ಪೈಪ್‌ ಒಡೆದು ನೀರು ಪೋಲು: ದುರಸ್ತಿಗೆ ಆಗ್ರಹ

| Published : Apr 30 2024, 02:01 AM IST

ಸಾರಾಂಶ

ಕನಕಪುರ: ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದ್ದರೂ ಪೈಪ್ ದುರಸ್ತಿಪಡಿಸದ ನಗರಸಭೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನಕಪುರ: ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದ್ದರೂ ಪೈಪ್ ದುರಸ್ತಿಪಡಿಸದ ನಗರಸಭೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಮಳಗಾಳು ರಸ್ತೆಯ ಅರ್ಕಾವತಿ ಸೇತುವೆ ಬಳಿ ಕನಕಪುರ ನಗರಕ್ಕೆ ನೀರು ಪೂರೈಸುವ ಪೈಪ್ ಒಡೆದು ನೀರು ಪೋಲಾಗುತ್ತಿದೆ. ಪ್ರತಿ ದಿನ ನೀರು ಪೋಲಾಗಿ ಹರಿದು ಹೋಗುತ್ತಿದ್ದರು ನಗರಸಭೆ ಅಧಿಕಾರಿ ಗಳು ಮಾತ್ರ ಒಡೆದಿರುವ ಪೈಪ್ ದುರಸ್ಥಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ನೀರಿನ ಸಮಸ್ಯೆ ನಿವಾರಿಸಲು ನಗರಸಭೆಯಿಂದ ಅರ್ಕಾವತಿ ನದಿ ದಡದಲ್ಲಿರುವ ಕೊಳವೆ ಬಾವಿಯಿಂದ ಪೈಪ್ ಮೂಲಕ ದಿನ ಬಳಕೆಗೆ ನೀರು ಪೂರೈಸಲಾಗುತ್ತಿದೆ. ಕೆಲ ದಿನಗಳ ಹಿಂದೆ ನೀರು ಪೂರೈಸುವ ಪೈಪ್ ಒಡೆದಿದ್ದು, ಅದರಿಂದ ಪ್ರತಿನಿತ್ಯ ನೀರು ಪೋಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮಳೆ ಇಲ್ಲದೆ ಬರಗಾಲ ಆವರಸಿದೆ. ಜೊತೆಗೆ ಬೇಸಿಗೆಯಿಂದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ನಗರದಲ್ಲಿ ಸಮರ್ಪಕ ದಿನ ಬಳಕೆಗೆ ನೀರು ಪೂರೈಸಲು ತೊಂದರೆಯಾಗುತ್ತಿದ್ದು, ಸಾರ್ವಜನಿಕರು ವಾಹನ ತೊಳೆಯಲು ಅನಾವಶ್ಯಕವಾಗಿ ನೀರು ವ್ಯರ್ಥ ಮಾಡದೆ ಬೇಸಿಗೆ ಕಳೆಯುವವರೆಗೂ ನೀರು ಮಿತವಾಗಿ ಬಳಸುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಾದ ನಗರಸಭೆ ಅಧಿಕಾರಿಗಳೆ ನೀರು ಪೋಲು ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಒಡೆದಿರುವ ಪೈಪ್ ದುರಸ್ತಿ ಪಡಿಸಲು ಕೆಲ ದಿನಗಳ ಹಿಂದೆ ಗುಂಡಿ ತೆಗೆದು ಅದನ್ನು ದುರಸ್ತಿಪಡಿಸದೆ, ಗುಂಡಿ ಮುಚ್ಚದೆ ಹಾಗೆ ಬಿಟ್ಟು ನಗರ ಸಭೆ ಸಿಬ್ಬಂದಿ ಕೈತೊಳೆದುಕೊಂಡಿದ್ದಾರೆ. ಇದರಿಂದ ಚಿಮ್ಮುತ್ತಿರುವ ನೀರು ಗುಂಡಿ ತುಂಬಿ ರಸ್ತೆಯಲ್ಲಿ ಹರಿಯುತ್ತಿದೆ. ರಸ್ತೆಯಲ್ಲಿ ವಾಹನಗಳು ಓಡಾಟಕ್ಕೂ ತೊಂದರೆಯಾಗುತ್ತಿದೆ. ರಸ್ತೆ ಪಕ್ಕದಲ್ಲಿ ಆಳವಾದ ಗುಂಡಿ ಇರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಯಿದ್ದು ನಗರಸಭೆ ಅಧಿಕಾರಿಗಳು ಒಡೆದಿರುವ ಪೈಪ್ ಸರಿಪಡಿಸಿ ರಸ್ತೆ ಪಕ್ಕದಲ್ಲಿ ತೆಗೆದಿರುವ ಗುಂಡಿಯೂ ಮುಚ್ಚಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೆ ಕೆ ಪಿ ಸುದ್ದಿ 01:ಕನಕಪುರದ ಮಳಗಾಳು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಆರ್ಕಾವತಿ ಸೇತುವೆ ಪಕ್ಕದಲ್ಲಿ ನೀರು ಪೂರೈಸುವ ಪೈಪ್ ಒಡೆದು ಗುಂಡಿ ತುಂಬಿ ರಸ್ತೆಯಲ್ಲಿ ಹರಿದು ಪೋಲಾಗುತ್ತಿರುವ ನೀರು.