ಹಳಿಯಾಳ: ಬಿಎಸ್‌ಎನ್‌ಎಲ್ ಸುಧಾರಣೆ ಹಾಗೂ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಸಿಂಧಿಯಾ ಅವರು ಪ್ರಥಮ ಆದ್ಯತೆ ನೀಡಿ, ಸಾವಿರಾರು ಕೋಟಿ ರು. ಅನುದಾನ ಮೀಸಲಾಗಿಟ್ಟಿದ್ದಾರೆ. ಬಿಎಸ್‌ಎನ್‌ಎಲ್ ಈಗ ಸುಧಾರಿಸಲ್ಪಟ್ಟಿದೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಬುಧವಾರ ತಾಲೂಕಿನ ಭಾಗವತಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಬಾಳಶೆಟ್ಟಿಕೊಪ್ಪ ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಟವರ್ ಉದ್ಘಾಟಿಸಿ ಅವರು ಮಾತನಾಡಿದರು. ಟವರ್‌ಗಳಲ್ಲಿ ಬಳಸಲ್ಪಡುವ ಎಲ್ಲ ತಂತ್ರಜ್ಞಾನಗಳನ್ನು ದೇಶಿಯವಾಗಿಯೇ ಸಿದ್ಧಪಡಿಸಲಾಗಿದೆ. ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಖಾಸಗಿ ಕಂಪನಿಗಳೊಂದಿಗೆ ಗುಣಮಟ್ಟದ ಸೇವೆಯಲ್ಲಿ ಉತ್ತಮ ಪೈಪೋಟಿ ನೀಡಲಾರಂಭಿಸಿದೆ. ಕಡಿಮೆ ಕೈಗೆಟಕುವ ದರದಲ್ಲಿ ಸೇವೆಗಳು ಲಭ್ಯವಾಗುತ್ತಿರುವುದರಿಂದ ದೇಶದಲ್ಲಿ ಈಗ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ವೃದ್ಧಿಸಲಾರಂಭಿಸಿದೆ ಎಂದರು.ಗ್ರಾಮೀಣ ಭಾಗಕ್ಕೂ ಸೌಲಭ್ಯ: ಗ್ರಾಮೀಣ ಭಾಗಗಳಲ್ಲೂ ಆನ್‌ಲೈನ್ ಶಿಕ್ಷಣ, ಆನ್‌ಲೈನ್ ಕೆಲಸ, ಬ್ಯಾಂಕಿಂಗ್, ಸರ್ಕಾರಿ ಯೋಜನೆಗಳಿಗೆ ನೋಂದಣಿ ಮುಂತಾದವುಗಳಿಗಾಗಿ ಬೇಕಾಗಿರುವ ಸ್ಥಿರವಾದ 4ಜಿ ಸಂಪರ್ಕ ಸೌಲಭ್ಯಗಳನ್ನು ನೀಡುವ ಗುರಿಯು ನಮ್ಮದಾಗಿದೆ. ಅದಕ್ಕಾಗಿ ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸುಧಾರಣೆ ಮತ್ತು ಬಲವರ್ಧನೆಗೆ ಆದ್ಯತೆ ನೀಡಿ ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿನ ಹಳೆಯ 250 ಟವರ್‌ಗಳಲ್ಲಿ 163 ಟವರ್‌ಗಳನ್ನು 4ಜಿಗೆ ಪರಿವರ್ತಿಸಿ ಮೇಲ್ದರ್ಜೆಗೇರಿಸಲಾಗಿದೆ. ಹೊಸ 199 ಟವರ್‌ಗಳೆಲ್ಲವೂ 4ಜಿ ವೇಗದಲ್ಲಿ ಸೇವೆ ನೀಡುತ್ತಿವೆ. ಜಿಲ್ಲೆಯ ಜನರ ಬೇಡಿಕೆಯಂತೆ ಹೊಸದಾಗಿ 75 ಟವರ್‌ಗಳ ಸ್ಥಾಪನೆಗೆ ಕೇಂದ್ರ ಸಚಿವರು ಮಂಜೂರಾತಿ ನೀಡಿದ್ದು, ಈ ಟವರ್‌ಗಳ ಸ್ಥಾಪನೆಗಾಗಿ ಸ್ಥಳ ಪರಿಶೀಲನಾ ಕಾರ್ಯ ಮುಂದುವರೆದಿದೆ ಎಂದರು. ಜಿಲ್ಲೆಯಲ್ಲಿ ಎದುರಾಗುತ್ತಿರುವ ಬ್ಯಾಟರಿ ಬ್ಯಾಕಪ್ ಸಮಸ್ಯೆಯನ್ನು ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಅಸಹಕಾರ: ಅರಣ್ಯ ಇಲಾಖೆ ಹಾಗೂ ಹೆಸ್ಕಾಂನವರು ಸಹಕಾರ ನೀಡದೇ ಇರುವುದರಿಂದ ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಮೇಲ್ದಜೇಗರಿಸುವ ಹಾಗೂ ವಿಸ್ತರಣೆ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಸಂಸದರು ಆರೋಪಿಸಿದರು. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ಗಮನಕ್ಕೂ ಈ ಇಲಾಖೆಗಳ ಅಸಹಕಾರವನ್ನು ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಹಲವಾರು ಬಾರಿ ಸಭೆಗಳಲ್ಲಿ ಈ ಸಮಸ್ಯೆ ಪ್ರಸ್ತಾಪಿಸಿದ್ದರೂ ಯಾವ ಪ್ರಯೋಜನವಾಗಲಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳನ್ನು ಮಂಜೂರು ಮಾಡಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಸಹಕರಿಸದೇ ಇರುವುದರಿಂದ ಸಕಾಲದಲ್ಲಿ ಕೇಂದ್ರದ ಜನಪರ ಯೋಜನೆಗಳು ಅನುಷ್ಠಾನಗೊಳ್ಳಲು ತೊಡಕುಂಟಾಗುತ್ತಿದೆ ಎಂದರು.
ಸಂವಾದ: ಸಭಾ ಕಾರ್ಯಕ್ರಮದ ಆನಂತರ ಸಂಸದರು ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ, ಅವರ ಅಹವಾಲುಗಳನ್ನು ಆಲಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಬಿಎಸ್‌ಎನ್‌ಎಲ್ ಜಿಲ್ಲಾ ಡಿಜಿಎಂ ಮಲ್ಲಿಕಾರ್ಜುನ ತಾಳಿಕೋಟಿ, ಎಜಿಎಂ ಸೈನ್ ಮೋನ್, ಹಳಿಯಾಳ ವಿಭಾಗದ ಡಿಟಿಒ ರಿಜ್ವಾನ್ , ಮಾಜಿ ಶಾಸಕ ಸುನೀಲ ಹೆಗಡೆ, ಮಂಡಲ ಅಧ್ಯಕ್ಷ ವಿಠ್ಠಲ ಸಿದ್ದಣ್ಣನವರ, ಜಿಲ್ಲಾ ಆಹ್ವಾನಿತ ಮಂಗೇಶ ದೇಶಪಾಂಡೆ, ಪ್ರಮುಖರಾದ ಸಂತೋಷ ಘಟಕಾಂಬ್ಳೆ, ಶಿವಾಜಿ ನರಸಾನಿ, ಅನಿಲ್ ಮುತ್ನಾಳೆ, ಗಣಪತಿ ಕರಂಜೇಕರ, ತುಕಾರಾಮ್ ಪಾಟೀಲ ಹಾಗೂ ಇತರರು ಇದ್ದರು.