ವೈಭೋಗದ ಜೀವನ ತ್ಯಾಗ ಮಾಡಿ ಇಡೀ ಜಗತ್ತಿಗೆ ಬೆಳಕು ನೀಡಿದ ಬುದ್ಧ: ಟಿ.ಎಸ್.ಶ್ರೀವತ್ಸ

| Published : May 13 2025, 01:06 AM IST

ವೈಭೋಗದ ಜೀವನ ತ್ಯಾಗ ಮಾಡಿ ಇಡೀ ಜಗತ್ತಿಗೆ ಬೆಳಕು ನೀಡಿದ ಬುದ್ಧ: ಟಿ.ಎಸ್.ಶ್ರೀವತ್ಸ
Share this Article
  • FB
  • TW
  • Linkdin
  • Email

ಸಾರಾಂಶ

ಬುದ್ಧ ಈ ಜಗತ್ತಿನ ಬೆಳಕು. ನಾವು ಕೆಲವೇ ಕೆಲವು ದಾರ್ಶನಿಕರ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಪಾಲನೆ ಮಾಡಿಕೊಳ್ಳುತ್ತಾ ಅವರ ಜಯಂತಿಗಳನ್ನು ಆಚರಣೆ ಮಾಡುತ್ತಿದ್ದೇವೆ. ಬುದ್ಧ 70- 80 ತಲೆಮಾರುಗಳಿಂದ ಇಡೀ ಜಗತ್ತಿಗೆ ಗೊತ್ತಿದ್ದಾರೆ. ಅಂತಹ ಮಹಾನ್ ವ್ಯಕ್ತಿ ನಮ್ಮ ಎಲ್ಲರಿಗೂ ತಿಳಿದಿದ್ದಾರೆ. ಅವರ ಆದರ್ಶಗಳು ನಮ್ಮೆಲ್ಲರಿಗೂ ಆದರ್ಶವಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ವೈಭೋಗದ ಜೀವನವನ್ನು ತ್ಯಾಗ ಮಾಡಿ ಇಡೀ ಜಗತ್ತಿಗೆ ಬೆಳಕು ನೀಡಿದವರು ಬುದ್ಧ. ಬುದ್ಧ ಎಂದರೆ ಬೆಳಕು ಇಂತಹ ಮಹಾನ್ ವ್ಯಕ್ತಿಯು ನಮಗೆ ಇಂದಿಗೂ ಆದರ್ಶವಾಗಿದ್ದಾರೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.

ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಗವಾನ್ ಬುದ್ಧ ಜಯಂತಿ ಸಮಿತಿಯು ಸೋಮವಾರ ಆಯೋಜಿಸಿದ್ದ 2569ನೇ ಬುದ್ಧ ಪೂರ್ಣಿಮೆ, ಭಗವಾನ್ ಬುದ್ಧ ಜಯಂತಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಭಗವಾನ್ ಬುದ್ಧ ದೀರ್ಘ ಕಠಿಣವಾದಂತಹ 26 ವರ್ಷಗಳ ತಪಸ್ಸನ್ನು ಮಾಡಿದ ಅವರಿಗೆ ಭೋಧಿ ವೃಕ್ಷದ ಕೆಳಗೆ ಜ್ಞಾನೋದಯವಾಗಿ, ಇಡೀ ಜಗತ್ತಿಗೆ ಬೆಳಕನ್ನು ನೀಡಿದರು. ಬೌದ್ಧ ಧರ್ಮವನ್ನು ಇಡೀ ಜಗತ್ತಿಗೆ ತೋರಿಸಿ ಕೊಟ್ಟಿದ್ದಾರೆ ಎಂದರು.

