ಸಂವಿಧಾನ ಯಥಾವತ್ತು ಜಾರಿಯೇ ಬಿಎಸ್ಪಿಯ ಪ್ರಣಾಳಿಕೆ

| Published : Mar 19 2024, 12:51 AM IST

ಸಾರಾಂಶ

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚುನಾವಣೆಯಲ್ಲಿ ಗೆಲವು ಸಾಧಿಸಲು ಪ್ರಣಾಳಿಕೆ ಬಿಡುಗಡೆ ಮಾಡುತ್ತವೆ. ಆದರೆ, ಬಿಎಸ್ಪಿ ಪಕ್ಷವೂ ಸಂವಿಧಾನವನ್ನು ಯಥಾವತ್ತು ಜಾರಿಗೆ ತರುವುದನ್ನೇ ಪ್ರಣಾಳಿಕೆ ಮಾಡಿಕೊಂಡು ಜನರ ಮುಂದೆ ಹೋಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಎಸ್ಪಿ ಅಭ್ಯರ್ಥಿ ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚುನಾವಣೆಯಲ್ಲಿ ಗೆಲವು ಸಾಧಿಸಲು ಪ್ರಣಾಳಿಕೆ ಬಿಡುಗಡೆ ಮಾಡುತ್ತವೆ. ಆದರೆ, ಬಿಎಸ್ಪಿ ಪಕ್ಷವೂ ಸಂವಿಧಾನವನ್ನು ಯಥಾವತ್ತು ಜಾರಿಗೆ ತರುವುದನ್ನೇ ಪ್ರಣಾಳಿಕೆ ಮಾಡಿಕೊಂಡು ಜನರ ಮುಂದೆ ಹೋಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಎಸ್ಪಿ ಅಭ್ಯರ್ಥಿ ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬಿಎಸ್ಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡಲಿದೆ. ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಅವಕಾಶ ನೀಡಿದಂತೆ, ಮತದಾರರು ಬಹುಜನಸಮಾಜ ಪಕ್ಷಕ್ಕೆ ಒಂದು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಪಕ್ಷವೂ ದೇಶದ ಎಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ್ಯವಾಗಿ ಸ್ಪರ್ಧಿಸುತ್ತಿದೆ. ನಾವು ಎನ್‌ಡಿಎ ಹಾಗೂ ಐಎನ್‌ಡಿಐ ಒಕ್ಕೂಟವನ್ನು ಸೇರದೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ. ನಮ್ಮ ಪಕ್ಷಕ್ಕೆ ಬಹುಮತ ದೊರೆತರೆ, ಸಂವಿಧಾನದ ಆಶಯಗಳನ್ನು ಯಥಾವತ್ತಾಗಿ ಜಾರಿ ಮಾಡುತ್ತೇವೆ. ಉಚಿತ ಶಿಕ್ಷಣ, ಆರೋಗ್ಯ ಹಾಗೂ ನಿರುದ್ಯೋಗ ನಿವಾರಣೆ, ಭೂ ರಹಿತರಿಗೆ ಭೂಮಿ ನೀಡುವುದು ನಮ್ಮ ಉದ್ದೇಶ ಎಂದರು.

ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದಿವೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ, ಡಿಸಿಎಂ ಆಗಿದ್ದಾರೆ. ಅವರ ಸಹೋದರ ಹಾಲಿ ಸಂಸದರಾಗಿದ್ದಾರೆ. ಎಚ್‌ಡಿಕೆ ಕುಟುಂಬ ರಾಜಕಾರಣದ ಹಿನ್ನೆಲೆ ಹೊಂದಿದೆ. ಹಾಲಿ ಎನ್‌ಡಿಎ ಅಭ್ಯರ್ಥಿಯಾಗಿರುವ ಡಾ.ಮಂಜುನಾಥ್ ಸಹ ಮಾಜಿ ಪ್ರಧಾನಿ ದೇವೇಗೌಡರ ಅಳಿಯ. ಇಂತಹ ಕುಟುಂಬ ರಾಜಕಾರಣಕ್ಕೆ ಜಿಲ್ಲೆಯಲ್ಲಿ ಬ್ರೇಕ್ ಹಾಕಬೇಕಿದೆ ಎಂದರು.

ಚುನಾವಣೆಯಲ್ಲಿ ಮಂಜುನಾಥ್ ಗೆಲವು ಸಾಧಿಸಿದರೆ ಬಿಜೆಪಿ ಕೈಗೊಂಬೆಯಾಗಲಿದ್ದಾರೆ. ಸುರೇಶ್ ಮತ್ತೆ ಆಯ್ಕೆಯಾದರೆ, ಅವರ ಅಸ್ತಿ ರಕ್ಷಣೆ ಮಾಡಿಕೊಳ್ಳಲಿದ್ದಾರೆ. ನನಗೆ ಒಂದು ಅವಕಾಶ ನೀಡಿದರೆ ಇಎಸ್ಐ ಆಸ್ಪತ್ರೆ, ಮೇಕೆದಾಟು ಯೋಜನೆ ಜಾರಿ ಸೇರಿದಂತೆ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದರು.

