ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಳೆದ ಜು.14ರಂದು ಕಮಲಾಪುರ ತಾಲೂಕಿನ ಮಹಾಗಾಂವ್ ಠಾಣೆ ವ್ಯಾಪ್ತಿಯ ನಾಗೂರ ಸೀಮೆಯಲ್ಲಿ ಸಂಭವಿಸಿದ್ದ ಬಡ್ಡಿ ಬಸಮ್ಮ ಕೊಲೆ ಪ್ರಕರಣದಲ್ಲಿ ಮೇಲ್ನೋಟಕ್ಕೆ ಮೊಬೈಲ್ ಸೇರಿದಂತೆ ಡಿಜಿಟಲ್ ರೂಪದ ಯಾವುದೇ ಸಾಕ್ಷಿ ಪುರಾವೆ ಸ್ಪಷ್ಟವಾಗಿರದೆ ಇದ್ದರೂ ಕೂಡಾ ವೃತ್ತಿ ಜಾಣತನ ಬಳಸಿ ಹಂತಕನನ್ನು ಬೆನ್ನಟ್ಟಿ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಜು.14ರಂದು ನಾಗೂರ ಸೀಮೆಯಲ್ಲಿ ಕಲ್ಲಿನಿಂದ ಜಜ್ಜಲ್ಪಟ್ಟಿದ್ದ ಮಹಿಳೆ ಶವ ದೊರಕಿತ್ತು, ಆಕೆ ಯಾರೊಂಬುದೇ ಗೊತ್ತಿರಲಿಲ್ಲ. ಕೊನೆಗೂ ಪ್ರಕರಣದ ತನಿಖಾಧಿಕಾರಿ ಸಿಪಿಐ ನಾರಾಯಣ, ಮಹಾಗಾಂವ್ ಪಿಎಸ್‌ಐ ಆಶಾ ರಾಠೋಡ ಮತ್ತು ಸಿಬ್ಬಂದಿಗಳ ನಿರಂತರ ಪ್ರಯತ್ನದಿಂದ ಶವವಾದವಳು ಕಲಬುರಗಿ ಸೂಪರ್ ಮಾರ್ಕೆಟ್‌ನ ನಿವಾಸಿ ಬಸಮ್ಮ ಎಂದು ಗೊತ್ತಾಯ್ತು.
ಈಕೆ ತನ್ನ ಗಂಡನಿಂದ ತನಗೆ ಬಂದಿದ್ದ ಅಲ್ಪಸ್ವಲ್ಪ ಬಂಗಾರ, ಹಣ ಇಟ್ಟುಕೊಂಡು ಬದುಕು ಕಟ್ಟುತ್ತಿದ್ದಳು. ಈಕೆಗೆ ತನ್ನವರು ಎಂಬುವವರು ಯಾರೂ ಇರಲಿಲ್ಲ.ಈಕೆಯ ಕೊಲೆ ಹಂತಕ ಯಾರಿರಬಹುದು ಎಂದು ಪೊಲೀಸರು ಸಾಕಷ್ಟು ಜನರನ್ನು ವಿಚಾರಣೆಗೊಳಪಡಿಸಿ, ಅನೇಕರನ್ನು ಶಂಕಿಸಿ ತನಿಖೆ ಹಾಗೇ ಮುಂದುವರಿಸಿದ್ದರ ನಡುವೆಯೇ ಈಕೆಗೆ ಜಗತ್ ವೃತ್ತದಲ್ಲಿರುವ ಗೌಂಡಿ ಕೆಲಸಗಾರ ರಾಜಕುಮಾರ್ ಬಿರಾದಾರ್ (40) ಪರಿಚಯವಿರೋದು ಗೊತ್ತಾಯ್ತು.
