ಸಾರಾಂಶ
ಕುರುಗೋಡು: ಸಮೀಪದ ಕುಡತಿನಿಯ ಬಿಟಿಪಿಎಸ್ ಕಾರ್ಖಾನೆಯ ಕಾರ್ಮಿಕರಿಗೆ ಕನಿಷ್ಠ ವೇತನ ನೀಡದ ಅಲ್ಲಿನ ಗುತ್ತಿಗೆದಾರರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುತ್ತಿಗೆ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಕುಡತಿನಿ ಪೊಲೀಸ್ ಠಾಣೆಯ ಪಿಎಸ್ಐ ಶಾಂತಮೂರ್ತಿಗೆ ಮನವಿ ಸಲ್ಲಿಸಿದರು.ಗುತ್ತಿಗೆ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ವಿ. ರಾಜಶೇಖರ ಮಾತನಾಡಿ, ಕುಡತಿನಿಯ ಬಿಟಿಪಿಎಸ್ ನಲ್ಲಿ ವೃತ್ತಿಪರ ೬೫೦ ಕಾರ್ಮಿಕರು ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೂಚನೆಯಂತೆ ಕಾರ್ಖಾನೆಗಳು ಕನಿಷ್ಠ ವೇತನ ನೀಡಬೇಕು. ಜಿಲ್ಲಾ ಕೇಂದ್ರದಲ್ಲಿರುವ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸೂಚಿಸಿದರೂ ಕಾರ್ಖಾನೆಯ ಗುತ್ತಿಗೆದಾರರು ತಮಗೆ ಸಂಬ೦ಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಒಬ್ಬ ಕಾರ್ಮಿಕರಿಗೆ ಕನಿಷ್ಠ ವೇತನ ₹೩೦,೪೯೫ ನೀಡಬೇಕು ಎಂದು ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಡಿಸೆಂಬರ್ ೨೬, ೨೦೨೩ರಂದು ಆದೇಶ ಮಾಡಿದ್ದರೂ ಬಿಟಿಪಿಎಸ್ ಗುತ್ತಿಗೆದಾರರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ಸ್ಪಂದಿಸುತ್ತಿಲ್ಲ. ನಮಗೆ ಕನಿಷ್ಠ ವೇತನ ನೀಡಬೇಕು. ಇಲ್ಲವಾದಲ್ಲಿ ಸೆ. ೧೧ರ ಬುಧವಾರ ಬಿಟಿಪಿಎಸ್ ಕಾರ್ಖಾನೆಯ ಮುಖ್ಯದ್ವಾರವನ್ನು ಬಂದ್ ಮಾಡಿ ಮುಷ್ಕರ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಕನಿಕೇರಿ ಪಂಪಾಪತಿ, ಪುರಸಭೆ ಸದಸ್ಯ ವೆಂಕಟರಮಣಬಾಬು, ಪ್ರಮುಖರಾದ ಟಿ.ಗೋಪಾಲ, ಮಹಾಂತೇಶ್, ಪ್ರತಾಪ್ ಇದ್ದರು.