ಡಿಸಿಸಿ ಬ್ಯಾಂಕ್‌ ನಡೆಸಿದ ಹರಾಜಿನಲ್ಲಿ 184ಕೋಟಿ ರು.ಗೆ ಬಿಎಸ್‌ಎಸ್‌ಕೆ ಬಿಕರಿ

| Published : Dec 17 2024, 12:46 AM IST

ಸಾರಾಂಶ

₹255 ಕೋಟಿ ಸಾಲವನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಹೊಂದಿರುವ ಬಿಎಸ್‌ಎಸ್‌ಕೆ ಸಾಲ ಮರುಪಾವತಿಸಲಾಗದಕ್ಕೆ ಹರಾಜು ಪ್ರಕ್ರಿಯೆ ಆರಂಭಿಸಿದ ಡಿಸಿಸಿ ಬ್ಯಾಂಕ್‌ ಇದೀಗ ತನ್ನ ಅಸ್ತಿತ್ವವನ್ನೂ ಉಳಿಸಿಕೊಳ್ಳಲು ಹರಾಜು ಪ್ರಕ್ರಿಯೆ ನಡೆಸಿದೆ.

ಕನ್ನಡಪ್ರಭ ವಾರ್ತೆ, ಬೀದರ್‌

ಜಿಲ್ಲೆಯ ಪ್ರಥಮ ಸಹಕಾರ ಸಕ್ಕರೆ ಕಾರ್ಖಾನೆ, ರೈತರ ಜೀವನಾಡಿಯಾಗಿದ್ದ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಇದೀಗ ಖಾಸಗಿಯವರ ಪಾಲಾಗಿದೆ. ಸಾಲದ ಸುಳಿಗೆ ಸಿಲುಕಿದ್ದ ಕಾರ್ಖಾನೆಯೀಗ ಡಿಸಿಸಿ ಬ್ಯಾಂಕ್‌ ನಡೆಸಿದ ಹರಾಜಿನಲ್ಲಿ ಬಿಕರಿಯಾಗಿದೆ.ಬೀದರ್‌ನ ಹಳ್ಳಿಖೇಡ್‌ (ಬಿ) ಸಮೀಪದ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯ 141.8ಎಕರೆ ಜಮೀನು, ಕಾರ್ಖಾನೆಯ ಯಂತ್ರೋಪಕರಣಗಳು, ಪೆಟ್ರೋಲ್‌ ಪಂಪ್‌ ಸೇರಿದಂತೆ ಎಲ್ಲ ಆಸ್ತಿಯನ್ನೂ ಹರಾಜಿನಲ್ಲಿ ಜಿಲ್ಲೆಯ ಸುಭಾಷ ಗಂಗಾ ಅವರು 184ಕೋಟಿ ರು.ಗಳಿಗೆ ಖರೀದಿಸಿದ್ದಾರೆ.

ಬೀದರ್‌ ಸಹಕಾರ ಕೇಂದ್ರ ಬ್ಯಾಂಕ್‌ನಿಂದ ಸೋಮವಾರ ಡಿ. 16ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಉದ್ಯಮಿ ಸುಭಾಷ ಗಂಗಾ 184 ಕೋಟಿ ರು.ಗಳಿಗೆ ಖಾರ್ಖಾನೆ ಖರೀದಿಸಿದ್ದು, ರಾಜ್ಯದಲ್ಲಿ ಹಲವು ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿರುವ ನಿರಾನಿ, ಏಸರ್‌ ಮತ್ತಿತರ ಕಂಪನಿಗಳ ಎದುರು ಸುಭಾಷ ಗಂಗಾ ಗೆದ್ದಿದ್ದಾರೆ.

