ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ ಪ್ರಕ್ರಿಯೆ ನಡೆಯಿತು. ಜಿಲ್ಲೆಯ 546 ಮತಗಟ್ಟೆಯಲ್ಲಿ ಮತದಾರರು ತಮ್ಮ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು.ಬೆಳಗ್ಗಿನಿಂದಲೂ ಜಿಲ್ಲೆಯಾದ್ಯಂತ ಬಿರುಸಿನ ಮತದಾನ ಕಂಡುಬಂತು. ಮತಗಟ್ಟೆಗಳ ಸಮೀಪದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರು ಮತದಾರರನ್ನು ಸೆಳೆಯುವಲ್ಲಿ ನಿರತರಾಗಿದ್ದರು. ತಮ್ಮ ಪಕ್ಷದ ಟೋಪಿ, ಶಾಲು ಧರಿಸಿ ಮತಬೇಟೆಯಲ್ಲಿ ತೊಡಗಿದ್ದರು.
ಮಡಿಕೇರಿಯ ಹಿಲ್ ರಸ್ತೆಯಲ್ಲಿ ಕಾಫಿ ಥೀಮ್ ಮತಗಟ್ಟೆ ತೆರೆಯಲಾಗಿತ್ತು. ಜಿಲ್ಲೆಯಲ್ಲಿ 10 ಸಖಿ ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿತ್ತು. ಮತದಾನ ಹಿನ್ನೆಲೆಯಲ್ಲಿ ಸುಮಾರು 1600 ಪೊಲೀಸರು ಕರ್ತವ್ಯದಲ್ಲಿ ತೊಡಗಿದ್ದರು. ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಹುಟ್ಟೂರು ಪೊನ್ನಂಪೇಟೆ ತಾಲೂಕಿನ ಬೆಳ್ಳೂರಿನ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು. ತಮ್ಮ ಪತ್ನಿ ಕಾಂಚನ ಅವರೊಂದಿಗೆ ಆಗಮಿಸಿದ್ದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಪತ್ನಿ ದಿವ್ಯ ಅವರೊಂದಿಗೆ ಬೇಳೂರು ಗ್ರಾಮ ಪಂಚಾಯಿತಿ ಬಜೆಗುಂಡಿಯ ಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.ಮಾಜಿ ಶಾಸಕ ಕೆ.ಜಿ. ಬೋಪಯ್ಯ ತಮ್ಮ ಕುಟುಂಬಸ್ಥರೊಂದಿಗೆ ಮಡಿಕೇರಿಯ ಜೂನಿಯರ್ ಕಾಲೇಜಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮಾಜಿ ಶಾಸಕ ಅಪ್ಪಚ್ಚು ರಂಜನ್ ಕುಂಬೂರು ಮತಗಟ್ಟೆಯಲ್ಲಿ ತಮ್ಮ ಪತ್ನಿ ಶೈಲಾ ಅವರೊಂದಿಗೆ ಮತ ಚಲಾಯಿಸಿದರು.
ಮಡಿಕೇರಿ ನಗರದ ಸಂತ ಮೈಕಲರ ಶಾಲೆಯ ಮತಗಟ್ಟೆಯಲ್ಲಿ ಹಿರಿಯ ರಾಜಕಾರಣಿ ಮಿಟ್ಟು ಚಂಗಪ್ಪ ಪತ್ನಿ ಯಶಿ ಚಂಗಪ್ಪ ಅವರೊಂದಿಗೆ ೩೧ನೇ ಬಾರಿಗೆ ಮೊದಲಿಗರಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿದ್ದಾರೆ.ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಡಿಕೇರಿ ತಾಲೂಕು ಪಂಚಾಯಿತಿ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣೀತ್ ನೇಗಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹಾಗೂ ಉಪ ವಿಭಾಗಾಧಿಕಾರಿ ವಿನಾಯಕ ನಾರ್ವಾಡೆ ಅವರುಗ ನಗರದ ರಾಜಾಸೀಟ್ ಉದ್ಯಾನವಕ್ಕೆ ತೆರಳಿ ಅಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಂಡು ಮತದಾನ ಮಹತ್ವ ಸಾರಿದರು.
