ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಬಳಿಕ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿರುವ ಜಿಲ್ಲೆಗೆ ಸಿದ್ಧರಾಮಯ್ಯನವರು ಮಂಡಿಸಲಿರುವ 2026-27ನೇ ಸಾಲಿನ ಬಜೆಟ್ ನಲ್ಲಿ ಅಲ್ಪಸ್ವಲ್ಪವಾದರೂ ಸಿಕ್ಕಬಹುದೇನೋ ಎಂಬ ಬೆಟ್ಟದಷ್ಟು ನಿರೀಕ್ಷೆ ಗರಿಗೆದರಿದೆ.
ಅಭಿವೃದ್ಧಿ ದೃಷ್ಟಿಯಿಂದ ಬಹುತೇಕ 2005ರವರೆಗೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮಲೆನಾಡಿನ ಹೆಬ್ಬಾಗಿಲು ಎನಿಸಿರುವ ಜಿಲ್ಲೆಗೆ ಮೊದಲ ಬಾರಿಗೆ ಅನುದಾನ, ಅಭಿವೃದ್ಧಿ ಎಂಬುದು ತೋರಿಸಿಕೊಟ್ಟವರು ಉಪ ಮುಖ್ಯಮಂತ್ರಿ ಮತ್ತು ಬಳಿಕ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು. ಅವರು ಅಧಿಕಾರದಲ್ಲಿ ಇರುವಷ್ಟು ಕಾಲ ನಿರಂತರವಾಗಿ ಎಲ್ಲ ಆಯವ್ಯಯದಲ್ಲಿಯೂ ಅತಿ ಎನಿಸುವಷ್ಟು ಅಭಿವೃದ್ಧಿ ಯೋಜನೆಗಳನ್ನು ನೀಡಿದರು. ಆದರೆ ಆ ಬಳಿಕ ಮತ್ತೆ ಅಭಿವೃದ್ಧಿ ಮರೀಚೆಕೆಯಾಗಿಬಿಟ್ಟಿದೆ.2024-25ರಲ್ಲಿ ಸಿದ್ಧರಾಮಯ್ಯನವರು ಮಂಡಿಸಿದ ಬಜೆಟ್‌ನಲ್ಲಿ ನಿರೀಕ್ಷೆಗಳು ಗರಿಗೆದರಿದ್ದವು. ಆದರೆ ಬಹುತೇಕ ಶೂನ್ಯ ಕೊಡುಗೆಯಿಂದಾಗಿ ಜನರು ತೀವ್ರ ನಿರಾಶೆಗೊಳಗಾಗಿದ್ದರು.
ಈ ಬಾರಿ ಪುನಃ ನಿರೀಕ್ಷೆಗಳು ಗರಿಗೆದರಿವೆ.
ನಿರೀಕ್ಷೆಗಳು:ಪ್ರವಾಸೋದ್ಯಮ: ಮುಖ್ಯವಾಗಿ ಪ್ರವಾಸೋಧ್ಯಮ ಕ್ಷೇತ್ರಗಳಲ್ಲಿ ವಿಫುಲ ಅವಕಾಶವಿದ್ದರೂ ಈವರೆಗೆ ಈ ವಲಯದಲ್ಲಿ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ. ಜೋಗ, ತ್ಯಾವರೆಕೊಪ್ಪ, ಬಳ್ಳಿಗಾವೆ, ಕೆಳದಿ, ಇಕ್ಕೇರಿ, ಗಾಜನೂರು ಸಮೀಪದ ಆನೆಬೈಲು ಆನೆ ಬಿಡಾರ, ತುಂಗಾ ಮತ್ತು ಭದ್ರಾ ಹಿನ್ನೀರನ್ನು ಬಳಸಿಕೊಂಡು ಪ್ರವಾಸೋಧ್ಯಮ ಅಭಿವೃದ್ಧಿ. ಹೀಗೆ ಸಾಲು ಸಾಲು ಅಭಿವೃದ್ಧಿ ಕೆಲಸಗಳು ಕಾಯುತ್ತಿವೆ. ಸಂಸದ ಬಿ. ವೈ. ರಾಘವೇಂದ್ರ ಅವರು ಜೋಗ, ಸಕ್ರೆಬೈಲು ಆನೆ ಬಿಡಾರ, ಉಡುತಡಿ ಸೇರಿದಂತೆ ಹಲವು ಪ್ರವಾಸೋಧ್ಯಮ ಕ್ಷೇತ್ರಕ್ಕೆ ಸಾಕಷ್ಟು ಹಣ ತಂದರು. ಜೋಗದ ಅಭಿವೃದ್ಧಿ ಕೊನೆಯ ಹಂತದಲ್ಲಿದೆ. ಆದರೆ ಸಕ್ರೆಬೈಲು ಆನೆ ಬಿಡಾರ ಸೇರಿದಂತೆ ಹಲವು ಕ್ಷೇತ್ರಕ್ಕೆ ನೀಡಿದ ಹಣವನ್ನು ರಾಜ್ಯ ಸರ್ಕಾರ ಕಳೆದ ವರ್ಷ ವಾಪಸ್ಸು ಪಡೆದಿದ್ದು, ಆ ಬಳಿಕ ನೀಡಲೇ ಇಲ್ಲ.
