ಬಸವರಾಜ ಹಿರೇಮಠ

ಧಾರವಾಡ:

ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ನಗರಿಯಾಗಿ ಬೆಳೆದಿರುವ ಧಾರವಾಡ, ರಾಜ್ಯದಲ್ಲಿ ತನ್ನದೇ ಆದ ಅಸ್ತಿತ್ವ ಹೊಂದಿದೆ. ಆದರೆ, ದಕ್ಷಿಣ ಕರ್ನಾಟಕದ ಮೈಸೂರಿನಂತೆ ಉತ್ತರದ ಧಾರವಾಡದ ಸಾಂಸ್ಕೃತಿಕವಾಗಿ ಇನ್ನಷ್ಟು ಬೆಳೆಯಲು ಮುಖ್ಯಮಂತ್ರಿಗಳು ಬಜೆಟ್‌ ಮೂಲಕ ಮುಕ್ತವಾಗಿ ಪ್ರೋತ್ಸಾಹಿಸಬೇಕಿದೆ.

ಬರೋಬ್ಬರಿ 136 ವರ್ಷಗಳ ಇತಿಹಾಸ ಹೊಂದಿರುವ, ಕನ್ನಡದ ಪ್ರಾತಿನಿಧಿಕ ಸಂಸ್ಧೆ ಕರ್ನಾಟಕ ವಿದ್ಯಾವರ್ಧಕ ಸಂಘ, ರಾಷ್ಟ್ರಮಟ್ಟದ ಸಂಗೀತ ದಿಗ್ಗಜರಾದ ಪಂ. ಬಸವರಾಜ ರಾಜಗುರು, ಪಂ. ಮಲ್ಲಿಕಾರ್ಜುನ ಮನಸೂರು, ಕಲಾವಿದರಾದ ಡಿ.ವಿ. ಹಾಲಭಾವಿ, ಕನ್ನಡದ ಕಟ್ಟಾಳು ಆಲೂರು ವೆಂಕಟರಾವ್‌, ವರಕವಿ ದ.ರಾ. ಬೇಂದ್ರೆ ಹೆಸರಿನ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗಳು, ರಂಗಾಯಣ, ಸರ್ಕಾರಿ ಆರ್ಟ್‌ ಗ್ಯಾಲರಿ ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯೂ ಧಾರವಾಡದಲ್ಲಿದೆ. ಅವುಗಳಿಗೆ ವಾರ್ಷಿಕ ಅನುದಾನ ತೀರಾ ಕಡಿಮೆ ಇದ್ದು, ಬಜೆಟ್‌ನಲ್ಲಿ ವಾರ್ಷಿಕ ಅನುದಾನ ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ.

ಬೇಂದ್ರೆ ಭವನ, ಕವಿವಿಗೆ ಬೇಕು ಬಲ:


ಅದರಲ್ಲೂ ಬೇಂದ್ರೆ ಭವನ ಮಳೆಗಾಲದಲ್ಲಿ ಸೋರುತ್ತಿದ್ದು, ಈಗಾಗಲೇ ಪ್ರಸ್ತಾವನೆ ಸಲ್ಲಿಸಿರುವಂತೆ ₹ 2 ಕೋಟಿ ಅನುದಾನ ಘೋಷಣೆ ಮಾಡಿ ಬೇಂದ್ರೆ ಭವನ ಉಳಿಸಿಕೊಳ್ಳುವ ಕಾರ್ಯವಾಗಲಿ ಎನ್ನುವುದು ಬೇಂದ್ರೆ ಟ್ರಸ್ಟ್‌ ಸದಸ್ಯರ ಆಗ್ರಹ.

ಇನ್ನು, ಕೃಷಿ ವಿವಿ, ಕರ್ನಾಟಕ ವಿವಿ, ಕಾನೂನು ವಿವಿ, ಇತ್ತೀಚೆಗೆ ವಿಧಿ ವಿಜ್ಞಾನ ವಿವಿ ಸಹ ಶುರುವಾಗಿದೆ. ಈ ಪೈಕಿ ಕವಿವಿ ಆರ್ಥಿಕ ಸ್ಥಿತಿ ತುಂಬಾ ಹದಗೆಟ್ಟಿದ್ದು, ಪಿಂಚಣಿ ಕೊಡಲು ಪರದಾಡಿದ ಸಂಗತಿ ಸರ್ಕಾರಕ್ಕೂ ಗೊತ್ತು. ಈ ಹಿನ್ನೆಲೆಯಲ್ಲಿ ಕವಿವಿ ಬಲವರ್ಧನೆಗೆ ವಿಶೇಷ ಅನುದಾನ ಘೋಷಣೆಯ ನಿರೀಕ್ಷೆ ಇದೆ.

ಕಲಾಭವನ ನವೀಕರಣ?

