ಯಡಿಯೂರಪ್ಪ ಅವರ ರಾಜಕೀಯ ಜೀವನಕ್ಕೆ 50 ವರ್ಷ ತುಂಬಿದ ಹಿನ್ನಲೆಯಲ್ಲಿ ಹಮ್ಮಿಕೊಂಡಿರುವ ಅಭಿಮಾನೋತ್ಸವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಶಾಸಕರು ಸೇರಿದಂತೆ ಕಾರ್ಯಕರ್ತರ ಪಡೆಯೇ ಸಿದ್ಧವಾಗಿದೆ.
ಕನ್ನಡಪ್ರಭ ವಾರ್ತೆ ಚಿತ್ರದುರ್ಗಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನಕ್ಕೆ 50 ವರ್ಷ ತುಂಬಿದ ಹಿನ್ನಲೆಯಲ್ಲಿ ಹಮ್ಮಿಕೊಂಡಿರುವ ಅಭಿಮಾನೋತ್ಸವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಶಾಸಕರು ಸೇರಿದಂತೆ ಕಾರ್ಯಕರ್ತರ ಪಡೆಯೇ ಸಿದ್ಧವಾಗಿದೆ. ಕಾರ್ಯಕ್ರಮಕ್ಕೆ 10 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದು, ಊಟದ ವ್ಯವಸ್ಥೆಯನ್ನು ಸವಾಲಾಗಿ ತೆಗೆದುಕೊಳ್ಳಲಾಗಿದೆ.ಅಭಿಮಾನೋತ್ಸವದ ಪೂರ್ವಸಿದ್ಧತೆ ಪರಿಶೀಲಿಸಿ ಮಾತನಾಡಿದ ಯಲಹಂಕ ಶಾಸಕ ವಿಶ್ವನಾಥ್, ರಾಜ್ಯದ ವಿವಿಧೆಡೆಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಜನತೆಗೆ ಊಟದ ಕೂರತೆ ಆಗದಂತೆ ಎಚ್ಚರವಹಿಸಲಾಗುತ್ತಿದೆ ಎಂದರು. ಅಭಿಮಾನೋತ್ಸವಕ್ಕೆ ಆಗಮಿಸುವವರಿಗೆ ಊಟ, ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಬೆಂಗಳೂರಿನ ಶಾಸಕರು ಮತ್ತು ಪ್ರಮುಖರಿಗೆ ವಹಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೆ ಅಡುಗೆ ಭಟ್ಟರನ್ನು ನೇಮಿಸಲಾಗಿದೆ. ಸುಮಾರು 500 ಬಾಣಸಿಗರು ಚಿತ್ರದುರ್ಗಕ್ಕೆ ಬರಲಿದ್ದಾರೆ. ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದರು.ಮೇ 9ರಂದು ಬೆಳಗ್ಗೆ 9 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೂ ಊಟದ ವ್ಯವಸ್ಥೆ ಇರುತ್ತೆ. ಬಫೆ ರೀತಿಯಲ್ಲಿ ಊಟ ಬಡಿಸಲಾಗುವುದು. ಬೆಳಗ್ಗೆ ಟೊಮೋಟೋ ಬಾತ್, ಮೊಸರನ್ನ, ಮೈಸೂರು ಪಾಕ್, ವಾಟರ್ ಬಾಟಲ್ ನೀಡಲಾಗುವುದು. 12ರ ನಂತರ ವೆಜಿಟೇಬಲ್ ಪಲಾವ್, ಮೊಸರನ್ನ, ಮೈಸೂರು ಪಾಕ್ ನೀಡಲಾಗುವುದು. ಯಾವುದೇ ಕಾರಣಕ್ಕೂ ಕಾರ್ಯಕ್ರಮಕ್ಕೆ ಬಂದವರನ್ನು ಹಸಿದ ಹೊಟ್ಟೆಯಲ್ಲಿ ಕಳುಹಿಸುವುದಿಲ್ಲ. ಊಟ ಬಡಿಸುವಾಗ ಯಾವುದೇ ಸಮಸ್ಯೆಯಾಗಬಾರದೆಂದು ಒಂದೊಂದು ಕೌಂಟರ್ ಬಳಿ ಇಬ್ಬರು ಶಾಸಕರು, 120 ಜನ ಸ್ವಯಂ ಸೇವಕರು ಇರಲಿದ್ದಾರೆ ಎಂದರು.
ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಮಾತನಾಡಿ, ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆದಿದ್ದಾರೆ. ಅಧಿಕಾರದ ಸಮಯದಲ್ಲಿ ತಾನು ಬೆಳೆದು ತನ್ನ ಜೊತೆಯಲ್ಲಿ ಇರುವವರನ್ನು ಸಹ ಬೆಳೆಸುವುದರ ಮೂಲಕ ದೊಡ್ಡ ವ್ಯಕ್ತಿಯಾಗಿದ್ದಾರೆ. ನಂಬಿದವರನ್ನು ಕೈಬಿಡುವುದಿಲ್ಲ ಎಂಬ ಹೆಸರು ಯಾರಿಗಾದರೂ ಇದ್ದರೆ ಅದು ಯಡಿಯೂರಪ್ಪ ಅವರಿಗೆ ಮಾತ್ರ. 50 ವರ್ಷದ ಹೋರಾಟ, ಸಾಧನೆಯ ಕಾರ್ಯಕ್ರಮದ ಯಶಸ್ವಿಗೆ ಎಲ್ಲರು ಕಂಕಣ ಬದ್ಧರಾಗಿ ದುಡಿಯುತ್ತಿದ್ದೇವೆ. ಪಕ್ಷದ ಕಾರ್ಯಕರ್ತರಿಗೆ ಈ ಕಾರ್ಯಕ್ರಮ ಹಬ್ಬದ ವಾತಾವರಣವ ಮೂಡಿಸಿದೆ ಎಂದರು.ಈ ವೇಳೆ ಮಹಾಲಕ್ಷ್ಮಿ ಲೇಔಟ್‌ನ ಶಾಸಕ ಗೋಪಾಲಯ್ಯ, ದಾಸರಹಳ್ಳಿ ಶಾಸಕ ಮುನಿರಾಜ್, ಬೆಂಗಳೂರು ದಕ್ಷಿಣದ ಕೃಷ್ಣಪ್ಪ, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ರಾಜ್ಯ ಉಪಾಧ್ಯಕ್ಷ ತಮ್ಮೇಶ್ ಗೌಡ, ಮಲ್ಲಿಕಾರ್ಜನ, ಕಲ್ಲಂ ಸೀತರಾಮರೆಡ್ಡಿ ಹಾಜರಿದ್ದರು.