ಬಿಎಸ್‌ವೈ, ಬೊಮ್ಮಾಯಿ ಅಂತಾ ಜಿದ್ದಿಗೆ ತನಿಖೆ ಮಾಡುತ್ತಿಲ್ಲ

| Published : Nov 21 2024, 01:00 AM IST

ಸಾರಾಂಶ

ಕುನ್ಹಾ ಸಮಿತಿ ಮಧ್ಯಂತರ ವರದಿ ಆದರಿಸಿ ಕೋವಿಡ್ ತನಿಖೆ: ದಿನೇಶ ಗುಂಡೂರಾವ್‌

ಕನ್ನಡಪ್ರಭ ವಾರ್ತೆ ದಾವಣಗೆರೆ

ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸುಧಾಕರ, ಶ್ರೀರಾಮುಲು ಅಂತಾ ಜಿದ್ದಿಗೆ ಬಿದ್ದು ಕೋವಿಡ್ ಹಗರಣದ ತನಿಖೆ ಮಾಡುತ್ತಿಲ್ಲ. ನ್ಯಾ.ಕುನ್ಹಾ ಸಮಿತಿ ನೀಡಿದ ಮಧ್ಯಂತರ ವರದಿ ಆದಾದರ ಮೇಲೆ ಎಸ್ಐಟಿಗೆ ಸಮಗ್ರ ತನಿಖೆಗೆ ಒಪ್ಪಿಸಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂಕಷ್ಟ ಕಾಲವನ್ನು ಬಿಜೆಪಿಯವರು ದುರುಪಯೋಗ ಪಡಿಸಿಕೊಂಡಿದ್ದಾರೆ. ಸುಖಾಸುಮ್ಮನೇ ನಾವೇನು ಆರೋಪ ಮಾಡುತ್ತಿಲ್ಲ. ಅದಕ್ಕಾಗಿ ನ್ಯಾ.ಕುನ್ಹಾ ಸಮಿತಿ ಸಮಗ್ರ ತನಿಖೆ ಕೈಗೊಂಡಿದೆ ಎಂದರು.

ಕುನ್ಹಾ ಸಮಿತಿ ನೀಡಿದ ಮಧ್ಯಂತರ ವರದಿ ಆದಾರದಲ್ಲೇ ಎಸ್‌ಐಟಿ ತನಿಖೆಗೆ ಪ್ರಕರಣವನ್ನು ಒಪ್ಪಿಸಿದ್ದೇವೆ. ಯಡಿಯೂರಪ್ಪ, ಬೊಮ್ಮಾಯಿ, ಸುಧಾಕರ್, ರಾಮುಲು ಅಂತೆಲ್ಲಾ ಜಿದ್ದಿಗೆ ಬಿದ್ದು ನಾವೇನೂ ತನಿಖೆ ಮಾಡುತ್ತಿಲ್ಲ. ಕಷ್ಟಕಾಲದಲ್ಲಿ ಹಣ ದುರುಪಯೋಗವಾಗಿದೆ. ಅದಕ್ಕಾಗಿಯೇ ಎಸ್‌ಐಟಿ ಮಾಡಿದ್ದೇವೆ. ಕಷ್ಟಕಾಲದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆಂದರೆ ಅಂತಹವರಿಗೆ ಶಿಕ್ಷೆ ಆಗಲೇಬೇಕು ಅನ್ನೋದು ನಮ್ಮ ಉದ್ದೇಶ ಎಂದರು.

ಅನರ್ಹ ಪಡಿತರ ಚೀಟಿಗಳನ್ನು ಮಾತ್ರ ನಾವು ರದ್ಧುಪಡಿಸಿದ್ದೇವೆ. ನಿಜವಾದವರಿಗೆ ಪಡಿತರ ಚೀಟಿ ಕೈತಪ್ಪಿದ್ದರೆ ಅಂತಹವರಿಗೆ ಪುನಾ ಅರ್ಜಿ ಸಲ್ಲಿಸಿ, ಪಡಿತರ ಚೀಟಿ ಪಡೆಯಲು ಅವಕಾಶ ಇರುತ್ತದೆ. ಗ್ಯಾರಂಟಿ ಯೋಜನೆಗಳ ಕಾರಣಕ್ಕಾಗಿ ನಾವು ಅನರ್ಹ ಪಡಿತರ ಚೀಟಿಗಳನ್ನು ರದ್ಧುಪಡಿಸುತ್ತಿಲ್ಲ. ಅನರ್ಹ ಪಡಿತರ ಚೀಟಿ ರದ್ಧುಪಡಿಸುವುದು ನಿರಂತರ ಪ್ರಕ್ರಿಯೆ ಎಂದು ಪಡಿತರ ಚೀಟಿ ಅನರ್ಹಗೊಳಿಸುವ ಸರ್ಕಾರದ ಕ್ರಮವನ್ನು ಅವರು ಸಮರ್ಥಿಸಿಕೊಂಡರು.

