ಜಿಲ್ಲಾ ಕಾಂಗ್ರೆಸ್‌ ಮನೆಯಲ್ಲಿ ಒಡೆದ ಹಾಲು : ರಾಜಣ್ಣ - ಶಾಸಕ ಎಸ್.ಆರ್. ಶ್ರೀನಿವಾಸ್ ನಡುವೆ ಮುಸುಕಿನ ಗುದ್ದಾಟ

| Published : Jan 24 2025, 12:50 AM IST / Updated: Jan 24 2025, 11:43 AM IST

kn rajanna
ಜಿಲ್ಲಾ ಕಾಂಗ್ರೆಸ್‌ ಮನೆಯಲ್ಲಿ ಒಡೆದ ಹಾಲು : ರಾಜಣ್ಣ - ಶಾಸಕ ಎಸ್.ಆರ್. ಶ್ರೀನಿವಾಸ್ ನಡುವೆ ಮುಸುಕಿನ ಗುದ್ದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ ಎನ್ನುವ ಹಾಗೆ ತುಮುಲ್ ಅಧ್ಯಕ್ಷರಾಗಿ ವೆಂಕಟೇಶ್ ಆಯ್ಕೆಯಾದ ಬೆನ್ನಲ್ಲೇ ಸಹಕಾರ ಸಚಿವ ರಾಜಣ್ಣ ಹಾಗೂ ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್. ಶ್ರೀನಿವಾಸ್ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.

 ತುಮಕೂರು : ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ ಎನ್ನುವ ಹಾಗೆ ತುಮುಲ್ ಅಧ್ಯಕ್ಷರಾಗಿ ವೆಂಕಟೇಶ್ ಆಯ್ಕೆಯಾದ ಬೆನ್ನಲ್ಲೇ ಸಹಕಾರ ಸಚಿವ ರಾಜಣ್ಣ ಹಾಗೂ ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್. ಶ್ರೀನಿವಾಸ್ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.

ತಮ್ಮ ಪತ್ನಿ ಭಾರತಿ ಶ್ರೀನಿವಾಸ್ ಗೆ ಅಧ್ಯಕ್ಷ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಜಿಲ್ಲೆಯ ಇಬ್ಬರು ಸಚಿವರ ವಿರುದ್ಧ ಹರಿಹಾಯ್ದರೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಗುಬ್ಬಿ ಶಾಸಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ಹಾಗೂ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತುಘಲಕ್ ಆಡಳಿತ ನಡೆಸುತ್ತಿದ್ದಾರೆಂದು ಗುಬ್ಬಿ ಶಾಸಕ ಶ್ರೀನಿವಾಸ್ ಅಸಮಾಧಾನ ಹೊರ ಹಾಕಿದ್ದಾರೆ.