ಈ ಆಯವ್ಯಯದಲ್ಲಿ ಮಲೆನಾಡಿನ ಪ್ರಾಕೃತಿಕ ಸಂಪತ್ತನ್ನು ಬಳಸಿಕೊಂಡ ಪ್ರವಾಸೋಧ್ಯಮ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು. ಇದಕ್ಕಾಗಿ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂಬ ಬೇಡಿಕೆಯಿದೆ. ಎಕೋ ಟೂರಿಸಂ ಕುರಿತು ಹೆಚ್ಚಿನ ನಿರೀಕ್ಷೆಯಿದೆ. ಇದಾದರೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬೆಳವಣಿಗೆಗೆ ಸಾಕಷ್ಟು ಸಹಾಯವಾಗುತ್ತದೆ.ಆಯುಷ್ ವಿವಿ: ಯಡಿಯೂರಪ್ಪ ತಮ್ಮ ಅಧಿಕಾರಾವಧಿಯಲ್ಲಿ ಶಿವಮೊಗ್ಗಕ್ಕೆ ಆಯುಷ್ ವಿವಿ ಘೋಷಿಸಿದ್ದರು. ಇದಕ್ಕಾಗಿ ಎನ್.ಆರ್. ಪುರ ರಸ್ತೆಯಲ್ಲಿ100 ಎಕರೆ ಭೂಮಿಯ ಜೊತೆಗೆ ತಮ್ಮ ಕೊನೆಯ ಸಚಿವ ಸಂಪುಟ ಸಭೆಯಲ್ಲಿ 10 ಕೋಟಿ ರು. ಅನುದಾನವನ್ನು ಮೀಸಲಿಟ್ಟರು. ಇದರ ಸ್ಥಾಪನೆ ಮತ್ತು ಅಭಿವೃದ್ಧಿಗೆ ಪೂರಕವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಬೇಕಾಗಿದೆ.
ಬೀದರ್‌ನಲ್ಲಿರುವ ರಾಜ್ಯದ ಏಕೈಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಪ್ರತ್ಯೇಕಿಸಿ ಶಿವಮೊಗ್ಗವನ್ನು ಕೇಂದ್ರವಾಗಿಸಿಕೊಂಡು ದಕ್ಷಿಣ ಕರ್ನಾಟಕಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ಬೇಡಿಕೆಯಿದೆ.ವಿಮಾನ ನಿಲ್ದಾಣ: ಯಡಿಯೂರಪ್ಪನವರ ಕನಸಿನ ವಿಮಾನ ನಿಲ್ದಾಣ ಮಲೆನಾಡಿನ ಅಭಿವೃದ್ಧಿ ದೃಷ್ಟಿಯಿಂದ ಮಹತ್ವದ್ದು. ಇದರ ನಿರ್ಮಾಣದ ಬಳಿಕ ಅಂತಿಮವಾಗಿ ನಿರ್ವಹಣೆಯ ಜವಾಬ್ದಾರಿಯನ್ನು ರಾಜ್ಯ ಸರ್ಕಾರಕ್ಕೆ ವಹಿಸಲಾಗಿದೆ. ಈ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆಯನ್ನು ಬೇಗ ಆಗಬೇಕಿದೆ. ಈಗಾಗಲೇ ಈ ಕುರಿತು ಟೆಂಡರ್ ಕರೆದಿದ್ದು, ಮಣ್ಣು ಪರೀಕ್ಷೆ ಕೂಡ ನಡೆದಿದೆ. ಹಣ ಬಿಡುಗಡೆಯೇ ಮುಖ್ಯವಾದುದು.