1963ರಲ್ಲಿ ಆರಂಭವಾಗಿ ಇಲ್ಲಿಯವರೆಗೆ 25700 ಶೇರುದಾರರು 500 ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಯು 136 ಕೋಟಿ ರು.ಗಳ ಅಸಲು, 119 ಕೋಟಿ ಬಡ್ಡಿ ಸೇರಿ ಒಟ್ಟು 255 ಕೋಟಿ ಸಾಲವನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಹೊಂದಿದೆ. ಸಾಲ ಮರುಪಾವತಿಸಲಾಗದಕ್ಕೆ ಹರಾಜು ಪ್ರಕ್ರಿಯೆ ಆರಂಭಿಸಿದ ಡಿಸಿಸಿ ಬ್ಯಾಂಕ್‌ ಇದೀಗ ತನ್ನ ಅಸ್ತಿತ್ವವನ್ನೂ ಉಳಿಸಿಕೊಳ್ಳಲು ಹರಾಜು ಪ್ರಕ್ರಿಯೆ ನಡೆಸುವ ಅನಿವಾರ್ಯತೆಯನ್ನು ಹೊಂದಿತ್ತು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಪ್ರಾಂಗಣದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಈಗಾಗಲೇ 5 ಲಕ್ಷ ರು. ಇಎಂಡಿ ಪಾವತಿಸಿದ್ದು, ಹರಾಜಿನಲ್ಲಿ ಗೆದ್ದಿರುವ ಸುಭಾಷ ಗಂಗಾ ಅವರು ಒಟ್ಟು 184 ಕೋಟಿ ರು.ಗಳ ಪೈಕಿ ಶೇ. 25ರಷ್ಟು ಹಣವನ್ನು ಒಂದು ವಾರದಲ್ಲಿ ಪಾವತಿಸಿದರೆ ಒಂದು ತಿಂಗಳಲ್ಲಿ ಸಂಪೂರ್ಣ ಹಣ ಪಾವತಿಸಬೇಕಿದೆ.ಒಂದು ವೇಳೆ ಇಷ್ಟೊಂದು ಹಣವನ್ನು ಹರಾಜು ಪ್ರಕ್ರಿಯೆಯಲ್ಲಿ ಗೆದ್ದವರು ಒಂದು ತಿಂಗಳಲ್ಲಿ ಕಟ್ಟದಿದ್ದಲ್ಲಿ ಇಎಂಡಿ ಮುಟ್ಟುಗೋಲಾಗುವ ಸಾಧ್ಯತೆಗಳಿದ್ದರೂ 6 ದಶಕಗಳ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಖಾಸಗಿ ಮಡಿಲಿಗೆ ಬಿದ್ದಂತಾಗಿದೆ.ಬಾಕ್ಸ್‌:

ಬಿಎಸ್‌ಎಸ್‌ಕೆ ಹರಾಜು ಪ್ರಕ್ರಿಯೆ ನಡೆಸದಂತೆ ಪ್ರತಿಭಟಿಸಿದ ರೈತರು

ಬೀದರ್‌ : ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜಿಗೆ ರೈತರು ಆಕ್ರೋಶ ವ್ಯಕ್ತಪಡಿಸಿ, ಖಾಸಗಿ ಒಡೆತನಕ್ಕೆ ಕಾರ್ಖಾನೆ ಹೋದಲ್ಲಿ ರೈತರ ಹಿತ ದೂರವಾಗುತ್ತೆ ಎಂದು ಆತಂಕ ವ್ಯಕ್ತಪಡಿಸಿದರು.ಅವರು ಹರಾಜು ಪ್ರಕ್ರಿಯೆ ನಡೆಯುತ್ತಿದ್ದ ಬೀದರ್‌ ಸಹಕಾರ ಕೇಂದ್ರ ಬ್ಯಾಂಕ್‌ ಎದುರು ಪ್ರತಿಭಟನೆಗೆ ಯತ್ನಿಸಿದ ರೈತರು ಸರ್ಕಾರ ಈ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿ ಸರ್ಕಾರದಿಂದಲೇ ಹಣಕಾಸು ನೆರವು ಕೊಡಬೇಕೆಂದು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್‌ ಎದುರು ಪೊಲೀಸರ ಬಿಗಿ ಬಂದೋಬಸ್ತ್‌ ಹಾಕಲಾಗಿತ್ತು.

ಬೀದರ್‌ನ ಡಿಸಿಸಿ ಬ್ಯಾಂಕ್‌ ಸಿಇಒ ಮಂಜುಳಾ ಮಾತನಾಡಿ, ಬೀದರ್‌ ಸಹಕಾರ ಕೇಂದ್ರ ಬ್ಯಾಂಕ್‌ಗೆ ಬಿಎಸ್‌ಎಸ್‌ಕೆ ಕಾರ್ಖಾನೆಯಿಂದ 250 ಕೋಟಿ ರು.ಗಳಿಗೂ ಹೆಚ್ಚು ಸಾಲದ ಹೊರೆಯಿತ್ತು. ಇದೀಗ 184 ಕೋಟಿ ರು.ಗಳಿಗೆ ಹರಾಜು ಪ್ರಕ್ರಿಯೆ ಮುಗಿಸಿದ್ದು, ಹರಾಜಿನಲ್ಲಿ ಕಾರ್ಖಾನೆ ಪಡೆದವರು ನಿಗದಿಯಂತೆ ಒಂದು ತಿಂಗಳ ಒಳಗಾಗಿ ಸಂಪೂರ್ಣ ಮೊತ್ತವನ್ನು ಬ್ಯಾಂಕ್‌ಗೆ ಪಾವತಿಸದಿದ್ದಲ್ಲಿ ಇದೇ ಸಂದರ್ಭದಲ್ಲಿ ಹರಾಜಿನಲ್ಲಿ ನಿಗದಿಯಾಗಿರುವ 184 ಕೋಟಿ ರು.ಗಳನ್ನು ಸರ್ಕಾರ ಪಾವತಿಸಿದ್ದೆಯಾದಲ್ಲಿ ಕಾರ್ಖಾನೆಯನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಯೋಚಿಸಬಹುದು ಎಂದರು.