ಜಗತ್ತಿಗೆ ಸತ್ಯದ ಮಾರ್ಗದರ್ಶಕ ಬುದ್ಧ: ಮಾಜಿ ಶಾಸಕ ಎಂ.ಕೆ.ಸೋಮಶೇಖರ್

| Published : May 13 2025, 01:16 AM IST

ಜಗತ್ತಿಗೆ ಸತ್ಯದ ಮಾರ್ಗದರ್ಶಕ ಬುದ್ಧ: ಮಾಜಿ ಶಾಸಕ ಎಂ.ಕೆ.ಸೋಮಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ಯಾವ ಮನು ಸಂಸ್ಕೃತಿಯನ್ನು ಹರಡಬೇಕು, ನಮ್ಮದೇ ಆಡಳಿತ ನಡೆಯಬೇಕು ಎನ್ನುವವರೇ ಸುಳ್ಳನ್ನೇ ಈ ಪ್ರಪಂಚದ ತುಂಬೆಲ್ಲ ಹರಡಿದ್ದಾರೆ. ಇವತ್ತಿಗೂ ಸುಳ್ಳೇ ನಮ್ಮನ್ನೆಲ್ಲ ಸುತ್ತುವರೆದು ಆವರಿಸಿಕೊಂಡಿದೆ. ಹೀಗಾಗಿ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆ ಸತ್ಯವನ್ನು ಅರ್ಥ ಮಾಡಿಕೊಂಡಂತಹ ಚೀನಾ, ಜಪಾನ್ ಇನ್ನಿತರ ದೇಶಗಳು ಎತ್ತರಕ್ಕೆ ಬೆಳೆದು ನಿಂತಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಬುದ್ಧನನ್ನು ಭಾರತೀಯರಾದ ನಾವು ಸರಿಯಾದ ರೀತಿ ಅರ್ಥ ಮಾಡಿಕೊಂಡಿದ್ದರೆ ದೇಶದ ಚಿತ್ರಣವೇ ಬದಲಾಗುತ್ತಿತ್ತು. ಜಗತ್ತಿಗೆ ಸತ್ಯದ ಮಾರ್ಗದರ್ಶಕ ಬುದ್ಧ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಸೋಮವಾರ ನಡೆದ ಬುದ್ಧ ಪೂರ್ಣಿಮಾದಲ್ಲಿ ದೀಪ ಬೆಳಗಿಸಿ, ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬುದ್ಧ ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಸಮಾಜಕ್ಕೆ ಸತ್ಯವನ್ನು ತಿಳಿಸಿಕೊಟ್ಟರು. ಆ ಸತ್ಯವನ್ನು ಇವತ್ತಿನವರೆಗೂ ಹೊರಗಡೆ ಬಿಟ್ಟುಕೊಡುತ್ತಿಲ್ಲ ಎಂದರು.

ಯಾವ ಮನು ಸಂಸ್ಕೃತಿಯನ್ನು ಹರಡಬೇಕು, ನಮ್ಮದೇ ಆಡಳಿತ ನಡೆಯಬೇಕು ಎನ್ನುವವರೇ ಸುಳ್ಳನ್ನೇ ಈ ಪ್ರಪಂಚದ ತುಂಬೆಲ್ಲ ಹರಡಿದ್ದಾರೆ. ಇವತ್ತಿಗೂ ಸುಳ್ಳೇ ನಮ್ಮನ್ನೆಲ್ಲ ಸುತ್ತುವರೆದು ಆವರಿಸಿಕೊಂಡಿದೆ. ಹೀಗಾಗಿ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆ ಸತ್ಯವನ್ನು ಅರ್ಥ ಮಾಡಿಕೊಂಡಂತಹ ಚೀನಾ, ಜಪಾನ್ ಇನ್ನಿತರ ದೇಶಗಳು ಎತ್ತರಕ್ಕೆ ಬೆಳೆದು ನಿಂತಿವೆ ಎಂದರು.

ಭಾರತ ದೇಶದಲ್ಲಿ ಬೌದ್ಧ ಧರ್ಮ ಬೆಳೆಯಲು ಅವಕಾಶವನ್ನೇ ಕೊಡಲಿಲ್ಲ. ಮೌಢ್ಯ ಕಂದಾಚಾರಗಳ ಮೂಲಕ ಕೆಲವರು ಇವತ್ತಿಗೂ ನಮ್ಮನ್ನೆಲ್ಲ ಕತ್ತಲೆಯ ಕೂಪದಲ್ಲಿ ತಳ್ಳಿ ಅಂಧಕಾರದಲ್ಲೇ ಬದುಕಬೇಕು ಎಂದು ಬಯಸುತ್ತಿದ್ದಾರೆ. ಬುದ್ಧನ ಮಹತ್ತರವಾದ ವಿಷಯಗಳನ್ನು ಈ ಜಗತ್ತಿಗೆ ತಿಳಿಸಲು ಬಿಡುತ್ತಿಲ್ಲ ಎಂದರು.