ಈತ ಈಕೆಯೊಂದಿಗೆ ಹಣಕಾಸಿನ ವಹಿವಾಟಲ್ಲೂ ಇದ್ದನೆಂಬ ಮಾಹಿತಿ ದೊರಕುತ್ತಲೇ ಪೊಲೀಸರು ಈತನನ್ನು ವಿಚಾರಣೆಗೊಳಪಿಸಿದಾಗ ಆತನೇ ಕೊಲೆಗಾರನೆಂಬುದು ಹೊರಬಿತ್ತು ಎಂದು ಜಿಲ್ಲಾ ಎಸ್ಪಿ ಶ್ರೀನಿವಾಸುಲು ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಬಡ್ಡಿ ಬಸಮ್ಮ ಹತ್ತಿರದಿಂದ ಬಿರಾದಾರ್ ಎಂಬಾತ ಒಮ್ಮೆ 28 ಗ್ರಾಂ., ನಂತರ 20 ಗ್ರಾಂ. ಬಂಗಾರ ಪಡೆದು ಹಣಕಾಸು ವಹಿವಾಟು ಮಾಡಿ 1.70 ಲಕ್ಷ ಹಣ ಪಡೆದಿದ್ದ. ಈ ಹಣ ತನಗೆ ಬೇಗ ಮರಳಿಸಬೇಕೆಂದು ಬಸಮ್ಮ ಆತನಿಗೆ ದುಂಬಾಲು ಬಿದ್ದಿದ್ದಳು. ಇದಲ್ಲದೆ ಈ ವ್ಯವಹಾರದ ಬಗ್ಗೆ ಬಸಮ್ಮ ಎಲ್ಲರಿಗೂ ಹೇಳುತ್ತ ಗೌಂಡಿ ರಾಜಕುಮಾರನ ಖೊಟ್ಟಿ ಕೆಲಸದ ಅಪಪ್ರಚಾರ ಕೂಡಾ ಮಾಡಿದ್ದಳು.
ಇದರಿಂದ ರೋಸಿ ಹೋಗಿದ್ದ ರಾಜಕುಮಾರ್ ಒಂದು ದಿನ ಬಸಮ್ಮಳಿಗೆ ನಂಬಿಸಿ ಮಹಾಗಾಂವ್ ಸೀಮೆಯಲ್ಲಿರುವ ನಾಗೂರ್ ಕಡೆ ಊಟ ಚೆನ್ನಾಗಿರುತ್ತದೆ. ಹೋಗೋಣವೆಂದು ಹೇಳಿ ಆಕೆಗೆ ಬಕ್‌ನಲ್ಲಿ ಹತ್ತಿಸಿಕಂಡು ಹೋಗಿದ್ದಾನೆ. ಅಲ್ಲೇ ದಾರಿಯಲ್ಲಿ ಆಕೆ.ನ್ನು ಹೊಡಿಬಡಿ ಮಾಡಿ ಮೈ ಮೇಲೆ ಕಲ್ಲೆತ್ತಿ ಹಾಕಿ ಬರ್ಬರವಾಗಿ ಕೊಂದಿದ್ದಾನೆ. ನಂತರ ಸಾತ್ರಿ ನಾಶಕ್ಕೆಂದು ಶವ ಸುಟ್ಟು ಹಾಕಿದ್ದಾನೆ.ಕೊಲೆ ಮಾಡಿ ಹಾಗೇ ಸಹಜವಾಗಿಯೇ ದಿನಚರಿ ನಡೆಸುತ್ತಿದ್ದ ರಾಜಕುಮಾರ್ ಬೀರಾದಾರ್‌ಗೆ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಗಾಬರಿಯಾಗಿದೆ. ತಾನೇ ಮಾಡಿದ್ದ ಕೊಲೆ ಒಪ್ಪಿಕೊಂಡಿದ್ದಾನೆ. ಈತನನ್ನು ಜು.28 ಕ್ಕೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ.
