ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ. ಯೋಜನೆಯ ಅಡಿಯಲ್ಲಿ ಮೀಸಲಿಟ್ಟಿರುವ ಕೋಟ್ಯಂತರ ರುಪಾಯಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನವ್ನನು ನೀಡಿ ನಿರ್ದಿಷ್ಟ ಯೋಜನೆಗಳಿಗೆ ಮಾತ್ರ ಅನುದಾನ ಬಳಸಲು ಸೂಚನೆ ನೀಡುವಂತೆ ಆಗ್ರಹಿಸಿ ಬಹುಜನ ಸಮಾಜ ಪಕ್ಷದಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಮನವಿ ಸಲ್ಲಿಸಿದರು. ಇದೆ ವೇಳೆ ಬಿ.ಎಸ್.ಪಿ. ರಾಜ್ಯ ಉಪಾಧ್ಯಕ್ಷ ಗಂಗಾಧರ್ ಧರಣಿ ಉದ್ದೇಶಿಸಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಸ್‌ಸಿ/ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೆಂದು ಜಾರಿಗೆ ತಂದ ಎಸ್ ಸಿಪಿ ಮತ್ತು ಟಿಎಸ್‌ಪಿ ಕಾಯ್ದೆ ಅನ್ವಯ ೨೦೨೩-೨೪ ಮತ್ತು ೨೦೨೪-೨೫ನೇ ಸಾಲಿನ ೨ ವರ್ಷಗಳಲ್ಲಿ ರು. ೨೫ ಸಾವಿರದ ೩೯೯ ಕೋಟಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ನೇರವಾಗಿ ಎಸ್‌ಸಿ /ಎಸ್‌ಟಿಗಳ ಕುತ್ತಿಗೆ ಕುಯ್ಯುವ ಕೆಲಸ ಮಾಡಿದೆ. ೨೦೧೪ ರಿಂದ ಇದುವರೆಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ಈ ಮೂರು ಸರ್ಕಾರಗಳು ಒಟ್ಟು ಸುಮಾರು ೭೦ ಸಾವಿರ ಕೋಟಿ ರುಪಾಯಿಗಳ ದುರ್ಬಳಕೆ ಮಾಡಿಕೊಂಡು ಮಹಾನ್ ದ್ರೋಹ ಬಗೆದಿವೆ ಎಂದು ದೂರಿದರು.
ಮೀಸಲು ಹಣವನ್ನು ದುರ್ಬಳಕೆ ಮಾಡಲು ನಾಂದಿ ಹಾಡಿದ್ದು, ಇದೇ ಕಾಂಗ್ರೆಸ್ ಸರ್ಕಾರ. ಮುಂದೆ ಬಂದ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳೂ ಕೂಡ ಇದೇ ದಾರಿಯನ್ನು ಹಿಡಿದು ಎಸ್‌ಸಿ /ಎಸ್‌ಟಿ ಮೀಸಲು ಹಣವನ್ನು ದುರ್ಬಳಕೆ ಮಾಡಿಕೊಳ್ಳಲು ಹಿಂಜರಿಯಲಿಲ್ಲ. ಎಸ್.ಸಿ.ಎಸ್.ಪಿ. / ಟಿ.ಎಸ್.ಪಿ. ಕಾನೂನು ಜಾರಿಯಾದಾಗಿನಿಂದ ಇದೂವರೆಗೆ ಹತ್ತು ವರ್ಷಗಳಲ್ಲಿ ೨ ಲಕ್ಷದ ೫೬ ಸಾವಿರ ೧೨ ಕೋಟಿಗಳನ್ನು ಈ ಯೋಜನೆಗೆ ಮೀಸಲಿರಿಸಲಾಗಿದೆ. ಈ ಹಣದಿಂದ ಕರ್ನಾಟಕದ ಎಸ್‌ಸಿ/ಎಸ್‌ಟಿ ಜನಾಂಗದ ಅಭಿವೃದ್ಧಿಗೆ ಮಾಡಬಹುದಾಗಿದ್ದ ಯೋಜನೆಗಳು ಎಂದರೇ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಎಂ.ಬಿ.ಬಿ.ಎಸ್. ಪಿಎಚ್.ಡಿವರೆಗೆ ಗುಣಮಟ್ಟದ ಉಚಿತ ಶಿಕ್ಷಣ ನೀಡಬಹುದಿತ್ತು. ಶಿಕ್ಷಣದಿಂದ ಉನ್ನತ ಶಿಕ್ಷಣದ ವರೆಗೆ, ಬಿ.ಇ, ಲಕ್ಷಾಂತರ ಎಸ್‌ಸಿ, ಎಸ್‌ಟಿ ನಿರುದ್ಯೋಗಿ ಯುವಜನತೆಗೆ ಸ್ವಯಂ ಉದ್ಯೋಗ ಒದಗಿಸಬಹುದಿತ್ತು. ಆದರೆ ಈ ಮೂರೂ ಪಕ್ಷದ ಸರ್ಕಾರಗಳು ಈ ಯೋಜನೆಯ ಶೇ. ೧೦% ರಷ್ಟನ್ನು ಕೂಡ ಎಸ್‌ಸಿ/ಎಸ್‌ಟಿಗಳಿಗೆ ನೇರವಾಗಿ ತಲುಪಿಸದೆ ಮಹಾ ದ್ರೋಹ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆದರೆ ಎಸ್‌ಸಿ /ಎಸ್‌ಟಿ ವಿದ್ಯಾರ್ಥಿಗಳು ಕೇವಲ ಟಾಪ್ ೧೦೦ ಯೂನಿವರ್ಸಿಟಿಗಳಲ್ಲಿ ಸೀಟು ಪಡೆದರೆ ಮಾತ್ರ ಸ್ಕಾಲರ್ಶಿಪ್ ಎಂಬ ಕೊಕ್ಕೆ ಹಾಕಿ ಅನ್ಯಾಯವನ್ನು ಮಾಡಿದೆ. ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳ, ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ಪ್ರಾರಂಭದಲ್ಲೇ ಪೂರ್ಣ ಶುಲ್ಕ ಪಾವತಿಸುವಂತೆ ಮಾಡಲಾಗಿದೆ. ಎರಡು ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಎಸ್‌ಸಿ/ಎಸ್‌ಟಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಚುನಾವಣೆಯಲ್ಲಿ ಭರವಸೆ ನೀಡಿದ್ದಂತೆ ಲಕ್ಷಾಂತರ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಖಾಸಗಿ ವಲಯದಲ್ಲಿ ಮೀಸಲಾತಿಗೆ ಕಾಯ್ದೆ ತಂದಿರುವುದಿಲ್ಲ ಎಂದ ಅವರು, ಸಮಾಜಕ್ಕೆ ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಎಸ್‌ಸಿ,ಎಸ್‌ಟಿ ಮೀಸಲು ಕ್ಷೇತ್ರಗಳಿಂದ ಗೆದ್ದಿರುವ ಮೂರೂ ಪಕ್ಷಗಳ ಒಬ್ಬ ಶಾಸಕನೂ, ಮಂತ್ರಿ, ಸಂಸದರು ಬಾಯಿ ಬಿಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಈ ಘೋರ ಅನ್ಯಾಯವನ್ನು ಪ್ರತಿಭಟಿಸಿ ಸರಿಪಡಿಸದಿದ್ದರೆ ಮುಂದಿನ ಪೀಳಿಗೆಗೆ ಏನೂ ಇಲ್ಲದಂತಾಗಿ ಅವರು ನಮ್ಮನ್ನು ಖಂಡಿತ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಸರ್ಕಾರವು ಇಂದು ಎಸ್‌ಸಿ ಎಸ್‌ಟಿಗಳಿಗೆ ಅನ್ಯಾಯ ಮಾಡಿದಾಗ ಸುಮ್ಮನಿದ್ದರೆ ನಾಳೆ ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಅನ್ಯಾಯ ಮಾಡಲು ಮುಂದಾಗುತ್ತದೆ. ಬಿಜೆಪಿ, ಜೆಡಿಎಸ್ ಇದೇ ಚಾಳಿಯನ್ನು ಮುಂದುವರೆಸುತ್ತವೆ. ಏಳಿ ಎದ್ದೇಳಿ ಜಾಗ್ರತರಾಗಿ ಬಂಧುಗಳೇ, ಈ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಂತಹ ಮನುವಾದಿ ಪಕ್ಷಗಳಿಂದ ಖಂಡಿತ ನಮ್ಮ ಉದ್ಧಾರ ಸಾಧ್ಯವಿಲ್ಲ. ಬಾಬಾಸಾಹೇಬರು ಹೇಳಿದಂತೆ "ದಗಾಕೋರರ ಮನಬದಲಿಸಿ ನಮ್ಮ ನಿಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ನಿರಂತರ ಹೋರಾಟದಿಂದ ಮಾತ್ರ ಇದು ಸಾಧ್ಯ ಎಂಬುದನ್ನು ಮರೆಯುವುದು ಬೇಡ ". ಜ್ಯಾತ್ಯತೀತ ಮನುವಾದಿ ಕಾಂಗ್ರೆಸ್ ಮತ್ತು ಜಾತಿವಾದಿ ಮನುವಾದಿ ಬಿಜೆಪಿ ಮತ್ತು ಜೆಡಿಎಸ್ ಒಂದೇ ದೇಹದ ಎರಡು ಕೈಗಳಿದ್ದಂತೆ. ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇವರಿಂದ ಬಹುಜನರ ಉದ್ಧಾರ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಹರೀಶ್ ಅತ್ನಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ. ಶಿವಮ್ಮ, ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್, ಜಿಲ್ಲಾ ಸಂಯೋಜಕ ಲಕ್ಷ್ಮಣ್ ಕೀರ್ತಿ, ಎಚ್.ಬಿ. ಮಲ್ಲಯ್ಯ, ಮೋಹನ್ ಕುಮಾರ್ ಇತರರು ಉಪಸ್ಥಿತರಿದ್ದರು.