ಕೌಟುಂಬಿಕ ವಿಚಾರಗಳಿಗೆ ತಾಯಿಯನ್ನು ನಿಂದಿಸಿದ ಅಣ್ಣನಿಗೆ ಚಾಕುವಿನಿಂದ ಇರಿದು ತಮ್ಮನು ಕೊಂದಿರುವ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೌಟುಂಬಿಕ ವಿಚಾರಗಳಿಗೆ ತಾಯಿಯನ್ನು ನಿಂದಿಸಿದ ಅಣ್ಣನಿಗೆ ಚಾಕುವಿನಿಂದ ಇರಿದು ತಮ್ಮನು ಕೊಂದಿರುವ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.ಯಾರಬ್ ನಗರದ ನಿವಾಸಿ ಮೊಹಮ್ಮದ್ ಮುಜಾಯಿದ್ದೀನ್ (37) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಸೋದರ ಮೊಹಮ್ಮದ್ ಮುಸಾದ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿ ಗುರುವಾರ ನಸುಕಿನಲ್ಲಿ ಕೌಟುಂಬಿಕ ವಿಚಾರವಾಗಿ ಸೋದರರ ಮಧ್ಯೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಕುಟುಂಬದ ಜತೆ ಯಾರಬ್ ನಗರದಲ್ಲಿ ನೆಲೆಸಿದ್ದ ಮುಜಾಯಿದ್ದೀನ್, ಸ್ಥಳೀಯವಾಗಿ ಮನೆ ಪಾಠ ನಡೆಸಿ ಜೀವನ ಸಾಗಿಸುತ್ತಿದ್ದ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ತನ್ನ ತಂದೆ-ತಾಯಿ ಜತೆ ಆತನ ಸೋದರ ಮುಸಾದ್ ವಾಸವಾಗಿದ್ದ. ಅನಾರೋಗ್ಯ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ ತಂದೆ-ತಾಯಿಯನ್ನು ಚಿಕಿತ್ಸೆಗೆ ಕರೆತಂದಿದ್ದ ಮುಸಾದ್, ಯಾರಬ್ ನಗರದ ಅಣ್ಣನ ಮನೆಯಲ್ಲಿ ಬುಧವಾರ ವಾಸ್ತವ್ಯ ಹೂಡಿದ್ದ. ಹಲವು ದಿನಗಳಿಂದ ಸೋದರರ ಕೌಟುಂಬಿಕ ಕಲಹ ನಡೆದಿತ್ತು. ಅಂತೆಯೇ ಗುರುವಾರ ಮುಂಜಾನೆ 5 ಗಂಟೆ ಸುಮಾರಿಗೆ ಸೋದರರ ಮಧ್ಯೆ ಜಗಳ ಶುರುವಾಗಿದೆ. ಆಗ ತಾಯಿಯನ್ನು ಮುಜಾಯಿದ್ದೀನ್ ನಿಂದಿಸಿದ್ದಾನೆ ಎನ್ನಲಾಗಿದೆ. ಈ ಮಾತಿನಿಂದ ಕೆರಳಿದ ಮುಸಾದ್, ತನ್ನ ಹಿರಿಯ ಸೋದರನಿಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಹಲ್ಲೆಗೊಳಗಾದ ಮುಜಾಯಿದ್ದೀನ್‌ನನ್ನು ಸಮೀಪದ ಆಸ್ಪತ್ರೆಗೆ ಕುಟುಂಬ ಸದಸ್ಯರು ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.