ಸಾರಾಂಶ
ಅಣ್ಣನಿಗೆ ಸುತ್ತಿಗೆಯಿಂದ ತಲೆಗೆ ಹೊಡೆದಿದ್ದಾನೆ. ತಕ್ಷಣವೇ ಇನ್ನೋರ್ವ ತಮ್ಮ, ಸ್ನೇಹಿತರು ಸೇರಿ ಗಾಯಾಳುವನ್ನು ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದಾರೆ.
ಶಿರಸಿ: ತಾಲೂಕಿನ ಹುತಗಾರ ಗ್ರಾಮದಲ್ಲಿ ತಲೆಗೆ ಸುತ್ತಿಗೆಯಿಂದ ಹೊಡೆದು ಒಡಹುಟ್ಟಿದ ಅಣ್ಣನನ್ನು ಕೊಲೆಗೈದ ಧಾರುಣ ಘಟನೆ ಭಾನುವಾರ ನಡೆದಿದೆ.
ಹುತಗಾರ ಗ್ರಾಮದ ತ್ಯಾಗರಾಜ ಗಣಪತಿ ಮುಕ್ರಿ (30) ಕೊಲೆಯಾದ ವ್ಯಕ್ತಿ. ಈತನ ಸ್ವಂತ ತಮ್ಮ ಶಿವರಾಜ ಮುಕ್ರಿ ಕೊಲೆಗೈದ ಆರೋಪಿ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಯು ಅಣ್ಣನ ಮನೆಯ ವಸ್ತುಗಳನ್ನು ಎಸೆದು ಹಾಕಿದ್ದು, ಅತ್ತಿಗೆ ಹೇಮಾವತಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾನೆ. ಬಳಿಕ ಅಣ್ಣನಿಗೆ ಸುತ್ತಿಗೆಯಿಂದ ತಲೆಗೆ ಹೊಡೆದಿದ್ದಾನೆ. ತಕ್ಷಣವೇ ಇನ್ನೋರ್ವ ತಮ್ಮ, ಸ್ನೇಹಿತರು ಸೇರಿ ಗಾಯಾಳುವನ್ನು ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಹೆಚ್ಚುವರಿ ಚಿಕಿತ್ಸೆ ಅಗತ್ಯವಿರುವ ಕಾರಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಗಣಪತಿ ಮುಕ್ರಿ ಮೃತಪಟ್ಟಿದ್ದಾರೆ. ಇದರಿಂದ ಕುಟುಂಬದ ದ್ವೇಷ ಕೊಲೆಯಲ್ಲಿ ಅಂತ್ಯವಾದಂತಾಗಿದೆ. ಮನೆಯಲ್ಲಿ ನೀರವ ಮೌನ ಆವರಿಸಿದೆ.ಕೊಲೆಯಾದ ವ್ಯಕ್ತಿಗೆ 5 ವರ್ಷ, 3 ವರ್ಷದ ಎರಡು ಮಕ್ಕಳಿವೆ. ಆರೋಪಿಯನ್ನು ಹುಲೇಕಲ್ ಸಮೀಪ ಬಸ್ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಸ್ಥಳಕ್ಕೆ ಫಾರೆನ್ಸಿಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.