ಬಂಗಾರಪೇಟೆ ಪುರಸಭೆಗೆ 48 ಲಕ್ಷ ರು.ಗಳ ಉಳಿತಾಯ ಬಜೆಟ್‌

| Published : Mar 22 2025, 02:02 AM IST

ಸಾರಾಂಶ

ಬಂಗಾರಪೇಟೆ ಪಟ್ಟಣದ ದೊಡ್ಡಕೆರೆ ಶುದ್ಧೀಕರಣಕ್ಕೆ ೪ ಕೋಟಿ ಮೀಸಲಿಡಲಾಗಿದೆ, ಪಟ್ಟಾಭಿಶೇಕೋದ್ಯಾನವನ ಅಭಿವೃದ್ದಿಗೆ ೨ಕೋಟಿ, ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ೧೦ ಕೋಟಿ ಮಂಜೂರು ಮಾಡಲಾಗಿದೆ ಇಷ್ಟರಲ್ಲೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳಿಸಲಾಗುವುದು. ದೇಶಿಹಳ್ಳಿ ಬಳಿ ೪ಕೋಟಿ ವೆಚ್ಚದಲ್ಲಿ ಕಸಾಯಿ ಖಾನೆ ಮಾರುಕಟ್ಟೆ ನಿರ್ಮಾಣಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

೨೦೨೫-೨೬ನೇ ಸಾಲಿನ ಬಜೆಟ್‌ನ ವಿಶೇಷ ಸಭೆಯು ಪುರಸಭೆಯ ಅಧ್ಯಕ್ಷ ಎಂ.ಗೋವಿಂದ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. ಎಲ್ಲಾ ಮೂಲಕಗಳಿಂದ ಪುರಸಭೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಸೇರಿ ೧೧೪.೭೩ಕೋಟಿ ಆದಾಯ ನಿರೀಕ್ಷಿಸಿದ್ದು, ಅದರಲ್ಲಿ ೯೪.೨೬ಕೋಟಿ ವೆಚ್ಚ ಮತ್ತು ೪೮ ಲಕ್ಷ ರು.ಗಳ ಉಳಿತಾಯ ಬಜೆಟ್‌ನ್ನು ಅಧ್ಯಕ್ಷರು ಮಂಡಿಸಿದರು.ಪುರಸಭೆಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಈ ಬಾರಿ ಪುರಸಭೆ ೪೮ ಲಕ್ಷ ಉಳಿತಾಯ ಬಜೆಟ್ ಮಂಡಿಸಿದೆ, ಬೇಸಿಗೆಯಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿತ್ತು. ಆದರೆ ಯರಗೋಳ್ ಡ್ಯಾಂ ನಿರ್ಮಾಣವಾದಾಗಿನಿಂದ ನೀರಿನ ಸಮಸ್ಯೆ ದೂರವಾಗಿದೆ ಎಂದರು.

ವಾರದೊಳಗೆ ಯರಗೋಳ್‌ ನೀರು

ಪಟ್ಟಣದ ಎಲ್ಲಾ ಬಡಾವಣೆಗಳಿಗೆ ಇನ್ನು ವಾರದೊಳಗೆ ಯರಗೋಳ್ ನೀರು ಸರಬರಾಜು ಮಾಡಲಾಗುವುದು ಎಂದರಲ್ಲದೆ ಈಗ ವಾರಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ,ಇನ್ನು ಮುಂದೆ ಮೂರುದಿನಕ್ಕೊಮ್ಮೆ ಪೂರೈಸಲಾಗುವುದು ಎಂದು ತಿಳಿಸಿದರು.ಪಟ್ಟಣದ ದೇಶಿಹಳ್ಳಿ ಬಳಿ ೪ಕೋಟಿ ವೆಚ್ಚದಲ್ಲಿ ಕಸಾಯಿ ಖಾನೆ ಮಾರುಕಟ್ಟೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದು ಪೂರ್ಣಗೊಂಡರೆ ಪಟ್ಟಣದಲ್ಲಿ ಎಲ್ಲೆಂದರಲ್ಲಿರುವ ಚಿಕ್ಕನ್ ಮಟನ್, ಮೀನು ಅಂಡಿಗಳನ್ನು ಸ್ಥಳಾಂತರಿಸಿ ಒಂದೇ ಕಡೆ ಎಲ್ಲಾ ತರದ ಮಾಂಸದ ಅಂಡಿಗಳು ಲಭಿಸಲಿವೆ, ಇದು ಜಿಲ್ಲೆಯಲ್ಲೆ ಪ್ರಥಮವಾಗಲಿದೆ ಎಂದರು.

ಶೀಘ್ರದಲ್ಲೇ ಕಾಮಗಾರಿ ಪೂರ್ಣ

ಇದಲ್ಲದೆ ಪಟ್ಟಣದ ದೊಡ್ಡಕೆರೆ ಶುದ್ಧೀಕರಣಕ್ಕೆ ೪ ಕೋಟಿ ಮೀಸಲಿಡಲಾಗಿದೆ, ಪಟ್ಟಾಭಿಶೇಕೋದ್ಯಾನವನ ಅಭಿವೃದ್ದಿಗೆ ೨ಕೋಟಿ, ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ೧೦ ಕೋಟಿ ಮಂಜೂರು ಮಾಡಲಾಗಿದೆ ಇಷ್ಟರಲ್ಲೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳಿಸಿ ಜಿಲ್ಲೆಯಲ್ಲೆ ಪಟ್ಟಣವನ್ನು ಮಾದರಿಯಾಗಿ ರೂಪಿಸಲಾಗುವುದು ಇದಕ್ಕೆಲ್ಲಾ ಎಲ್ಲಾ ಪುರಸಭೆ ಸದಸ್ಯರ ಸಹಕಾರವೇ ಕಾರಣವಾಗಿದೆ ಎಂದರು.ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ನಿಯಂತ್ರಿಸಲು ಪುರಸಭೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ೬೨೫ ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಲಾಗಿದೆ, ಉಳಿದ ನಾಯಿಗಳನ್ನೂ ಹಂತ ಹಂತವಾಗಿ ಹಿಡಿದು ಸ್ಥಳಾಂತರಿಸುವ ಕೆಲಸ ಮಾಡಲಾಗುವುದು ಇದಲ್ಲೆ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡುವ ಕೆಲಸ ಸಹ ಸಾಗಿದೆ ಎಂದರು ತಿಳಿಸಿದರು.