಂತಸ ತಂದಿದೆ ಎಂದರು.ಅಳಿವಿನಂಚಿನಲ್ಲಿರುವ ಅಪರೂಪದ ತೊಗಲುಗೊಂಬೆಯಾಟ ಪ್ರಕಾರವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ರಂಗಕಲೆಯ ಪ್ರಕಾರಗಳಲ್ಲಿ ತೊಗಲುಗೊಂಬೆಯಾಟವನ್ನು ಸಹ ಒಂದಾಗಿದೆ. ಅಳಿವಿನ ಅಂಚಿನಲ್ಲಿರುವ ಈ ಪ್ರಕಾರವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಉಮಾದೇವಿ ಅವರು ಹೇಳಿದರು.
ಮಹಾನಗರ ಪಾಲಿಕೆ ಸದಸ್ಯರಾದ ಕಲ್ಪನಾ ರೆಡ್ಡಿ, ಕ್ಷೇತ್ರ ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿ ಜಿ. ಮೋಹನ್ ಅವರು ಬಾ ಮರಳಿ ಶಾಲೆಗೆ ಯೋಜನೆ ಕುರಿತು ಜಾಗೃತಿ ಮೂಡಿಸಲು ಇಡೀ ಜಿಲ್ಲಾದ್ಯಂತ ತೊಗಲುಗೊಂಬೆ ಪ್ರದರ್ಶನ ನಡೆಯುವಂತಾಗಬೇಕು ಎಂದು ಆಶಿಸಿದರು.ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದ ಅಧ್ಯಕ್ಷ ಹೊನ್ನೂರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಮುಖ್ಯಗುರು ಸಿ. ನಿಂಗಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಗೊರವ ತುಕಾರಾಮ,
ಉಪಾಧ್ಯಕ್ಷ ನೇತಿ ರಘುರಾಮ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಣ್ಣ ಮಾರೆಪ್ಪ,ಜಿ. ಶಿವಶಂಕರ ಉಪಸ್ಥಿತರಿದ್ದರು. ಶಿಕ್ಷಕರಾದ ಬಿ. ಶೀಲಾ ಹಾಗೂ ಗಂಗಮ್ಮ ಕಾರ್ಯಕ್ರಮ ನಿರ್ವಹಿಸಿದರು.
ಬಳ್ಳಾರಿಯ ಹವಾಂಭಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದಿಂದ ಬಾ ಮರಳಿ ಶಾಲೆಗೆ ಯೋಜನೆಯ ತೊಗಲುಗೊಂಬೆ ಪ್ರದರ್ಶನ ಜರುಗಿತು.