ಭಗವಾನ್ ಬುದ್ಧರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ

| Published : May 15 2025, 01:32 AM IST

ಸಾರಾಂಶ

ಗೌತಮ ಬುದ್ಧನ ಸಂದೇಶಗಳು ಇಡೀ ಮಾನವ ಕುಲಕ್ಕೆ ಮಾನವೀಯತೆಯ ಮಾರ್ಗದರ್ಶಿಯಾಗಿದೆ ಎಂದು ವಿನಾಯಕ ನರ್ವಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಗೌತಮ ಬುದ್ಧನ ಸಂದೇಶಗಳು ಇಡೀ ಮಾನವಕುಲಕ್ಕೆ ಮಾನವೀಯತೆಯ ಮಾರ್ಗದರ್ಶಿಯಾಗಿದೆ ಎಂದು ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಭಗವಾನ್ ಬುದ್ಧರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗೌತಮ ಬುದ್ಧ ಇಡೀ ವಿಶ್ವಕ್ಕೆ ಶಾಂತಿ, ಸಹನೆ, ಸಹಬಾಳ್ವೆ, ಸಹೋದರತೆಯನ್ನು ಬಿತ್ತಿದರು. ಭಾರತದಲ್ಲಿ ಹುಟ್ಟಿ ಬೆಳೆದ ಗೌತಮ ಬುದ್ಧರು ಇಡೀ ವಿಶ್ವಕ್ಕೆ ಶಾಂತಿಯ ಸಂದೇಶ ಪಸರಿಸಿದ್ದಾರೆ ಎಂದು ವಿನಾಯಕ ನರ್ವಡೆ ಅವರು ತಿಳಿಸಿದರು.

ದೇಶ ಶಾಂತಿ ಸಹಬಾಳ್ವೆ, ಸಹೋದರತ್ವಕ್ಕೆ ಹೆಸರಾಗಿದೆ:

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕ ಭೇಟಿ ಸಂದರ್ಭದಲ್ಲಿ ‘ಯುದ್ಧದ ನಾಡಿನಿಂದ ಬಂದಿಲ್ಲ, ಬುದ್ಧನ ನಾಡಿನಿಂದ ಬಂದಿದ್ದೇನೆ’ ಎಂಬ ಸಂದೇಶ ಸಾರಿದ್ದರೂ ಎಂಬುದನ್ನು ಯಾರೂ ಮರೆಯುವಂತಿಲ್ಲ. ಆ ನಿಟ್ಟಿನಲ್ಲಿ ಇಡೀ ಭಾರತ ದೇಶ ಶಾಂತಿ ಸಹಬಾಳ್ವೆ, ಸಹೋದರತ್ವಕ್ಕೆ ಹೆಸರಾಗಿದೆ ಎಂದು ಉಪ ವಿಭಾಗಾಧಿಕಾರಿ ಅವರು ನುಡಿದರು.

ಸಂತಕವಿ ಕನಕದಾಸ ಮತ್ತು ತತ್ವಪದಕಾರ ಅಧ್ಯಯನ ಕೇಂದ್ರದ ಸಮನ್ವಯಾಧಿಕಾರಿ ಡಾ.ಮುಸ್ತಾಪ ಕೆ.ಎಚ್. ಮಾತನಾಡಿ, ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧ, ಮಹಾನ್ ದಾರ್ಶನಿಕ, ಸಿದ್ದಾರ್ಥ ಎನ್ನುವ ರಾಜವಂಶದ ಕುಡಿಯಾಗಿದ್ದು, ಸಕಲ ವೈಬೋಗಗಳನ್ನು ತ್ಯಜಿಸಿ, ಜ್ಞಾನೋದಯ ಪಡೆದು ಗೌತಮ ಬುದ್ಧನಾಗುತ್ತಾನೆ ಎಂದರು.

ಲೋಕಕ್ಕೆ ಶಾಂತಿ, ಅಹಿಂಸೆಯ ಮಹತ್ವವನ್ನು ಬುದ್ಧ ಬೋಧಿಸಿದ್ದಾರೆ. ಬುದ್ಧನ ಜನನ, ಮರಣ ಹಾಗೂ ಜ್ಞಾನೋದಯ ದಿನವನ್ನು ಸ್ಮರಿಸಲು ಪ್ರತೀ ವರ್ಷ ಬುದ್ಧ ಪೂರ್ಣಿಮೆ ಆಚರಿಸಲಾಗುತ್ತದೆ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ ಕೃಷ್ಣಪ್ಪ ಮಾತನಾಡಿ ಬುದ್ಧ ಎಂದರೆ ಜ್ಞಾನ, ಹುಟ್ಟಿದ್ದು ರಾಜ ಮನೆತನದಲ್ಲಿ, ಆದರೂ ಸಹ ಬೆಳೆಯುತ್ತಾ ಇತರರಂತೆ ಬದುಕು ನಡೆಸುತ್ತಾರೆ. ಶಾಂತಿಯ ಸಂದೇಶ ಸಾರುತ್ತಾರೆ ಎಂದರು.