ವರದಕ್ಷಿಣೆ ಕೊಲೆಆಳಂದ ವರದಕ್ಷಿಣೆ ಕೊಲೆ- ತನಿಖೆ ಚುರುಕು ಆಳಂದದಲ್ಲಿ ತಿಂಗಳ ಹಿಂದೆ ನಡೆದಿರುವ 20 ವರ್ಷದ ವಯಸ್ಸಿನ ಗೃಹಿಣಿಯ ವರದಕ್ಷಿಣೆ ಕೊಲೆಯಲ್ಲಿ ಪ್ರಕರಣ ದಾಖಲಾಗಿದೆ, ಸಾವನ್ನಪ್ಪಿದ ಗೃಹಿಣಿಯ ಪತಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ಚುರುಕುಗೊಳಿಸಲಾಗಿದೆ. ಕೊಲೆಯಾದ ಗೃಹಿಣಿಯ ಶವ ಹೂಳಲಾಗಿದೆ. ಹೀಗಾಗಿ ವಾರದೊಳಗೆ ಶವ ಪರೀಕ್ಷೆಯಾಗಬೇಕು, ಶವವನ್ನು ಹೊರತೆಗೆದು ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ಪ್ರಕ್ರಿಯೆಗಳನ್ನು ಶುರು ಮಾಡಿದ್ದೇವೆಂದು ಶ್ರೀನಿವಾಸುಲು ಹೇಳಿದ್ದಾರೆ.ಆಳಂದಕ್ಕೆ ಭೇಟಿ ನೀಡಿದಾಗ ತಾವು ಸದರಿ ಪ್ರಕರಣದ ಪರಿಶೀಲನೆ ನಡೆಸಿದ್ದಾಗಿ ಹೇಳಿದರು. ಸಾವಾದ ನಂತರ ತಿಂಗಳಾದ ಮೇಲೆ ಸಾವನ್ನಪ್ಪಿದ ಮಹಿಳೆಯ ತಾಯಿ ದೂರು ಸಲ್ಲಿಸಿದ್ದಾರೆ. ಸದರಿ ದೂರನ್ನು ದಾಖಲಿಸಿಕೊಳ್ಳಲಾಗಿದೆ. ಕಾನೂನು ರೀತ್ಯಾ ತನಿಖೆ ನಡೆಸುತ್ತೇವೆ ಸಾವನ್ನಪ್ಪಿದ ಗೃಹಿಣಿ ಗರ್ಭಿಣಿಯಾಗಿದ್ದಳು. ಗಂಡನಿಂದಲೇ ಕಿರುಕುಳ ತುಂಬಾ ಇತ್ತಂದು ದೂರಲ್ಲಿ ಉಲ್ಲೇಖಿಸಿದ್ದಾರೆಂದು ಎಸ್ಪಿ ಹೇಳಿದರು.ಸುಲಿಗೆಯಾದ ಚಿಂಚೋಳಿ ಪತ್ರಕರ್ತನ ಮೊಬೈಲ್ ಪತ್ತೆಕಳೆದ ಮೋಹರಂ ಹಬ್ಬದ ರಾತ್ರಿ ಕಲಬುರಗಿಯಿಂದ ಚಿಂಚೋಳಿಗೆ ಬೈಕ್ ಮೇಲೆ ವಯಾ ಮಹಾಗಾಂವ್ ಹೊರಟಿದ್ದ ಚಿಂಚೋಳಿ ತಾಲೂಕು ಪತ್ರಕರ್ತ ಶಿವರಾಜ್ ವಾಲಿ ಇರಿಗೆ ದಾರಿಯಲ್ಲಿ ಅಡ್ಡಗಟ್ಟಿ ಅವರ ಬಳಿಯಿಂದ 1800 ರು. ಹಣ, ಮೊಬೈಲ್ ಕಿತ್ತುಕೊಂಡು ಪರಾರಿಯಾದ ಪ್ರಕರಣದಲ್ಲಿ ಖದೀಮನೊಬ್ಬನನ್ನು ಪತ್ತೆ ಹಚ್ಚಲಾಗಿದೆ. ಆತನಿಂಗದ ಮೊಬೈಲ್ ಜಪ್ತಿಯಾಗಿದೆ. ಬೈಕ್ ಯಾರದ್ದು ಎಂಬುದು ಪತ್ತೆಯಾಗಬೇಕಿದೆ. ಸುಲಿಗೆ ಪ್ರಕರಣದಲ್ಲಿ ಪೊಲೀಸರು ತೋರಿರುವ ಚಾಕಚಕ್ಯತೆಯು ಪ್ರಶಂಸನೀಯ ಎಂದು ಶ್ರೀನಿವಾಸುಲು ಹೇಳಿದ್ದಾರೆ.