ಕೇಂದ್ರದ ನಬಾರ್ಡ್‌ನಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಅನ್ಯಾಯವಾಗಿದೆ. ನಬಾರ್ಡ್‌ನಿಂದ ಬರುವ ಅನುದಾನದಲ್ಲಿ ಶೇ.50ರಷ್ಟು ಅನುದಾನ ಕಡಿತ ಮಾಡಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ ಯಾಕೆ ನಬಾರ್ಡ್ ಅನುದಾನ ಶೇ.50ರಷ್ಟು ಕಡಿಮೆಯಾದ ಬಗ್ಗೆ ಚಕಾರ ಎತ್ತುತ್ತಿಲ್ಲ. ಈ ವಿಚಾರದ ಬಗ್ಗೆ ಯಾಕೆ ಎಲ್ಲೂ ಮಾತನಾಡುತ್ತಿಲ್ಲ. ಬಿಪಿಎಲ್ ಕಾರ್ಡ್‌ ಬಗ್ಗೆ ಮಾತ್ರ ಧ್ವನಿ ಎತ್ತುತ್ತಿದ್ದಾರೆ ಎಂದು ದಿನೇಶ ಗುಂಡೂರಾವ್ ಕಿಡಿಕಾರಿದರು.

ಸರ್ಕಾರಿ ಆಸ್ಪತ್ರೆ ಶುಲ್ಕ ಹೆಚ್ಚಳ ದೊಡ್ಡ ವಿಚಾರವಲ್ಲ: ದಿನೇಶ ಗುಂಡೂರಾವ್‌

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ಹೆಚ್ಚಳವಾಗಿರುವುದೇನೂ ದೊಡ್ಡ ವಿಚಾರವಲ್ಲ. ಹೀಗೆ ಬರುವ ಹಣ ಸರ್ಕಾರಕ್ಕೆ ಬರುವುದಿಲ್ಲ. ಅದು ಎಆರ್‌ಎಸ್ ಸಮಿತಿ, ಆಸ್ಪತ್ರೆಗೆ ಹೋಗುವ ಹಣ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಸ್ಪಷ್ಪಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಆರ್‌ಎಸ್‌ ಸಮಿತಿ, ಆಸ್ಪತ್ರೆಗೆ ಹೋಗುವ ಹಣ ಅದಾಗಿದ್ದು, ಸರ್ಕಾರಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಹೆಚ್ಚಳದ ಹಣ ಸರ್ಕಾರಕ್ಕೆ ಬರುವುದಿಲ್ಲ ಎಂದು ತಿಳಿಸಿದರು.

ಸುಮಾರು ವರ್ಷಗಳಿಂದ 10 ರು.ಇದ್ದುದು, 20 ರು.ಗಳಿಗೆ, 30ರು. ಇದ್ದುದನ್ನು 40 ರು.ಗೆ ಹೆಚ್ಚಳ ಮಾಡಿದ್ದಾರೆ. 10 ರು. ಹೆಚ್ಚಳವೇನೂ ದೊಡ್ಡ ವಿಚಾರವೂ ಅಲ್ಲ. ಇದನ್ನೆಲ್ಲಾ ತೀರ್ಮಾನ ಮಾಡುವುದು ಎಆರ್‌ಎಸ್‌ ಸಮಿತಿಗಳು. ಆಯಾ ಆಸ್ಪತ್ರೆಗಳ ಆದಾಯ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿದ್ದಾರಷ್ಟೇ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯವರು ಗ್ಯಾರಂಟಿಗಳ ಮೇಲೆ ಆಸ್ಪತ್ರೆ ಚಿಕಿತ್ಸಾ ವೆಚ್ಚ ಹೆಚ್ಚಳ ಮಾಡಿದ್ದಾರೆ ಎನ್ನುತ್ತಾರೆ. ಗ್ಯಾರಂಟಿ ಯೋಜನೆಗಳಿಗೂ, ಆಸ್ಪತ್ರೆ ಚಿಕಿತ್ಸಾ ವೆಚ್ಚ ಹೆಚ್ಚಳಕ್ಕೂ ಸಂಬಂಧವೇ ಇಲ್ಲ. ಬಿಜೆಪಿ ನಾಯಕರು ಮೊದಲು ರೈತರಿಗೆ ಬರಬೇಕಾದ ನಬಾರ್ಡ್ ದುಡ್ಡು ಕೊಡಿಸುವ ಕೆಲಸ ಮಾಡಲಿ ಎಂದು ದಿನೇಶ ಗುಂಡೂರಾವ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.