ಆಸ್ತಿ ವಿಚಾರಕ್ಕೆ ತಮ್ಮನ ಹೆಂಡತಿ ಕೊಲೆ

| Published : Feb 21 2025, 11:48 PM IST

ಸಾರಾಂಶ

ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮನ ಹೆಂಡತಿಯನ್ನೇ ಕೊಲೆ ಮಾಡಿ ಪರಾರಿ ಆಗಲು ಯತ್ನಿಸಿದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ ಘಟನೆ ತಾಲೂಕಿನ ಗಳಗಿ-ಹುಲಕೊಪ್ಪ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಕಲಘಟಗಿ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮನ ಹೆಂಡತಿಯನ್ನೇ ಕೊಲೆ ಮಾಡಿ ಪರಾರಿ ಆಗಲು ಯತ್ನಿಸಿದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ ಘಟನೆ ತಾಲೂಕಿನ ಗಳಗಿ-ಹುಲಕೊಪ್ಪ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗಳಗಿ ಹುಲಕೊಪ್ಪ ಗ್ರಾಮದ ನಿವಾಸಿ ಸಕ್ಕೂಬಾಯಿ ಬಸಪ್ಪ ಕಮ್ಮಾರ (35) ಕೊಲೆಗೀಡಾದ ಮಹಿಳೆ. ಶಿವಾಜಿ ಕಮ್ಮಾರ ಕೊಲೆ ಆರೋಪಿ.

ಸಂಜೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಶಿವಾಜಿ ಮನೆಗೆ ತೆರಳಿ ಸಕ್ಕುಬಾಯಿ ಕೊರಳಿಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ ಮಾಡಿ ನಂತರ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗ್ರಾಮಸ್ಥರು ಶಿವಾಜಿಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಮೃತ ಮಹಿಳೆಗೆ ಪತಿ, ಮೂವರು ಹೆಣ್ಣು ಮಕ್ಕಳು ಇದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಶ್ರೀಶೈಲ್ ಕೌಜಲಗಿ, ಪಿಎಸ್‌ಐ ಕರಿವೀರಪ್ಪನವರ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸ್ಥಿರಾಸ್ತಿ, ಚರಾಸ್ತಿ ಕಸಿದುಕೊಂಡ ಪುತ್ರ: ತಂದೆಯಿಂದ ದೂರು

ಧಾರವಾಡ:

ನನ್ನ ಹೆಸರಿನ ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿದಂತೆ ನನಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಹ ಮೂವರು ಪುತ್ರರ ಪೈಕಿ ವೆಂಕಟಗಿರಿ ಕುಲಕರ್ಣಿ ಇಟ್ಟುಕೊಂಡಿದ್ದು, ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಸಂಗೊಳ್ಳಿ ರಾಯಣ್ಣ ನಗರದ 84 ವರ್ಷದ ಹಿರಿಯ ನಾಗರಿಕ ಪ್ರಹ್ಲಾದ ಕುಲಕರ್ಣಿ ಎಂಬುವರು ಆರೋಪಿಸಿದ್ದಾರೆ.

ಶುಕ್ರವಾರ ದಾಖಲೆ ಸಮೇತ ಸುದ್ದಿಗೋಷ್ಠಿ ನಡೆಸಿದ ಅವರು, ತಮಗೆ ಸಂಜೀವ, ವೆಂಕಟಗಿರಿ ಹಾಗೂ ವಿಜಯ ಎಂಬ ಮೂವರು ಪುತ್ರರಿದ್ದು, ಮೂವರಿಗೆ ಸಮನಾಗಿ ಆಸ್ತಿ ಹಂಚಲಾಗಿತ್ತು. ಆದರೆ, ತನಗೆ ಬಂದ ಆಸ್ತಿ ಸೇರಿದಂತೆ ಇಡೀ ಕುಟುಂಬದ ಆಸ್ತಿಯನ್ನು ವೆಂಕಟಗಿರಿ ಮಾತ್ರ ಉಪಯೋಗಿಸುತ್ತಿದ್ದು, ಸ್ವತಃ ತಂದೆಯನ್ನೇ ಮನೆಯಿಂದ ಹೊರ ಹಾಕಿದ್ದಾನೆ. ಇನ್ನುಳಿದ ಇಬ್ಬರು ಮಕ್ಕಳ ಆಸರೆಯಿಂದ ಜೀವನ ನಡೆಸುತ್ತಿದ್ದೇನೆ. ಪಿಡಬ್ಲೂಡಿ ಇಲಾಖೆಯಿಂದ ನಿವೃತ್ತಿಯಾಗಿದ್ದು, ನನ್ನ ಮನೆ, ನನಗೆ ಸಂಬಂಧಿಸಿದ ಸ್ಥಿರಾಸ್ತಿ ಹಾಗೂ ಚರಾಸ್ತಿಯನ್ನು ವೆಂಕಟಗಿರಿ ಇಟ್ಟುಕೊಂಡಿದ್ದಾನೆ ಎಂದರು.

ಎರಡು ವರ್ಷಗಳ ಹಿಂದೆ ಫೋರ್ಜರಿ ಸಹಿ ಮಾಡಿ ನನ್ನ ಮನೆಯನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾನೆ. ಈ ಬಗ್ಗೆ ಪ್ರಶ್ನಿಸಿದ ಇನ್ನಿಬ್ಬರು ಪುತ್ರರ ಮೇಲೆ ಸುಳ್ಳು ದೂರು ದಾಖಲಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾನೆ. ಈ ಕುರಿತು ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ವಿದ್ಯಾಗಿರಿ ಪೊಲೀಸರಿಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚನೆ ಸಹ ನೀಡಲಾಗಿದೆ. ಆದರೆ, ಎರಡು ವರ್ಷಗಳಿಂದ ದೂರು ಸ್ವೀಕರಿಸಿದ ಪೊಲೀಸರು ಇಲ್ಲಿಯ ವರೆಗೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. 84 ವರ್ಷದ ತಾವು ಹತ್ತಾರು ಬಾರಿ ಠಾಣೆ ಮೆಟ್ಟಿಲು ಏರಿ ಸುಸ್ತಾಗಿದ್ದೇನೆ. ಬರೀ ಪುತ್ರ ಮಾತ್ರವಲ್ಲದೇ ವಿದ್ಯಾಗಿರಿ ಪೊಲೀಸರಿಂದಲೂ ಅನ್ಯಾಯವಾಗಿದೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೂ ಪತ್ರ ಬರೆಯುತ್ತಿದ್ದೇನೆ ಎಂದ ಪ್ರಹ್ಲಾದ ಅವರು, ನನ್ನ ಹೆಸರಿನ ಮೇಲಿರುವ ಇನ್ನುಳಿದ ಆಸ್ತಿಗಳನ್ನು ಫೋರ್ಜರಿ ಸಹಿ ಮಾಡಿ ಮಾರುವ ಸಾಧ್ಯತೆ ಇದ್ದು, ತಮಗೆ ನ್ಯಾಯ ಕೊಡಿಸಿ ಎಂದು ಪ್ರಹ್ಲಾದ ಕುಲಕರ್ಣಿ ಹಾಗೂ ಅವರ ಇನ್ನಿಬ್ಬರು ಪುತ್ರರಾದ ಸಂಜೀವ ಹಾಗೂ ವಿಜಯ ಸರ್ಕಾರದ ಬಳಿ ಮನವಿ ಮಾಡಿದರು.