ಸಾರಾಂಶ
ಬಾವಿಗೆ ಜಿಗಿದ ತಂಗಿಯನ್ನು ರಕ್ಷಿಸಲು ಅಣ್ಣನು ಬಾವಿಗೆ ಹಾರಿದ್ದು, ಇಬ್ಬರಿಗೂ ಈಜು ಬಾರದೇ ಇರುವುದರಿಂದ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಅಣ್ಣತಂಗಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದು, ಸೋಮವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ ಎಂದು ಚಿಂಚೋಳಿ ಪೋಲಿಸರು ತಿಳಿಸಿದ್ದಾರೆ.ತಾಲೂಕಿನ ಪಟಪಳ್ಳಿ ಗ್ರಾಮದ ಸಂದೀಪ ಸಿದ್ದಪ್ಪ ಕುಸರಂಪಳ್ಳಿ(೨೧), ನಂದಿನಿ ಸಿದ್ದಪ್ಪ ಕುಸರಂಪಳ್ಳಿ(೧೮) ಮೃತಪಟ್ಟವರು.
ಮೃತ ನಂದಿನಿ ಸಣ್ಣ ಸಣ್ಣ ವಿಚಾರಕ್ಕಾಗಿ ಹಠ ಮಾಡುತ್ತಿದ್ದಳು. ಪಿಯುಸಿ ವಿದ್ಯಾಭ್ಯಾಸವನ್ನು ಮಧ್ಯೆದಲ್ಲಿಯೇ ನಿಲ್ಲಿಸಿದ್ದಳು. ಕಾಲೇಜಿಗೆ ಹೋಗುವಂತೆ ಮನೆಯವರು ಹೇಳಿದರೂ ಆಕೆ ಕೇಳದಿರವುದಕ್ಕೆ ಮನೆಯಲ್ಲಿಯೇ ಭಾನುವಾರ ರಾತ್ರಿ ಜಗಳವಾಗಿದೆ. ಆಗ ಮನೆಯಿಂದ ನಂದಿನಿ ಓಡಿ ಹೋಗಿದ್ದಾಳೆ ಆಕೆಯನ್ನು ಬೆನ್ನಹಿಂದೆಯೇ ಹಿಂಬಾಲಿಸಿಕೊಂಡು ಅಣ್ಣ ಸಂದೀಪ ಬಂದಿದ್ದಾನೆ. ಇದೇ ವೇಳೆ ಗ್ರಾಮದ ಕುಡಿವ ನೀರಿನ ಬಾವಿಯಲ್ಲಿ ಜಿಗಿದಿದ್ದಾಳೆ. ತಂಗಿಯನ್ನು ರಕ್ಷಿಸಲು ಅಣ್ಣನು ಬಾವಿಗೆ ಹಾರಿದ್ದಾನೆ. ಇಬ್ಬರಿಗೂ ಈಜು ಬಾರದೇ ಇರುವುದರಿಂದ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅಣ್ಣತಂಗಿ ಮನೆಯಿಂದ ಹೊರಗೆ ಹೋದವರು ಮನೆಗೆ ಬಾರದೇ ಇರುವುದರಿಂದ ಕುಟುಂಬದವರು ಭಾನುವಾರ ರಾತ್ರಿಯಿಂದಲೇ ಹುಡುಕಾಟ ನಡೆಸಿದ್ದಾರೆ. ಆದರೆ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಪಟಪಳ್ಳಿ ಗ್ರಾಮದ ಹಳೆ ಮತ್ತು ಹೊಸ ಕಾಲೋನಿ ಮಧ್ಯೆ ಹರಿಯುವ ಸಣ್ಣ ನಾಲೆಯಲ್ಲಿ ಕಟ್ಟಿಸಿದ ಬಾವಿಯಲ್ಲಿ ನಂದಿನಿ ಮುಡಿದಿದ್ದ ಹೂವುಗಳು ನೀರಿನಲ್ಲಿ ತೇಲಿದ್ದವು. ಇದರಿಂದ ಅನುಮಾನದಿಂದ ಬಾವಿಯಲ್ಲಿ ಅಗ್ನಿಶಾಮಕ ದಳದವರು ಶೋಧಕಾರ್ಯ ನಡೆಸಿದಾಗ ಸೋಮವಾರ ಮಧ್ಯಾಹ್ನ ೪ರ ಸುಮಾರಿಗೆ ಮೃತದೇಹಗಳು ಪತ್ತೆಯಾಗಿವೆ.
ಕುಟುಂಬದ ಸದಸ್ಯರಿಂದ ದೂರು ದಾಖಲಿಸಿಕೊಂಡು ಚಿಂಚೋಳಿ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಂಬಂಧಿಕರಿಗೆ ಮೃತದೇಹಗಳನ್ನು ಒಪ್ಪಿಸಲಾಯಿತು. ಮಂಗಳವಾರ ಅಣ್ಣ ತಂಗಿ ಶವ ಸಂಸ್ಕಾರ ನಡೆಯಿತು. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಿಎಸ್‌ಐ ಹಣಮಂತರಾವ ಬಂಕಲಗಿ ತಿಳಿಸಿದ್ದಾರೆ.