ಜಿಲ್ಲೆಯಲ್ಲಿ ಏನ್ ನಡಿತಿದೆ ಅನ್ನುವುದೇ ಗೊತ್ತಿಲ್ಲ ಎಂದಿರುವ ಶ್ರೀನಿವಾಸ್ ಇಬ್ಬರು ಮಂತ್ರಿಗಳು ಸೇರಿಕೊಂಡು ಏನ್ ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ನಮ್ಮನ್ನು ಮೀಟಿಂಗ್ ಗೂ ಸಹ ಕರಿಯುತ್ತಿಲ್ಲ ಎಂದಿದ್ದಾರೆ. ಪರಮೇಶ್ವರ್ ಗೆ ಪೋನ್ ಮಾಡಿ ಏನ್ ಹೇಳಬೇಕೋ ಅದನ್ನೆಲ್ಲಾ ಹೇಳಿದ್ದೀನಿ. ಆ ಇಬ್ಬರು ಸಾಮಾಜಿಕ ನ್ಯಾಯ ಕೊಡುವ ಹರಿಕಾರರು ಎಂದ ಶ್ರೀನಿವಾಸ್ ಎಡಗೈ ಜನಾಂಗಕ್ಕೆ ಅನ್ಯಾಯ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಡೀ ಜಿಲ್ಲೆಯಲ್ಲಿ ಎಸ್ ಟಿ, ಭೋವಿಗಳನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಬಲಗೈ ಸಮುದಾಯದವರು ಮಿನಿಸ್ಟರ್ ಇದ್ದಾರೆ ಎಂದಿರುವ ಶ್ರೀನಿವಾಸ್ ಮುಂದೆ ಡಿಸಿಸಿ ಬ್ಯಾಂಕ್ ಚುನಾವಣೆ ಬರುತ್ತದೆ. ಯಾರಾದರೂ ಒಬ್ಬ ಎಡಗೈ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಇವರು ಸಾಮಾಜಿಕ ನ್ಯಾಯದ ಹರಿಕಾರರು ಅಂತ ನಾನು ಅಂದುಕೊಳ್ಳುತ್ತೇನೆ ಎಂದರು.ಜಿಲ್ಲೆಯಲ್ಲಿ ಎರಡು ಮೀಸಲು ಕ್ಷೇತ್ರ ಇದ್ದು ಆ ಮೀಸಲು ಕ್ಷೇತ್ರದಲ್ಲಿ ಒಬ್ಬರು ಭೋವಿ ಜನಾಂಗ, ಮತ್ತೊಬ್ಬರು ಬಲಗೈ ಜನಾಂಗ ಗೆದ್ದಿದ್ದಾರೆ. ಎಡಗೈ ನವರು ಇನ್ನು ಶೋಷಿತರಾಗಿಯೇ ಇದ್ದಾರೆ ಎಂದಿದ್ದಾರೆ. ಈ ಸಮುದಾಯಕ್ಕೆ ನ್ಯಾಯ ಸಿಗಬೇಕು ಅಂದರೆ ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ಗೆ ನಾಮಿನಿ ಮಾಡಿ ಅಧ್ಯಕ್ಷ ಸ್ಥಾನ ಕೊಡಬೇಕು ಎಂದರು. ಜಿಲ್ಲೆಯ ಇಬ್ಬರು ಸಚಿವರ ವರ್ತನೆ ಬಗ್ಗೆ ನಾನು ಸಿಎಂ‌ ಗಮನಕ್ಕೆ ತಂದಿದ್ದೆ. ಸಹಕಾರ ಸಚಿವ ಹಾಗೂ ಗೃಹ ಸಚಿವರಿಗೆ ಹೇಳುತ್ತೇನೆಂದು ಮುಖ್ಯಮಂತ್ರಿ ತಿಳಿಸಿದ್ದರು ಎಂದರು.

ಜಿಲ್ಲೆಯಲ್ಲಿ ಯಾರದ್ದು ನಡಿಯುತ್ತಿದೆ. ಏನು ನಡಿಯುತ್ತಿದೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಮಿಲ್ಕ್ ಯುನಿಯನ್ ಗೆ ನಾಮಿನಿ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದರು. ಇವರು ಮಾತೆತ್ತಿದರೆ ಶೋಷಿತ ವರ್ಗಕ್ಕೆ ನ್ಯಾಯ ಕೊಡುವುದಾಗಿ ತಿಳಿಸುತಾರೆ. ನೋಡಿದರೆ ಶೋಷಿತರನ್ನು ಇವರು ನಿಷ್ಕೃಷ್ಟವಾಗಿ ಕಾಣುತ್ತಿದ್ದಾರೆ ಎಂದರು. ಅಧ್ಯಕ್ಷರ ಆಯ್ಕೆ ಬಗ್ಗೆ ಜಿಲ್ಲೆಯಲ್ಲಿ ಒಬ್ಬರನ್ನು ಮಾತನಾಡಿಸಿಲ್ಲ ಎಂದರು. ಎಲ್ಲರನ್ನೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದಿರುವ ಅವರು ಯಾವ ಎಂಎಲ್ ಎ ಹತ್ರನು ಮಾತನಾಡಿಲ್ಲ. ಇವರಿಬ್ಬರಿದ್ದರು ಸಾಕು ಇಡೀ ಜಿಲ್ಲೆಯನ್ನೇ ಕಂಟ್ರೋಲ್ ಮಾಡುತ್ತಾರೆ ಎಂದರು.

ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ 11 ಕ್ಕೆ 11 ಗೆಲ್ಲಿಸಿಕೊಂಡು ಬರುತ್ತಾರೆ. ಬೇರೆಯವರು ಯಾರು ಬೇಡ, ಇವರಿಬ್ಬರು ಇದ್ದರೆ ಎಲ್ಲಾ ಆಗಿಹೋಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ನಾವು ಎಂಎಲ್ಎಗಳಿದ್ದೇವೆ, ನಮ್ಮನ್ನು ಕೇಳಲಿಲ್ಲವಲ್ಲ ಅನ್ನುವುದು ನಮಗೆ ಅಸಮಾಧಾನ ಇದೆ. ಮೊನ್ನೆ ಸಿಎಲ್ ಪಿ ಮೀಟಿಂಗ್ ಇತ್ತು. ಆ ಮೀಟಿಂಗ್ ಬಳಿಕ ಎಲ್ಲರು ಸೇರಿ ಗೃಹ ಸಚಿವ ಪರಮೇಶ್ವರ್ ಜೊತೆ ಮಾತನಾಡಿದ್ದೆವು. ರಾಜಣ್ಣ ಸಹ ಇದ್ದರು. ಮೀಟಿಂಗ್ ಕರೆಯುತ್ತೇವೆ ಅಂದರು ರಾಜಣ್ಣ. ಅದಾದ ಮೇಲೆ ಎಲ್ಲಿದ್ದೀರಾ? ಯಾರು , ಏನು ಒಂದು ಗೊತ್ತಿಲ್ಲ ಎಂದರು.

ಸರ್ಕಾರದ ವಿರುದ್ಧ ನನ್ನ ಅಸಮಾಧಾನ ಇಲ್ಲ. ಅಷ್ಟೇ ಏಕೆ ಸಚಿವರ ವಿರುದ್ಧವು ಅಸಮಾಧಾನ ಇಲ್ಲ. ಅವರ ನಡವಳಿಕೆ ವಿರುದ್ಧ ಅಸಮಾಧಾನ ಇದೆ ಎಂದ ಶ್ರೀನಿವಾಸ್ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಅಲ್ವಾ.? ಎಂದು ಪ್ರಶ್ನಿಸಿದರು. ವೆಂಕಟೇಶ್ ನಾ ನಾಮಿನಿ ಮಾಡ್ತಿವಿ ಅಂತ ಒಂದು ಮಾತು ಕೇಳ್ಬೆಕಿತ್ತು ಅಲ್ವಾ ಎಂದರು.

ದಲಿತ ಅಧ್ಯಕ್ಷ ಆಗಿದ್ದಕ್ಕೆ ರಂಪ ಮಾಡುತ್ತಿದ್ದಾರೆ...ಶಾಸಕ ಶ್ರೀನಿವಾಸ್ ಆರೋಪಕ್ಕೆ ತಿರುಗೇಟು ನೀಡಿದ ರಾಜಣ್ಣ ಒಬ್ಬ ದಲಿತ ಅಧ್ಯಕ್ಷ ಆಗಿರುವುದಕ್ಕೆ ಇಷ್ಟೊಂದು ರಂಪ ಮಾಡುತ್ತಾರಲ್ವಾ ಎಂದ ಅವರು ದಲಿತರ ಮತ ಇವರುಗಳಿಗೆ ಬೇಡ್ವಾ ಎಂದರು. 

ಒಕ್ಕಲಿಗ 8 ಜನ ನಿರ್ದೇಶಕರು ಇದ್ದರೂ ಅಧ್ಯಕ್ಷ ಸ್ಥಾನ ಕೊಟ್ಟಿಲ್ಲ ಎಂಬ ಆರೋಪಕ್ಕೆ.ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ಸಿಎಂ ಆದರೂ ಎಷ್ಟು ಜನ ಕುರುಬ ಸಮುದಾಯದ ಶಾಸಕರು ಇದ್ದಾರೆ ಎಂದರು. ಪಾವಗಡ ಶಾಸಕ ವೆಂಕಟೇಶ ರನ್ನು ನಾಮ ನಿರ್ದೇಶನ ಮಾಡಿ ಅಧ್ಯಕ್ಷ ಮಾಡಿದ್ದು ನಾನೇ. ಬೇರೆಯವರನ್ನು ದೂಷಣೆ ಮಾಡಲ್ಲ ಎಂದರು. ನಾನು, ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ಸಿಎಂ ಜೊತೆ ಚರ್ಚೆ ಮಾಡಿ ನಿರ್ಣಯ ತೆಗೆದುಕೊಂಡಿದ್ದು ಎಂದರು. 