ಧಾರವಾಡದಲ್ಲಿ ರಂಗಭೂಮಿ ಚಟುವಟಿಕೆ, ಸಂಗೀತ ಕಾರ್ಯಕ್ರಮಗಳಿಗೆ ಒಂದೇ ಒಂದು ಸರ್ಕಾರಿ ಭವನವಿಲ್ಲ. ಇದ್ದ ಕಲಾಭವನ ಹತ್ತು ವರ್ಷಗಳಿಂದ ಪಾಳು ಬಿದ್ದಿದೆ. ಕಲಾಭವನ ನವೀಕರಣ ತುರ್ತಾಗಬೇಕಿದೆ. ಖ್ಯಾತ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್‌ ಜನ್ಮಸ್ಥಳ ಶುಕ್ರವಾರ ಪೇಟೆ ಮನೆಯು ಹಲವು ವರ್ಷಗಳಿಂದ ಹಾಳು ಬಿದ್ದಿದೆ. ಈ ಬಾರಿ ಈ ಮನೆಯನ್ನು ಸ್ಮಾರಕ ಸ್ಥಳ ಮಾಡಲು ಬಜೆಟ್‌ನಲ್ಲಿ ಹೆಚ್ಚಿನ ನಿರೀಕ್ಷೆ ಹೊಂದಲಾಗಿದೆ. ಅದೇ ರೀತಿ ಪಂ. ಬಸವರಾಜ ರಾಜಗುರು ಅವರ ಸ್ಮಾರಕ ಭವನಕ್ಕೆ ₹ 2 ಕೋಟಿ ಅನುದಾನ ಇದೆ. ಆದರೆ, ಹಲವು ವರ್ಷಗಳಿಂದ ಜಾಗದ ಸಮಸ್ಯೆಯಿಂದ ಭವನ ನಿರ್ಮಾಣ ಸಾಧ್ಯವಾಗಿಲ್ಲ ಎನ್ನುವುದು ಟ್ರಸ್ಟ್ ಅಧ್ಯಕ್ಷ ಪಂ. ವೆಂಕಟೇಶ ಕುಮಾರ ಅವರ ಅಳಲು.

ಭವನಗಳ ನಿರ್ವಹಣೆ:

ರಂಗಾಯಣ ಪೂರ್ತಿಯಾಗಿ ಮಹಾನಗರ ಪಾಲಿಕೆ ಆಸ್ತಿಯಲ್ಲಿದ್ದು, ಅಭಿವೃದ್ಧಿಗೆ ಸ್ವಂತ ಜಾಗ ಇಲ್ಲದಿರುವುದು ಅಡ್ಡಿಯಾಗಿದೆ. ಬಾರೋ ಸಾಧನಕೇರಿ ಕೆರೆ ಹಾಗೂ ಉದ್ಯಾನವನ ನಿರ್ವಹಣೆ, ಕೆಲಗೇರಿ ಕೆರೆ ಅಭಿವೃದ್ಧಿ ಹಾಗೂ ನಿರ್ವಹಣೆ, ಕುಂದಗೋಳದ ಸವಾಯಿ ಗಂಧರ್ವ ಭವನ, ಅಣ್ಣಿಗೇರಿ ಪಂಪ ಸ್ಮಾರಕ ಭವನ ಅಂತಹ ಜಿಲ್ಲೆಯಲ್ಲಿರುವ ಸಾಕಷ್ಟು ಭವನಗಳು ನಿರ್ವಹಣೆ ಕೊರತೆಯಿಂದ ನಲಗುತ್ತಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಈ ಭವನಗಳ ನಿರ್ವಹಣೆಗೆ ಬಜೆಟ್‌ನಲ್ಲಿ ಅನುದಾನ ಸಿಗುವ ನಿರೀಕ್ಷೆಯನ್ನು ಇಲ್ಲಿಯ ಸಾಂಸ್ಕೃತಿಕ ಚಿಂತಕರು ಹೊಂದಿದ್ದಾರೆ.ಸಾಂಸ್ಕೃತಿಕ ಯೋಜನೆ ನಿರೀಕ್ಷೆ..

ಧಾರವಾಡಕ್ಕೆ ಸಾಂಸ್ಕೃತಿಕ ಅಸ್ತಿತ್ವ ಬರಲು ಬರೀ ಬಾಯಿ ಮಾತಿನ ಭರವಸೆ ಸಾಲುವುದಿಲ್ಲ. ಸಾಂಸ್ಕೃತಿಕ ಯೋಜನೆಗಳು ಹಾಗೂ ಅದಕ್ಕೆ ಅಗತ್ಯ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಬೇಕು. ಈಗಿರುವ ಸಾಂಸ್ಕೃತಿಕ ಭವನಗಳ ನಿರ್ವಹಣೆ, ಖ್ಯಾತನಾಮ ಹೆಸರಿನ ಟ್ರಸ್ಟ್‌ಗಳಿಗೆ ವಿಶೇಷ ಅನುದಾನ ಒದಗಿಸುವ ನಿರೀಕ್ಷೆ ಹೊಂದಲಾಗಿದೆ.

ಸಮೀರ ಜೋಶಿ, ಮನೋಹರ ಗ್ರಂಥ ಮಾಲಾ ಮುಖ್ಯಸ್ಥ