ಸಾರಾಂಶ
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕಿಗೆ ಹೋಗುವ ಹೆದ್ದಾರಿ ರಸ್ತೆಗಳಲ್ಲಿ(ಅರಣ್ಯ ಪ್ರದೇಶದಲ್ಲಿ) ಏನಾದರೂ ಅನಾಹುತಗಳು ಸಂಭವಿಸಿದ್ದಲ್ಲಿ ಸಂಪರ್ಕಿಸಲು ನೆಟ್‌ವರ್ಕ್ ಸಮಸ್ಯೆ ಇದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಸೂಚನೆ ನೀಡಿದರು.
ಶುಕ್ರವಾರ ಸಾಗರ ರಸ್ತೆಯಲ್ಲಿರುವ ಬಿಎಸ್‌ಎನ್ಎಲ್ ಕಚೇರಿಯಲ್ಲಿ ಬಿಎಸ್‌ಎನ್‌ಎಲ್ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಗುತ್ತಿಗೆದಾರರೊಂದಿಗೆ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಟವರ್‌ಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರಿ.ಜಿಲ್ಲೆಗೆ ಮಂಜೂರಾಗಿರುವ 4ಜಿ ಸ್ಯಾಚುರೇಶನ್ ನ 134 ಪ್ರಸ್ತಾಪಿತ ಸ್ಥಳಗಳಲ್ಲಿ 49 ಟವರ್‌ಗಳ ಕಾಮಗಾರಿ ಪೂರ್ಣಗೊಂಡಿದ್ದು, ಸಾರ್ವಜನಿಕ ಸೇವೆಗೆ ಲಭ್ಯವಿದೆ. 6 ಕಾಮಗಾರಿಗಳು ಪ್ರಗತಿ ಅಂತಿಮ ಹಂತದಲ್ಲಿದ್ದು, ಉಳಿದ ಕಾಮಗಾರಿಗಳ ಪ್ರಗತಿ ವಿವಿಧ ಹಂತದಲ್ಲಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಅರಣ್ಯ ಪ್ರದೇಶದ 60 ಕಡೆಗಳಲ್ಲಿ ಜಾಗ ಮಂಜೂರಾತಿ ಸ್ಟೇಜ್-1 ಮತ್ತು 2ರಲ್ಲಿ ಮಂಜೂರಾತಿ ಬಾಕಿ ಇದ್ದು, ತಕ್ಷಣವೇ ಮಂಜೂರಾತಿ ಪಡೆದು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.ಬಳಿಕ ಮಾತನಾಡಿದ ಸಂದರು, ಶಿವಮೊಗ್ಗ ಜಿಲ್ಲೆಯು ಮಲೆನಾಡು ಪ್ರದೇಶವಾಗಿದ್ದು ತೀರ್ಥಹಳ್ಳಿ, ಹೊಸನಗರ, ಸಾಗರ ಮತ್ತು ಸೊರಬ ತಾಲೂಕುಗಳಲ್ಲಿ ಸಾಕಷ್ಟು ನೆಟ್‌ವರ್ಕ್ ಸಮಸ್ಯೆ ಇದೆ. ಸಾರ್ವಜನಿಕರುಗಳಿಂದ ವ್ಯಾಪಕ ದೂರುಗಳು ಬರುತ್ತಿವೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಅಧಿಕಾರಿಗಳು ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಕ್ಷೇತ್ರದಲ್ಲಿ ಬಿಎಸ್ಎನ್ಎಲ್ ಟವರ್‌ಗಳಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ತಕ್ಷಣವೇ ಸರಿಪಡಿಸಲು ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕು. ಹೊಸನಗರ ತಾಲೂಕಿನ ಬ್ರಾಹ್ಮಣವಾಡಿ, ಕೊಳವಾಡಿ, ಗಿಣಿಕಲ್ಲು, ಮಣಸಟ್ಟೆ, ಮತ್ತಿಕೈ, ನೀಲಕಂಠನಗೋಟ, ಪಿ.ಕಲ್ಲುಕೊಪ್ಪ ಗ್ರಾಮಗಳಲ್ಲಿ ಬಹಳಷ್ಟು ವರ್ಷಗಳಿಂದ ಜಾಗ ಮಂಜೂರಾತಿ ಬಾಕಿ ಇದ್ದು, ತಕ್ಷಣವೇ ಮಂಜೂರಾತಿ ಪಡೆಯಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕೆಟಗರಿ-5 ಮತ್ತು 6ರಲ್ಲಿ ಹೊಸನಗರ ತಾಲೂಕಿಗೆ 7, ಸಾಗರ ತಾಲೂಕಿಗೆ 7, ಶಿಕಾರಿಪುರ ತಾಲೂಕಿಗೆ-2, ಸೊರಬ ತಾಲೂಕಿಗೆ 7, ತೀರ್ಥಹಳ್ಳಿ ತಾಲೂಕಿಗೆ-8 ಬಿಎಸ್ಎನ್ಎಲ್ ಟವರ್‌ಗಳು ಮಂಜೂರಾಗಿದ್ದು, ಟವರ್‌ಗಳನ್ನು ನಿರ್ಮಾಣ ಮಾಡಲು ಆದಷ್ಟು ಬೇಗ ಜಾಗವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಸಭೆಯಲ್ಲಿ ಕರ್ನಾಟಕ ವೃತ್ತದ ಬಿಎಸ್ಎನ್ಎಲ್ ಮುಖ್ಯ ಜನರಲ್ ಮ್ಯಾನೇಜರ್ (ಟೆಲಿಕಾಂ) ಎನ್.ಸುಜಾತ, ನಿಗಮದ ಜನರಲ್ ಮ್ಯಾನೇಜರ್ ಬಿ.ಕೆ.ಸಿಹ್ನಾ, ಡೆಪ್ಯೂಟಿ ಜನರಲ್ ಮ್ಯಾನೇಜರ್, ಕೃಷ್ಣ ಮೊಗೇರ ಮತ್ತು ವೆಂಕಟೇಶ್, ಸಹಾಯಕ ಜನರಲ್ ಮ್ಯಾನೇಜರ್, ಜ್ಯೂನಿಯರ್ ಟೆಲಿಕಾಂ ಅಧಿಕಾರಿಗಳಿದ್ದರು.