ಆಸೆಯ ದುಃಖಕ್ಕೆ ಮೂಲ ಕಾರಣ, ದುಃಖ ಎನ್ನುವುದು ಇದೆ ಎಂದರೆ ಆ ದುಃಖ ಎನ್ನುವುದು ನಮ್ಮ ಅಸ್ತಿತ್ವದಲ್ಲಿಯೇ ಇದೆ. ನಮ್ಮ ಮನಸ್ಸಿನಲ್ಲಿಯೇ ಇದೆ, ಅದಕ್ಕೆ ಅವರು 8 ಹೆಜ್ಜೆಗಳ ಬಗ್ಗೆ ಹೇಳಿದ್ದಾರೆ. ಸರಿಯಾದ ತಿಳವಳಿಕೆ, ಸರಿಯಾದ ಉದ್ದೇಶ, ಸರಿಯಾದ ಮಾತು, ಸರಿಯಾದ ನಡವಳಿಕೆ, ಸರಿಯಾದ ಜೀವನದ ರೀತಿಯ ಆಯ್ಕೆ, ಸರಿಯಾದ ಪ್ರಯತ್ನ, ಸರಿಯಾದ ಎಚ್ಚರ, ಸರಿಯಾದ ಕೇಂದ್ರೀಕೃತ ಮನಸ್ಸು ಈ 8 ಹೆಜ್ಜೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೇ ನಮ್ಮ ಮನಸ್ಸಿನಲ್ಲಿ ಆಸೆ ದುರಾಸೆ ಎಲ್ಲವೂ ದೂರವಾಗುತ್ತದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮಾತನಾಡಿ, ಬುದ್ಧ ಈ ಜಗತ್ತಿನ ಬೆಳಕು. ನಾವು ಕೆಲವೇ ಕೆಲವು ದಾರ್ಶನಿಕರ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಪಾಲನೆ ಮಾಡಿಕೊಳ್ಳುತ್ತಾ ಅವರ ಜಯಂತಿಗಳನ್ನು ಆಚರಣೆ ಮಾಡುತ್ತಿದ್ದೇವೆ. ಬುದ್ಧ 70- 80 ತಲೆಮಾರುಗಳಿಂದ ಇಡೀ ಜಗತ್ತಿಗೆ ಗೊತ್ತಿದ್ದಾರೆ. ಅಂತಹ ಮಹಾನ್ ವ್ಯಕ್ತಿ ನಮ್ಮ ಎಲ್ಲರಿಗೂ ತಿಳಿದಿದ್ದಾರೆ. ಅವರ ಆದರ್ಶಗಳು ನಮ್ಮೆಲ್ಲರಿಗೂ ಆದರ್ಶವಾಗಬೇಕು ಎಂದರು.

ಸರ್ವಜ್ಞಾನೀಯ ಸ್ವರೂಪವೇ ಬುದ್ಧ:

ಸಾನ್ನಿಧ್ಯ ವಹಿಸಿದ್ದ ವಿಶ್ವಮೈತ್ರಿ ಬುದ್ಧ ವಿಹಾರದ ಡಾ.ಕಲ್ಯಾಣಸಿರಿ ಭಂತೇಜಿ ಮಾತನಾಡಿ, ಭಗವಾನ್ ಬುದ್ಧ ಜನಿಸುವವರೆಗೂ ಅಜ್ಞಾನದ ಅಂದಕಾರದಲ್ಲಿ ಜಗತ್ತು ಇತ್ತು. ಅದನ್ನು ಪರಿಪೂರ್ಣವಾಗಿ ಬೌದ್ಧನಾಗಿಸಿ ಬೆಳಕನ್ನು ಕೊಟ್ಟಂತಹ ದಿನ ಇವತ್ತು. ಈ ದಿನ ತುಂಬಾ ವಿಶೇಷಕರವಾದದ್ದು, ಯಾಕೆಂದರೆ ಬುದ್ಧ ಜನಿಸಿದ್ದು ವೈಶಾಖ ಪೂರ್ಣಿಮೆ ದಿನ. ಅವರಿಗೆ ಜ್ಞಾನೋದಯವಾಗಿದ್ದು ವೈಶಾಖ ಪೂರ್ಣಿಮೆ ದಿನ. ಹಾಗೆ ಅವರು ಮಹಾಪರಿನಿರ್ವಾಣ ಹೊಂದಿದಂತಹ ದಿನ ಕೂಡ. ಇದು ಜಗತ್ತಿನಲ್ಲೇ ಈ 3 ಕ್ರಿಯೆಗಳು ನಡೆದಿರುವಂತದ್ದು, ಭಗವಾನ್ ಬುದ್ಧರಲ್ಲಿ ಮಾತ್ರ ನಾವು ಕಾಣಲಿಕ್ಕೆ ಸಾಧ್ಯ ಎಂದರು.