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ನಾಗೇಶ್‌ ಮಾತನಾಡಿ, ಹಾಲಿ ಸಂಸದ ಡಿ.ಕೆ.ಸುರೇಶ್ ಅಭಿವೃದ್ಧಿ ಮಾಡಿದ್ದರೆ, ಮತದಾರರಿಗೆ ಕುಕ್ಕರ್, ತವಾ ಹಾಗೂ ಸೀರೆ ಹಂಚಿಕೆ ಮಾಡುವ ಪ್ರಮೆಯವೇ ಬರುತ್ತಿರಲಿಲ್ಲ. ಯುಗಾದಿ ಹಬ್ಬದ ಕೊಡುಗೆಯಾಗಿ ಮತದಾರರಿಗೆ ಕೋಳಿ ಹಾಗೂ ಕುರಿ ಹಂಚಿಕೆ ಮಾಡುತ್ತಿದೆ. ಜತೆಗೆ, ಎಸ್ಸಿ ಎಸ್ಟಿ ಅಭಿವೃದ್ಧಿಗೆ ಮೀಸಲಿಟ್ಟಿದ್ದ 11 ಸಾವಿರ ಕೋಟಿ ಹಣ ದುರುಪಯೋಗವಾಗಿದ್ದು, ಗ್ಯಾರಂಟಿ ಯೋಜನೆ ಜಾರಿಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಇತ್ತೀಚಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಂಬೇಡ್ಕರ್ ಜಾಥಾ ಕಾರ್ಯಕ್ರಮ ಆಯೋಜಿಸಿತ್ತು. ಇದಕ್ಕೆ ಸಮಾಜ ಕಲ್ಯಾಣ ಇಲಾಖೆ ಹಣ ಬಳಕೆ ಮಾಡಿಕೊಂಡಿದೆ. ಇನ್ನು ಜಾಥಾವನ್ನು ದಲಿತರ ಕಾಲೋನಿಯಲ್ಲಿ ಮಾತ್ರ ಸಂಚರಿಸುವಂತೆ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಚಾಲನೆ ನೀಡುವಾಗ ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಮಿಸಿದ್ದರು. ಇದಾದ ಬಳಿಕ ಜಾಥಾದಲ್ಲಿ ಯಾರು ಕಾಣಿಸಿಕೊಂಡಿಲ್ಲ. ಜತೆಗೆ, ಇಡೀ ಜಾಥಾ ಕಾರ್ಯಕ್ರಮ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಂದಾನಪ್ಪ, ಕೃಷ್ಣಪ್ಪ, ಮಹದೇವ, ಅಬ್ದುಲ್, ದೇವರಾಜು, ಸ್ವಾಮಿ, ಉಮೇಶ್, ವೆಂಕಟಚಲ, ಗೌರಮ್ಮ, ಪಾರ್ವತಮ್ಮ, ಸುರೇಶ್, ಕೃಷ್ಣ ಮೂರ್ತಿ, ರಮೇಶ್, ಮುರುಗೇಶ್, ಬಸವರಾಜು, ಗೌರಿ ಶಂಕರ್, ಲೋಕೇಶ್, ತಬ್ರೇಜ್ ಪಾಷ, ಅಜಯ್ ಇದ್ದರು.

ಡಿ.ಕೆ.ಸುರೇಶ್ ಸಂಸದರಾಗಿ ಒಂದೆ ಒಂದು ಅನುದಾನ ತಂದು ಕೆಲಸ ಮಾಡಿಲ್ಲ. ಇನ್ನೂ 10 ವರ್ಷವಾದರು ಕೇಂದ್ರದ ಯೋಜನೆಗಳನ್ನು ತರುವುದಿಲ್ಲ. ಯಾವುದಾದರು ಅನುದಾನ ತಂದಿದ್ದರೆ ಶ್ವೇತ ಪತ್ರ ಹೊರಡಿಸಿ ಮತ ಕೇಳಲಿ. ಸರ್ಕಾರಿ ಕಾರ್ಯಕ್ರಮಗಳಲ್ಲಿ ತೊಡೆ ತಟ್ಟೋದು, ಗಲಾಟೆಯನ್ನಷ್ಟೇ ಮಾಡಿದ್ದಾರೆ. ಕೆಲ ತಿಂಗಳಿಂದ ಗ್ರಾಪಂನವರ ಹಣದಲ್ಲಿ ಹಾಕಿದ ಪೆಂಡಲ್ ಕಳಗೆ ಕುಳಿತುಕೊಂಡು ಅಭಿವೃದ್ಧಿ ಮಾಡಿದ್ದೇವೆ, ಬಿಟ್ಟಿ ಭಾಗ್ಯ ಕೊಟ್ಟಿದ್ದೇವೆ ನನಗೆ ಮತ ಕೊಡಿ ಅಂತ ಕೇಳುತ್ತಿದ್ದಾರೆ.

- ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ, ಬಿಎಸ್ಪಿ ಅಭ್ಯರ್ಥಿ, ಬೆಂಗಳೂರು ಗ್ರಾ. ಕ್ಷೇತ್ರ