ಆಸೆಯೇ ದುಃಖಕ್ಕೆ ಮೂಲ ಎಂಬುದನ್ನು ಬುದ್ಧ ಸಾರಿದ್ದಾರೆ. ಸಾಮ್ರಾಟ್ ಅಶೋಕ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಬುದ್ಧನ ಶಾಂತಿ ಸಂದೇಶಗಳನ್ನು ಅನುಸರಿಸುತ್ತಾರೆ. ಶಾಂತಿ ದೂತರಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಆದ್ಯ ಕರ್ತವ್ಯವಾಗಿದೆ:

ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಮಾತನಾಡಿ ಬುದ್ದ ಸಹಜತೆ, ಪರಿಸರ ಹಾಗೂ ನಿಸರ್ಗದ ತತ್ವದಂತೆ ನಡೆದುಕೊಳ್ಳುತ್ತಾರೆ. ಗೌತಮ ಬುದ್ಧ ಮಹಾ ಬೆಳಕು, ಚೈತನ್ಯದ ಚಿಲುಮೆ ಎಂದರೆ ತಪ್ಪಾಗಲಾರದು. ಎಲ್ಲರನ್ನು ಪ್ರೀತಿಸಬೇಕು ಮತ್ತು ಗೌರವಿಸುವುದು ಆದ್ಯ ಕರ್ತವ್ಯವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷರಾದ ಲೋಕೇಶ್ ಸಾಗರ್ ಮಾತನಾಡಿ ಗೌತಮ ಬುದ್ಧರು ಶಾಂತಿಮಂತ್ರವನ್ನು ಇಡೀ ಜಗತ್ತಿಗೆ ಸಾರಿದ್ದಾರೆ. ಎಲ್ಲರೂ ಸಮಾನವಾಗಿ ಸಹೋದರತೆಯಿಂದ ಬದುಕು ನಡೆಸಬೇಕು ಎಂಬುದು ಗೌತಮ ಬುದ್ಧರ ಆಶಯವಾಗಿತ್ತು ಎಂದರು.

ಬೈಲುಕುಪ್ಪೆಯ ಬಿಕ್ಷು ಜಂಪಾ ಚ್ಯೂಯಾಂಗ್‌ ಮಾತನಾಡಿ ಬುದ್ಧರ ಸಂದೇಶಗಳು ಸಾರ್ವಕಾಲೀಕವಾಗಿದ್ದು, ಬುದ್ಧನ ಮಾರ್ಗದಲ್ಲಿ ನಡೆದರೆ ಜೀವನ ನೆಮ್ಮದಿ ಎಂದರು.

ಬುದ್ದರು ಮಾನವೀಯ ಮೌಲ್ಯಗಳನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ. ಬೌದ್ಧ ಸಂಸ್ಕೃತಿ ಮತ್ತು ಸಂಪ್ರದಾಯ ಇಂದಿಗೂ ಸಹ ಪ್ರಚಲಿತದಲ್ಲಿದೆ. ಬುದ್ಧ ಹುಟ್ಟಿದ ಭಾರತದಲ್ಲಿ ಇಡೀ ವಿಶ್ವಕ್ಕೆ ಬುದ್ಧನ ಸಂದೇಶಗಳು ಸ್ಮರಣೀಯವಾಗಿದೆ ಎಂದರು.

ನಗರಸಭೆ ಸದಸ್ಯರಾದ ಸತೀಶ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕರಾದ ಎಚ್.ಎಲ್.ದಿವಾಕರ, ಪ್ರಮುಖರಾದ ಪ್ರೇಮ್ ಕುಮಾರ್, ಎಸ್.ಕೆ.ಸ್ವಾಮಿ ಇತರರು ಇದ್ದರು.

ನಿವೃತ್ತ ಶಿಕ್ಷಕರಾದ ಬಿ.ಸಿ.ಶಂಕರಯ್ಯ ಹಾಗೂ ದಸಂಸ ಭೀಮವಾದ ಸಂಘಟನಾ ಸಂಚಾಲಕರಾದ ಕೆ.ಬಿ.ರಾಜು ಅವರು ಬುದ್ಧನ ಕುರಿತು ಹಾಡು ಹಾಡಿ ಗಮನ ಸೆಳೆದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಶಿಕ್ಷಕಿ ಉಷಾರಾಣಿ ನಿರೂಪಿಸಿದರು. ಮಣಜೂರು ಮಂಜುನಾಥ್ ವಂದಿಸಿದರು.