ಅರಣ್ಯದಂಚಿನಲ್ಲಿರುವ ಸೂಕ್ಷ್ಮ ಮತಗಟ್ಟೆಯಲ್ಲಿ ಕೂಡ ಶಾಂತಿಯುತ ಮತದಾನ ನಡೆಯಿತು.ಮಡಿಕೇರಿ ತಾಲೂಕಿನ ಒಣಚಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 126 ರಲ್ಲಿ ನಿರಾಂತಕದ ಮತದಾನ ನಡೆಯಿತು. ಮತಗಟ್ಟೆಯಲ್ಲಿರುವ ಒಟ್ಟು 194 ಪೈಕಿ ಬೆಳಗ್ಗೆ 11.30ರ ವೇಳೆಗೆ 80 ಮಂದಿ ಮತಚಲಾಯಿದ್ದರು. ಪೊಲೀಸ್ ಬಿಗಿ ಭದ್ರತೆಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಕಳೆದ 20 ದಿನಗಳ ಹಿಂದೆಯಷ್ಟೇ ಈ ವ್ಯಾಪ್ತಿಯ ಸುತ್ತಮುತ್ತ ನಕ್ಸಲರು ಓಡಾಡಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
194 ಮಂದಿ ಗಿರಿಜನರು ಇರುವ ದುಬಾರೆ ಮತಗಟ್ಟೆಯಲ್ಲಿ ಮಧ್ಯಾಹ್ನ 1.30ರ ವೇಳೆಗೆ 59 ಪುರುಷರು ಹಾಗೂ 62 ಮಹಿಳೆಯರು ಮತದಾನ ಮಾಡಿದರು. ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದ ಮತಗಟ್ಟೆಯಲ್ಲಿ ಮದುಮಗ ತೀರ್ಥೇಶ್ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿ ನಂತರ ಮದುವೆ ಮಂಟಪಕ್ಕೆ ತೆರಳಿದರು.......................ಜಿಲ್ಲೆಯಲ್ಲಿ ಬಿರುಸಿನಿಂದ ಮುಂದುವರಿದ ಮತದಾನ ಪ್ರಮಾಣ-ಬೆಳಗ್ಗೆ 9 ಕ್ಕೆ ಮೈಸೂರು ಲೋಕಸಭಾ ಕ್ಷೇತ್ರದ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮತದಾನ ಶೇ.12.56 ಮತದಾನ ದಾಖಲಾಯಿತು. ವಿಧಾನಸಭಾ ಕ್ಷೇತ್ರವಾರು ಮಡಿಕೇರಿ ಶೇ.12.33, ವಿರಾಜಪೇಟೆ ಶೇ.12.80 ಮತದಾನ ದಾಖಲಾಯಿತು.
-ಬೆಳಗ್ಗೆ 11ರ ವರೆಗೆ ಬಿರುಸಿನ ಮತದಾನ ದಾಖಲಾಯಿತು. ಸರಾಸರಿ ಮತದಾನ ಶೇ.29.90 ಏರಿಕೆಯಾಯಿತು. ವಿಧಾನ ಸಭಾ ಕ್ಷೇತ್ರವಾರು ಮಡಿಕೇರಿ ಶೇ.28.94, ವಿರಾಜಪೇಟೆ ಶೇ. 30.87 ಮತದಾನವಾಗಿದ್ದು, ಬಿರು ಬಿಸಿಲಿನ ನಡೆವೆಯೂ ಮತದಾರರು ಮತಗಟ್ಟೆಗೆ ಆಗಮಿಸಿ ಉತ್ಸಾಹಹದಿಂದ ಮತ ಚಲಾಯಿಸಿದರು.-ಮಧ್ಯಾಹ್ನ 1ಕ್ಕೆ ಜಿಲ್ಲೆಯಲ್ಲಿ ಸರಾಸರಿ ಮತದಾನ ಶೇ.47.96 ರಷ್ಟು ಮತದಾನ ನಡೆಯಿತು. ಬಿಸಿಲ ನಡುವೆಯೂ ಮತದಾರರು ಕುಗ್ಗದೆ ಮತಗಟ್ಟೆಗೆ ಧಾವಿಸಿ, ತಮ್ಮ ಹಕ್ಕು ಚಲಾಯಿಸಿದರು. ಈ ವೇಳೆ ಮಡಿಕೇರಿ ಕ್ಷೇತ್ರದಲ್ಲಿ ಶೇ.48.28, ವಿರಾಜಪೇಟೆ ಶೇ. 47.65 ಮತದಾನ ದಾಖಲಾಯಿತು.
-ಮಧ್ಯಾಹ್ನ 3ರ ವೇಳೆಗೆ ಜಿಲ್ಲೆಯಲ್ಲಿ ಸರಾಸರಿ ಮತದಾನ ಶೇ. 57.62 ರಷ್ಟು ಮತದಾನವಾಯಿತು. ಮಡಿಕೇರಿ ಶೇ.57.07, ವಿರಾಜಪೇಟೆ ಶೇ.57.62 ಮತದಾನವಾಯಿತು.-ಸಂಜೆ 5 ಗಂಟೆ ವೇಳೆಗೆ ಶೇ.70.40 ರಷ್ಟು ಮತದಾನ ದಾಖಲಾಯಿತು. ಮಡಿಕೇರಿ ಶೇ.70.58, ವಿರಾಜಪೇಟೆ ಶೇ.70.22 ಮತದಾನವಾಯಿತು.