2569 ವರ್ಷಗಳಾಗಿ ಇಷ್ಟು ವರ್ಷಗಳವರೆಗೂ ಬೌದ್ಧ ಧರ್ಮ ವಿಶ್ವದಾದ್ಯಂತ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದರೆ ಅದರ ಒಂದು ಮಹತ್ವ ಎಷ್ಟು ಮಾನವೀಯ ಮೌಲ್ಯಗಳಿಂದ ತುಂಬಿದೆ ಎನ್ನುವಂತದ್ದು. ಬುದ್ಧ ಎಂದರೆ ಪರಿಪೂರ್ಣ ಎಚ್ಚರಗೊಂಡಂತಹ ವ್ಯಕ್ತಿ. ಪರಿಪೂರ್ಣವಾಗಿ ಎಚ್ಚರಗೊಂಡಿರುವ ಮತ್ತೆ ಸಮೂಹ ಸಮೃದ್ಧಿಯನ್ನು ಪಡೆದುಕೊಂಡಿರುವ ಅಖಂಡ ಜ್ಞಾನವನ್ನು ಗಳಿಸಿರುವ ಸರ್ವಜ್ಞಾನೀಯ ಸ್ವರೂಪವೇ ಬುದ್ಧ ಎಂದರು.

ಲೇಖಕ ಡಾ. ರಹಮತ್ ತರೀಕೆರೆ ಮುಖ್ಯ ಭಾಷಣ ಮಾಡಿದರು. ಮಾಜಿ ಮೇಯರ್ ಪುರುಷೋತ್ತಮ್, ಮಹಾಬೋಧಿ ನಿರ್ದೇಶಕ ಸೇವಾನ ಭಂತೇಜಿ, ಜಗನ್ನಾಥ, ಕೆ.ಆರ್. ಗೋಪಾಲಕೃಷ್ಣ, ಇಂದ್ರಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಮೊದಲಾದವರು ಇದ್ದರು.ಪ್ರಪಂಚದಲ್ಲಿ ಪರಿಪೂರ್ಣ ಜ್ಞಾನೋದಯ ಕಂಡಂತಹ ಏಕೈಕ ಮಹಾನ್ ವ್ಯಕ್ತಿ ಬುದ್ಧ. ಇವರು ಯಾವುದೇ ದೇವ ದೂತರಲ್ಲ, ದೇವರ ಮಗನಲ್ಲ, ದೇವರ ಸ್ವರೂಪವಲ್ಲ, ಮಾನವರು ಅಲ್ಲ. ಈ ಎಲ್ಲವನ್ನು ಮೀರಿರುವಂತಹ ಸಮಯ ಯೋಗಿಯನ್ನು ಪಡೆದಿರುವಂತಹ ಮಹಾನ್ ಪುರುಷರು, ಮಾರ್ಗದರ್ಶಕರು.

- ಡಾ.ಕಲ್ಯಾಣಸಿರಿ ಭಂತೇಜಿ, ವಿಶ್ವಮೈತ್ರಿ ಬುದ್ಧ ವಿಹಾರಯಾರು ಬೇಕಾದರೂ ಬುದ್ಧ ಮಾರ್ಗವನ್ನು ಅನುಸರಿಸಿ ದುಃಖದಿಂದ ಮುಕ್ತರಾಗಬಹುದು ಮತ್ತು ತನ್ನಂತೆ ಎಚ್ಚರದ ಸ್ಥಿತಿಯನ್ನು ಹೊಂದಬಹುದು. ಆದರೆ, ಈ ಸಿದ್ಧಿಗೆ ಸ್ವಂತ ಪ್ರಯತ್ನ, ಸಾಧನೆ ಮಾತ್ರ ಕಾರಣ ಎಂದು ಹೇಳಿದ ಭಗವಾನ್ ಬುದ್ಧ ರಾಜಕೀಯ ಯುದ್ಧದಿಂದ ವಿಮುಕ್ತರಾದರು. ಆದರೆ, ಸಾಮಾಜಿಕ ಯುದ್ಧಗಳಲ್ಲಿ ತೊಡಗಿದರು.

- ಡಾ.ರಹಮತ್ ತರೀಕೆರೆ, ಲೇಖಕಬುದ್ಧರ ಮೂರ್ತಿ ಮೆರವಣಿಗೆ

ಬುದ್ಧ ಜಯಂತಿ ಅಂಗವಾಗಿ ನಗರ ಪುರಭವನ ಆವರಣದಿಂದ ಕಲಾಮಂದಿರದವರೆಗೆ ಭಗವಾನ್ ಬುದ್ಧರ ಮೂರ್ತಿಯ ಮೆರವಣಿಗೆ ಮಾಡಲಾಯಿತು. ಭಗವಾನ್ ಬುದ್ಧರ ಮೆರವಣಿಗೆಗೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಪುರಭವನದ ಆವರಣದಲ್ಲಿ ಚಾಲನೆ ನೀಡಿದರು.