ಧಾರವಾಡ ತಾಲೂಕಿನ ಅಮ್ಮಿನಬಾವಿ ಹನುಮಂತ ಯಲಿವಾಳ (35) ಎಂಬಾತನೇ ಸ್ವತಃ ತಂಗಿ ಶಿವಲೀಲಾ ಸಂಗೊಳ್ಳಿ (32) ಯನ್ನು ಆಸ್ತಿಗಾಗಿ ಕೊಲೆ ಮಾಡಿದ್ದಾನೆ.

ಧಾರವಾಡ: ಆಸ್ತಿಗಾಗಿ ಏನೆಲ್ಲ ಅಪರಾಧಗಳು ನಡೆಯುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ತಂದೆಯ ಆಸ್ತಿ ನನಗೂ ನೀಡಬೇಕೆಂದು ಹಠ ಹಿಡಿದು ಯುಗಾದಿ ದಿನ ಹೊಲದ ಪೂಜೆಗೆ ಹೋದ ತಂಗಿಯನ್ನು ಸಹೋದರನೇ ಬರ್ಬರವಾಗಿ ಕೊಲೆ ಮಾಡಿದ ದುರ್ಘಟನೆ ಗುರುವಾರ ನಡೆದಿದೆ.

ತಾಲೂಕಿನ ಅಮ್ಮಿನಬಾವಿ ಹನುಮಂತ ಯಲಿವಾಳ (35) ಎಂಬಾತನೇ ಸ್ವತಃ ತಂಗಿ ಶಿವಲೀಲಾ ಸಂಗೊಳ್ಳಿ (32) ಯನ್ನು ಕೊಲೆ ಮಾಡಿದ್ದಾನೆ. ಶಿವಲೀಲಾ ಅವರನ್ನು ಸಮೀಪದ ತಡಕೋಡ ಗ್ರಾಮದ ಸಂಗೊಳ್ಳಿ ಮನೆತನಕ್ಕೆ ಮದುವೆ ಮಾಡಿಕೊಡಲಾಗಿತ್ತು. ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ, ಕೆಲವು ದಿನಗಳಿಂದ ಶಿವಲೀಲಾ ತವರು ಮನೆಯಲ್ಲಿಯೇ ಇದ್ದರು. ತಾಯಿ ತೀರಿದ ಆನಂತರ ಅಣ್ಣ-ತಂಗಿ ಮಧ್ಯೆ ಆಸ್ತಿ ವಿಚಾರವಾಗಿ ಗದ್ದಲ-ಗೊಂದಲ ಇತ್ತು. ಯುಗಾದಿ ದಿನ ಗುರುವಾರ ನನಗೆ ತಂದೆಯ ಆಸ್ತಿಯಾದ ನಾಲ್ಕು ಎಕರೆ ಹೊಲದಲ್ಲಿ ಎರಡು ಎಕರೆ ಬರಬೇಕೆಂದು ಹೇಳಿದ್ದಳು. ಹೊಲದ ಪೂಜೆಗೆ ಹೋದಾಗ, ಅಣ್ಣ ಹನುಮಂತ ಕುಡುಗೋಲಿನಿಂದ ಆಕೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

ಸುದ್ದಿ ತಿಳಿದು ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿ ಹನುಮಂತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಯುವತಿಗೆ ಅನ್ಯ ಕೋಮಿನ ಯುವಕನಿಂದ ಬೆದರಿಕೆ:

ಯುವತಿಯೊಬ್ಬಳಿಗೆ ಅನ್ಯಕೋಮಿನ ಯುವಕನೊಬ್ಬ ಫೋಟೋ ಎಐ ಎಡಿಟ್ ಮಾಡಿ ತನ್ನ ಜತೆ ಇರದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಜೀವ ಬೆದರಿಕೆ ಹಾಕಿದ ಘಟನೆ ಕುರಿತು ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಅಶೋಕನಗರ ನಿವಾಸಿ ಜಾಫರ್ ನದಾಫ್‌ ಎಂಬಾತನ ವಿರುದ್ಧ ಯುವತಿ ತಾಯಿ ದೂರು ನೀಡಿದ್ದಾರೆ. ಜಾಫರ್‌ ಹಾಗೂ ಯುವತಿ ಒಂದೆ ಕಡೆ ಕೆಲಸ ಮಾಡುತ್ತಿದ್ದರು. ಆಗ ಪರಿಚಯವಾಗಿ, ಅವಳೊಂದಿಗೆ ಫೋಟೋ ತೆಗೆದುಕೊಂಡಿದ್ದಾನೆ. ತನ್ನ ಜತೆಗೆ ಇರಲಿಲ್ಲ ಅಂದರೆ ಎಡಿಟ್ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ, ಅವಳಿಂದ ₹೧.೫೦ ಲಕ್ಷ ಒತ್ತಾಯಪೂರ್ವಕವಾಗಿ ತೆಗೆದುಕೊಂಡು ಮಾನಸಿಕ ಕಿರುಕುಳ ನೀಡಿದ್ದಾನೆ. ಮತಾಂತರ ಮಾಡುವ ದುರುದ್ದೇಶದಿಂದ ದರ್ಗಾಕ್ಕೆ ಕರೆದುಕೊಂಡು ಹೋಗಿ ತಾಯತ ಕಟ್ಟಿಸಿದ್ದಾನೆ ಎಂದು ದೂರಿನಲ್ಲಿ ಯುವತಿ ತಾಯಿ ಉಲ್ಲೇಖಿಸಿದ್ದಾರೆ.