ಕಾರ್ಗೋ ವಿಮಾನ: ಪ್ರಯಾಣಿಕ ವಿಮಾನಗಳು ಸಂಚರಿಸುತ್ತಿವೆ. ಆದರೆ. ಕೈಗಾರಿಕೋದ್ಯಮಗಳ ಬೆಳವಣಿಗೆಗೆ ಪೂರಕವಾಗಿ ಸರಕು ಸಾಮಗ್ರಿ(ಕಾರ್ಗೋ) ವಿಮಾನಗಳ ಸಂಚಾರ ಆರಂಭಿಸಬೇಕಾಗಿದೆ.ಕೈಗಾರಿಕಾ ಪ್ರದೇಶ: ಕೈಗಾರಿಕೆಗಳ ಅಭಿವೃದ್ಧಿಗೆ ವಿಮಾನ ಸಂಚಾರ ಸೇವೆ ಬಹಳ ದೊಡ್ಡ ಕೊಡುಗೆ ನೀಡುತ್ತಿದೆಯಾದರೂ, ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಕೂಡ ಮುಖ್ಯವಾಗಿದೆ. ಆದರೆ ಸದ್ಯ ಅಗತ್ಯಕ್ಕೆ ತಕ್ಕಂತೆ ಕೈಗಾರಿಕಾ ಭೂಮಿ ಲಭ್ಯವಿಲ್ಲ. ಹೊಸತಾಗಿ ಕೈಗಾರಿಕಾ ಪ್ರದೇಶ ಸ್ಥಾಪನೆಯಾಗಬೇಕು. ಜೊತೆಗೆ ವಿಶೇಷ ಕೈಗಾರಿಕಾ ವಲಯ ಕೂಡ ಸ್ಥಾಪನೆಯಾಗಬೇಕಿದೆ.
ಫುಡ್ ಪಾರ್ಕ್: ಈ ಹಿಂದೆ ಜಿಲ್ಲೆಯಲ್ಲಿ ಆಹಾರ ಪಾರ್ಕ್ ಸ್ಥಾಪನೆ ಕುರಿತು ಮಾತುಗಳು ಕೇಳಿ ಬಂದಿತ್ತು. ಇದಕ್ಕಾಗಿ 100 ಎಕರೆ ಭೂಮಿಯನ್ನು ಗುರುತಿಸಲಾಗಿತ್ತು. ವಿಮಾನ ಸಂಚಾರ ಮತ್ತು ಉತ್ತಮ ಸಂಪರ್ಕಗಳು ಈಗ ಲಭ್ಯವಿದೆ. ಸಮರ್ಪಕ ರೀತಿಯಲ್ಲಿ ಫುಡ್ ಪಾರ್ಕ್ ಸ್ಥಾಪನೆಯಾದರೆ ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ದಕ್ಕಿದಂತಾಗುತ್ತದೆ.ಕಳೆದ ಬಜೆಟ್‌ನಲ್ಲಿ ಆಹಾರ ಸಂಸ್ಕರಣಾ ಘಟಕ ಘೋಷಣೆ ಆಗಿತ್ತು. ಆದರೆ, ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ಜಾಗದ ಸಮಸ್ಯೆ ಎದುರಾಗಿದೆ. ಹೀಗಾಗಿ ಏನೂ ಆಗಿಲ್ಲ.
