ಜಿಲ್ಲಾ ಪೊಲೀಸ್‌ ಶ್ವಾನದಳದ ಬ್ರುನೋ ಶ್ವಾನ ನಿಧನ

| Published : Apr 01 2024, 12:49 AM IST

ಸಾರಾಂಶ

ಸುಮಾರು 10 ವರ್ಷ 6 ತಿಂಗಳುಗಳ ಕಾಲ ಜಿಲ್ಲಾ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸಿದ್ದ ಶ್ವಾನದಳದ (ಸ್ಪೋಟಕ ಪತ್ತೆ) ಶ್ವಾನ ಬ್ರುನೋ ನಿಧನ ಹೊಂದಿದೆ.

ಕನ್ನಡಪ್ರಭ ವಾರ್ತೆ ಬೀದರ್‌

ಸುಮಾರು 10 ವರ್ಷ 6 ತಿಂಗಳುಗಳ ಕಾಲ ಜಿಲ್ಲಾ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸಿದ್ದ ಶ್ವಾನದಳದ (ಸ್ಪೋಟಕ ಪತ್ತೆ) ಶ್ವಾನ ಬ್ರುನೋ ಭಾನುವಾರ ಬೆಳಗ್ಗೆ ನಿಧನ ಹೊಂದಿದೆ.

ರಾಜ್ಯಾದ್ಯಂತ ಗಣ್ಯವ್ಯಕ್ತಿಗಳ ಭೇಟಿ ಸಂದರ್ಭ ಎಎಸ್ಸಿ ತಂಡದೊಂದಿಗೆ ಭದ್ರತಾ ತಪಾಸಣಾ ಕಾರ್ಯದಲ್ಲಿ ಚುರುಕಾಗಿ ಭಾಗಿಯಾಗಿದ್ದು ಹಾಗೂ ವಲಯ ಮಟ್ಟದ ಪೊಲೀಸ್‌ ಕರ್ತವ್ಯ ಕೂಟ ಮತ್ತು ಇತರೆ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಕೂಡ ಭಾಗಿಯಾಗಿ ಪದಕ ವಿಜೇತವಾಗಿದ್ದು, ಬೀದರ್ ಜಿಲ್ಲಾ ಪೊಲೀಸ್‌ಗೆ ಕೀರ್ತಿ ತಂದಿದ್ದ ಶ್ವಾನ ಬ್ರುನೋನ ಅಂತ್ಯ ಕ್ರಿಯೆ ಭಾನುವಾರ ಮಧ್ಯಾಹ್ನ ಪೊಲೀಸ್‌ ಕೇಂದ್ರ ಕಚೇರಿ ಆವರಣದಲ್ಲಿ ನಡೆಯಿತು.

ಶ್ವಾನ ಬ್ರುನೋ (ಸ್ನೀಪರ್‌) 2013ರಲ್ಲಿ ಜನಿಸಿದ್ದು ತರಬೇತಿ ಮುಗಿಸಿ 2015ರ ಜ.31ರಂದು ಘಟಕಕ್ಕೆ ವರದಿ ಮಾಡಿಕೊಂಡಿತ್ತು. ಬ್ರುನೋ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲರ, ರಾಜ್ಯ ಗೃಹ ಸಚಿವರ ಕರ್ತವ್ಯ, ಮೈಸೂರು ದಸರಾ ಬೆಳಗಾವಿ ಅಧಿವೇಶನ ಹಾಗೂ ಸಂಸದ ಮತ್ತು ಶಾಸಕರ ರಕ್ಷಣಾ ಕರ್ತವ್ಯವನ್ನೂ ಮಾಡಿದೆ.

ಜಿಲ್ಲೆಯ ಎಎಸ್ಸಿ ತಂಡದ ಜೊತೆಗೆ ಸತತವಾಗಿ ಕರ್ತವ್ಯ ನಿರ್ವಹಿಸುತ್ತಿತ್ತಲ್ಲದೆ ಜಿಲ್ಲೆಯ ನಿತ್ಯದ ಕರ್ತವ್ಯ ನಿಭಾಯಿಸಿಕೊಂಡು ಬಂದಿದ್ದು, ಅದರಲ್ಲಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸ್ಥಳಗಳಾದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ, ಜಿಲ್ಲಾ ನ್ಯಾಯಾಲಯ ಸಂಕೀರ್ಣ ಮತ್ತು ಸಂಶಯಾಸ್ಪದ ಸ್ಥಳಗಳ ಪರಿಶೀಲನಾ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಹಿರಿಮೆ ಶ್ವಾನ ಬ್ರುನೋದ್ದಾಗಿದೆ.

ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ:

ಶ್ವಾನ ಬ್ರುನೋ ಅಂತ್ಯಕ್ರಿಯೆಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ಹಾಗೂ ಇಲಾಖೆ ಅಧಿಕಾರಿಗಳು ಪಾಲ್ಗೊಂಡು ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.

ಶ್ವಾನ ಬ್ರುನೋ ತನ್ನ ಸೇವಾವಧಿಯಾದ 10 ವರ್ಷ 6 ತಿಂಗಳುಗಳ ಕಾಲ ಅತೀ ಸಂಕೀರ್ಣ, ವಿಶೇಷ ಹಾಗೂ ವಿಐಪಿ, ವಿವಿಐಪಿ ಕರ್ತವ್ಯಗಳಂತಹ ಸಂದರ್ಭಗಳಲ್ಲಿಯೂ ತನ್ನ ಕರ್ತವ್ಯವನ್ನು ನಿರ್ವಹಿಸುವ ಮೂಲಕ ಜಿಲ್ಲೆಗೂ ಒಳ್ಳೆಯ ಹೆಸರನ್ನು ತರುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿದೆ.

ಬ್ರೂನೋ ಶ್ವಾನ ಮಾ.31ರಂದು ಬೆಳಗಿನ ಜಾವ ಶ್ವಾನ ದಳವನ್ನು ಅಗಲಿರುವುದು ನಮ್ಮ ಶ್ವಾನದಳಕ್ಕಷ್ಠೆ ಅಲ್ಲದೇ ಜಿಲ್ಲೆಯ ಪೊಲೀಸ್‌ ಇಲಾಖೆಗೆ ತುಂಬಲಾರದ ನಷ್ಟವಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ತಿಳಿಸಿದ್ದಾರೆ.