ಒಬ್ಬ ದಲಿತನಿಗೆ ಜಿಲ್ಲಾ ಮಟ್ಟದ ಅಧ್ಯಕ್ಷ ಸ್ಥಾನ ಕೊಟ್ಟರೆ ಅದನ್ನು ವಿರೋಧಿಸುವುದು ಯಾವ ಪ್ರಭುದ್ದ ರಾಜಕಾರಣಿಗೆ ಗೌರವ ತರುವುದಲ್ಲ ಎಂದರು. ತಿಪಟೂರು ಶಾಸಕ ಷಡಕ್ಷರಿ ಕೂಡ ನಾಮಿನಿ ಆಗಿ ಲ್ಯಾಂಡ್ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಆಗ ಯಾಕೆ ಯಾರೂ ವಿರೋಧಿಸಿಲ್ಲ. ದಲಿತರಿಗೊಂದು ನ್ಯಾಯ. ಮುಂದುವರಿದವರಿಗೆ ಒಂದು ನ್ಯಾಯನಾ ಎಂದು ಪ್ರಶ್ನಿಸಿದರು. ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿರೋದು ಎಲ್ಲಾ ಪಕ್ಷದವರ ಸಹಕಾರದಿಂದ ಎಂದ ರಾಜಣ್ಣ ಇವರಿಗೆಲ್ಲಾ ತಾಕತ್ತು ಇದ್ದರೆ ಮುಂದೆ ಡಿಸಿಸಿ ಬ್ಯಾಂಕ್ ಚುನಾವಣೆ ಎದುರಿಸಿ ಗೆಲ್ಲಲಿ ಎಂದು ಶಾಸಕ ಶ್ರೀನಿವಾಸ್ ಗೆ ಸವಾಲು ಹಾಕಿದ್ದಾರೆ.

ಡಿಕೆಶಿ ಬೆಂಬಲಿಗ ಅನ್ನುವ ಕಾರಣಕ್ಕೆ ಶ್ರೀನಿವಾಸ್ ಪತ್ನಿಗೆ ಅಧ್ಯಕ್ಷ ಸ್ಥಾನ ಕೈ ತಪ್ಪಿದಲ್ಲ ಅದೆಲ್ಲಾ ಸುಳ್ಳು ಎಂದರು. ಶ್ರೀರಾಮುಲು ಕಾಂಗ್ರೆಸ್ ಗೆ ಬಂದರೆ ಸ್ವಾಗತಿಸುವೆ ಎಂದ ಅವರು ಶ್ರೀರಾಮುಲು ಒಬ್ಬ ಪವರ್ ಫುಲ್ ನಾಯಕ. ಅವರು ನಮ್ಮ ಸಮಾಜದಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ ಎಂದರು. ಬಿಎಸ್ಆರ್ ಪಕ್ಷ ಕಟ್ಟಿ ಐದಾರು ಸ್ಥಾನ ಪಡೆದವರು. ಎಲ್ಲಾ ಸಮುದಾಯದವರು ಇಷ್ಟ ಪಡುತ್ತಾರೆ. ಸಂಭಾವಿತ ಮನುಷ್ಯ ಕೂಡ ಎಂದ ರಾಜಣ್ಣ, ಅವರಿಗೆ ಬಿಜೆಪಿಯಲ್ಲಿ ಅಸಮಾಧಾನ ಇದ್ದು ಕಾಂಗ್ರೆಸ್ ಗೆ ಬಂದರೆ ನಾನು ಸ್ವಾಗತಿಸುತ್ತೇನೆ ಎಂದರು.