ಕನ್ನಡಪ್ರಭ ವಾರ್ತೆ ಸಾಗರ

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿರುವ ರಾಜ್ಯ ಬಜೆಟ್ ಸಾಲ ಮಾಡಿ ತುಪ್ಪ ತಿನ್ನು ಮನಸ್ಥಿತಿಯ ಬಜೆಟ್ ಆಗಿದೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಹಾಲಪ್ಪ ಹೇಳಿದರು.

ತಮ್ಮ ಜನ್ಮದಿನದ ಅಂಗವಾಗಿ ಪಟ್ಟಣದ ಉಪವಿಭಾಗೀಯ ಆಸ್ಪತ್ರೆ ಬಳಿ ಬಿಜೆಪಿ ಮತ್ತು ಹಾಲಪ್ಪ ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ವಿಪರೀತ ಸಾಲ ಮಾಡಿ ಪ್ರತಿ ವರ್ಷ ೭೦ರಿಂದ ೮೦ ಸಾವಿರ ಕೋಟಿ ರು. ಬಡ್ಡಿ ಕಟ್ಟಿ ಸಿದ್ದರಾಮಯ್ಯ ಸರ್ಕಾರ ನಡೆಸಲು ಸಾಧ್ಯವೆ ಇಲ್ಲ ಎಂದು ವಿಶ್ಲೇಷಿಸಿದರು.

ಅಲ್ಪಸಂಖ್ಯಾತರಿಗೆ ಬಡ್ಡಿಮನ್ನಾ ಮಾಡುತ್ತೇನೆ ಎಂದು ಹೇಳುವ ಇವರಿಗೆ ಅವರು ಅಸಲೇ ಕಟ್ಟುವುದಿಲ್ಲ ಎನ್ನುವ ಕಲ್ಪನೆ ಇದ್ದಂತೆ ಕಾಣುತ್ತಿಲ್ಲ. ಸುಮಾರು ೮.೫೦ ಲಕ್ಷ ಕೋಟಿ ರು. ಸಾಲ ಮಾಡಿದ್ದಾರೆ. ಬಜೆಟ್ನಲ್ಲಿ ಶಿವಮೊಗ್ಗ ಜಿಲ್ಲೆಗೆ ನಿರೀಕ್ಷಿತವಾದ ಯಾವ ಯೋಜನೆಯನ್ನೂ ಘೋಷಣೆ ಮಾಡಿಲ್ಲ ಎಂದು ಹೇಳಿದರು.

ಸಾಗರ ಕ್ಷೇತ್ರದ ಅಭಿವೃದ್ಧಿ ನಿಂತ ನೀರಾಗಿದೆ. ಶರಾವತಿ ಹಿನ್ನೀರಿನಿಂದ ಸಾಗರ ಪಟ್ಟಣಕ್ಕೆ ಕುಡಿಯುವ ನೀರನ್ನು ತರುವಲ್ಲಿ ಬಿಜೆಪಿ ಪ್ರಮುಖಪಾತ್ರ ವಹಿಸಿದ್ದನ್ನು ಜನರು ಮರೆತಿಲ್ಲ. ನಾನು ಕಳೆದ ಬಾರಿ ಶಾಸಕನಾಗಿದ್ದಾಗ ಆನಂದಪುರ ಹೋಬಳಿಯ ೮ ಗ್ರಾಮ ಪಂಚಾಯ್ತಿಯ ೧೨೬ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿತ್ತು. ಇದರ ಜೊತೆಗೆ ಹಕ್ರೆ-ಗುಬ್ಬಗೋಡಿನಿಂದ ೩೩೭ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ೧೨೭ ಕೋಟಿ ರು. ಯೋಜನೆ ಅನುಷ್ಠಾನಕ್ಕೆ ತರಲಾಗಿತ್ತು. ಕಾಮಗಾರಿ ಪ್ರಾರಂಭಕ್ಕೆ ಹಾಲಿ ಶಾಸಕರು ಚೌಕಾಸಿ ಮಾಡುತ್ತಿದ್ದಾರೆ. ಆದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಇದರ ಜತೆ ಹೊಸನಗರ ತಾಲೂಕಿನಲ್ಲಿ ಚಕ್ರ ಡ್ಯಾಂನಿಂದ ೬೬೭ ಹಳ್ಳಿಗಳಿಗೆ ನೀರು ಪೂರೈಕೆ ಮಾಡಲು ೨೦೦ ಕೋಟಿ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗಿತ್ತು. ಅದು ಸಹ ಕಾಮಗಾರಿ ಪ್ರಾರಂಭ ಮಾಡಿಲ್ಲ. ಈ ಎಲ್ಲಾ ಯೋಜನೆ ತಮ್ಮ ಅವಧಿಯಲ್ಲಿ ಅನುಷ್ಠಾನಕ್ಕೆ ಬಂದಿದೆ ಎನ್ನುವುದಕ್ಕೆ ದಾಖಲೆ ಇದೆ ಎಂದು ಹೇಳಿದರು.


ಟ್ಯಾಗೂರ್ ಕಲ್ಚರಲ್ ಕಾಂಪ್ಲೆಕ್ಸ್ಗೆ ೪.೮೦ ಕೋಟಿ ರು. ಅನುದಾನ ಮಂಜೂರು ಮಾಡಿಸಿದ್ದು ಉಪವಿಭಾಗಾಧಿಕಾರಿಗಳ ಖಾತೆಯಲ್ಲಿದೆ. ಸೊರಬ ರಸ್ತೆ ಅಗಲೀಕರಣಕ್ಕೆ ಬಂದ ೧೧ ಕೋಟಿ ರು. ಹಣ ಉಪವಿಭಾಗಾಧಿಕಾರಿಗಳ ಖಾತೆಯಲ್ಲಿದೆ. ಬಿ.ಎಚ್.ರಸ್ತೆ, ಕೆಳದಿ ರಸ್ತೆ, ಸೊರಬ ರಸ್ತೆ, ಭೀಮನಕೋಣೆ ರಸ್ತೆ, ರಿಪ್ಪನಪೇಟೆ ರಸ್ತೆ ಅಗಲೀಕರಣ ಎಲ್ಲವೂ ನನ್ನ ಪರಿಶ್ರಮದಿಂದ ಜಾರಿಗೆ ಬಂದಿದ್ದು, ಈಗಿನ ಶಾಸಕರಿಗೆ ಅದರ ಪರಿಕಲ್ಪನೆಯೆ ಇಲ್ಲ ಎಂದು ಹೇಳಿದರು.

ಪಕ್ಷದ ಗಣೇಶ್ ಪ್ರಸಾದ್, ದೇವೇಂದ್ರಪ್ಪ, ಅರುಣ ಕುಗ್ವೆ, ಹರೀಶ್ ಮೂಡಳ್ಳಿ, ಮೈತ್ರಿ ಪಾಟೀಲ್, ಗಾಯತ್ರಿ ಮಲ್ಲೇಶಪ್ಪ, ಬಿ.ಟಿ.ರವೀಂದ್ರ ಇತರರು ಹಾಜರಿದ್ದರು. ಹಾಲಪ್ಪನವರ ಜನ್ಮದಿನದ ಅಂಗವಾಗಿ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.