ಮುಂದಿನ 25 ವರ್ಷದ ಗುರಿಯನ್ನಿಟ್ಟುಕೊಂಡು ಕೇಂದ್ರ ಸರ್ಕಾರ ಬೆಂಗಳೂರು- ಮುಂಬೈ ಕೈಗಾರಿಕಾ ಕಾರಿಡಾರ್ ಘೋಷಿಸಿದೆ. ಆದರೆ, ಈ ಕಾರಿಡಾರ್ ಶಿವಮೊಗ್ಗಕ್ಕೆ ಬರುವುದಿಲ್ಲ. ಅದಕ್ಕೆ ಪೂರಕವಾಗಿ ಶಿವಮೊಗ್ಗ ದಾವಣಗೆರೆ ಅಥವಾ ಶಿವಮೊಗ್ಗ ಚಿತ್ರದುರ್ಗ ಮಾರ್ಗದಲ್ಲಿ ಕೈಗಾರಿಕಾ ಕಾರಿಡಾರ್ ಮಾಡಲು ಅವಕಾಶವಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಆದ್ಯತೆಯಲ್ಲಿ ಗಮನ ಹರಿಸಿದರೆ ಮಲೆನಾಡಿನ ಚಿತ್ರಣವೇ ಬದಲಾಗುತ್ತದೆ ಎಂಬುದು ಉದ್ಯಮಿಗಳ ಮಾತು.ಹಿಂದಿನಿಂದಲೂ ಟ್ರಕ್ ಟರ್ಮಿನಲ್ ಕುರಿತು ಒತ್ತಾಯ ಕೇಳಿ ಬರುತ್ತಿದೆ. ಆದರೆ ಇದುವರೆಗೂ ಈ ಬೇಡಿಕೆ ಈಡೇರಿಲ್ಲ.
ಮಂಕಿ ಪಾರ್ಕ್: ಮಲೆನಾಡಿನ ಕೃಷಿಕರ ದೊಡ್ಡ ಸಮಸ್ಯೆಯೆಂದರೆ ಸಧ್ಯಕ್ಕೆ ಮಂಗಗಳು. ರೈತರ ಮತ್ತು ವಾನರ ನಡುವಿನ ಯುದ್ಧದಲ್ಲಿ ಸಧ್ಯ ರೈತರು ಹಣ್ಣಾಗಿದ್ದಾರೆ. ಫಸಲು ಉಳಿಸಿಕೊಳ್ಳಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ವರ್ಷಗಳ ಹಿಂದೆ ಮಂಕಿ ಪಾರ್ಕ್ ಸ್ಥಾಪನೆ ವಿಷಯ ಪ್ರಸ್ತಾಪವಾದಾಗ ರೈತರು ಖುಷಿ ಪಟ್ಟಿದ್ದರು. ಆದರೆ ಕೊನೆಗೂ ಈ ಬಗ್ಗೆ ಇದುವರೆಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ನಿರ್ಧಾರವಾಗಿಲ್ಲದೆ ಇರುವುದು ಬೇಸರ ಮೂಡಿಸಿದೆ. ಈ ಬಾರಿಯಾದರೂ ಅದು ಈಡೇರುವುದೇ ಎಂದು ಕಾದು ನೋಡಬೇಕು. ಇದೇ ರೀತಿ ಮಲೆನಾಡಿನ ಜನರು ಎದುರಿಸುತ್ತಿರುವ ಆನೆ, ಕಾಡೆಮ್ಮಗಳ ಹಾವಳಿಗೆ ಕೂಡ ಪರಿಹಾರ ಬೇಕಾಗಿದೆ. ಮುಗ್ದ ಜನರ ಸಾವನ್ನು ತಪ್ಪಿಸಬೇಕಿದೆ.ಅಡಕೆ ರೋಗಕ್ಕೆ ಪರಿಹಾರ: ಜಿಲ್ಲೆಯ ಆರ್ಥಿಕ ಜೀವನಾಡಿಯಾಗಿರುವ ಅಡಕೆಗೆ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗ ತೀವ್ರವಾಗಿ ಕಾಡುತ್ತಿದೆ. ಮುಖ್ಯವಾಗಿ ಮಲೆನಾಡಿನ ಅಡಕೆ ಬೆಳೆಗಾರರು ತೀವ್ರ ಆತಂಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಡಕೆ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿ ಇಲ್ಲಿನ ಆರ್ಥಿಕ ವ್ಯವಸ್ಥೆಯನ್ನು ಉಳಿಸಬೇಕಿದೆ.