ಬುದ್ಧ ಹೇಳಿದ್ದಂತದ್ದು ತನ್ನನ್ನ ತಾನು ಅರ್ಥ ಮಾಡಿಕೊಳ್ಳಬೇಕು ಯಾರೇ ಬೆಳೆದಿದ್ದರೂ, ಅಭಿವೃದ್ಧಿಯಾಗಿದ್ದರೂ ಅದಕ್ಕೆ ಅವರ ಶ್ರಮವೇ ಕಾರಣ. ಅದಕ್ಕೆ ಯಾವುದೇ ಪೂರ್ವ ಜನ್ಮದ ಪುಣ್ಯವೋ, ಯಾವ ಆಶೀರ್ವಾದವು ಸಹ ಇಲ್ಲ. ಪ್ರತಿಯೊಬ್ಬರ ಬದುಕಿನ ಯಶಸ್ಸುಗಳಿಗೆ ಅವರವರ ಶ್ರಮ ಮತ್ತು ಶ್ರದ್ಧೆಯೇ ಕಾರಣ ಎಂಬ ಸತ್ಯವನ್ನ ಅವತ್ತಿನ ದಿನದಲ್ಲಿಯೇ ಸಮಾಜಕ್ಕೆ ಬುದ್ಧ ತಿಳಿಸಿದ್ದರು ಎಂದರು.

ಬುದ್ಧ ಕರ್ಮ ಸಿದ್ದಾಂತವನ್ನು, ದೇವರ ಇರುವಿಕೆಯನ್ನು ನಂಬಲಿಲ್ಲ. ಆದರೆ ಮನುಷ್ಯನ ನೈತಿಕತೆಗೆ ನಡವಳಿಕೆಗಳಿಗೆ ಹೆಚ್ಚು ಆದ್ಯತೆಯನ್ನು, ಬೆಲೆಯನ್ನು ನೀಡಿದ್ದಾರೆ. ವಿದ್ಯೆಗಿಂತ ಗುಣ ದೊಡ್ಡದು ಎಂಬುದನ್ನು ಒತ್ತಿ ಒತ್ತಿ ಹೇಳುತ್ತಾರೆ. ಒಳ್ಳೆಯ ಗುಣ ನಡವಳಿಕೆ, ಚಿಂತನೆಗಳನ್ನು ನಮ್ಮ ತಲೆಯಲ್ಲಿ ತುಂಬಿಕೊಳ್ಳಬೇಕು. ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳಬೇಕು ಎಂದರು.

ಮಹನೀಯರೆಲ್ಲರೂ ಸಮಾಜಕ್ಕೆ ಸತ್ಯದ ಬೆಳಕು ಚೆಲ್ಲಿದ್ದರೂ, ಹೋರಾಟಗಳನ್ನು ಕೈಗೊಂಡರೂ ಮತ್ತೆ ಮೌಢ್ಯ ಕಂದಚಾರ ಹೇರಲು ಹೊರಡುತ್ತಿರುವುದು ವಿಪರ್ಯಾಸ. ಮೂಢನಂಬಿಕೆಗಳನ್ನು ಎಷ್ಟೇ ವಿರೋಧ ಮಾಡಿದರೂ ಮತ್ತೆ ಮತ್ತೆ ಮುನ್ನೆಲೆಗೆ ತರುತ್ತಿದ್ದಾರೆ. ಆದರೆ, ಅದರಿಂದ ಯಾವ ಪ್ರಯೋಜನವೂ ಇಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ. ಸೋಮಶೇಖರ್, ಶ್ರೀಧರ್, ಆಶ್ರಯ ಸಮಿತಿ ಸದಸ್ಯರಾದ ಗುಣಶೇಖರ್, ಮಹ್ಮದ್ ಫಾರೂಖ್, ಅಶೋಕಪುರಂ ದೊಡ್ಡಗರಡಿ ಅಧ್ಯಕ್ಷ ಜೋಗಿ ಮಹೇಶ್, ಮುಖಂಡರಾದ ಮಂಜುನಾಥ್, ರಮೇಶ್, ಶಂಕರ್, ಸಿದ್ದರಾಜು, ಕುಮಾರ್, ವಿಜಯ್ ಕುಮಾರ್, ಮಹದೇವೇಗೌಡ, ರಾಮಾನುಜ ರಮೇಶ್, ಹರೀಶ್ ಗಂಧನಹಳ್ಳಿ, ರಾಕೇಶ್, ಗಣೇಶ್, ಮಧುರಾಜ್, ಮಹೇಂದ್ರಗೌಡ, ಸಂತೋಷ್, ಅಭಿಷೇಕ್ ಮೊದಲಾದವರು ಇದ್ದರು.