ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ ಪ್ರತಿ ಬಾರಿಯ ಬರಪೀಡಿತ ಅವಳಿ ಜಿಲ್ಲೆಗಳಿಗೆ ಸರ್ಕಾರವು ಮಂಡಿಸುವ ಬಜೆಟ್‌ನಲ್ಲಿ ಅನ್ಯಾಯವಾಗುತ್ತಲೇ ಬಂದಿದೆ. ಇದರಿಂದಾಗಿ ಜಿಲ್ಲೆಯ ಜನತೆ ಬಜೆಟ್ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಸದ್ಯ ನಾಲ್ಕು ಮಂದಿ ಕಾಂಗ್ರೆಸ್ ಶಾಸಕರಿದ್ದು, ಒತ್ತಡ ಹಾಕಿಯಾದರೂ ಈ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ಯೋಜನೆಗಳನ್ನು ಪ್ರಕಟಿಸುವಂತೆ ಜಿಲ್ಲೆಯ ಜನತೆ ಒತ್ತಾಯಿಸಿದ್ದಾರೆ.ಕೋಲಾರ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು, ಟೊಮೆಟೋ ಮಾರುಕಟ್ಟೆಗೆ ಜಾಗ, ರಿಂಗ್ ರಸ್ತೆ, ಕೆಸಿ ವ್ಯಾಲಿ ಮೂರನೇ ಹಂತದ ಶುದ್ಧೀಕರಣ, ಟೊಮೆಟೊ ಗುಣಮಟ್ಟ ಹೆಚ್ಚಿಸಿಕೊಳ್ಳಲು ತಜ್ಞರ ಸಮಿತಿ ರಚನೆ, ಎತ್ತಿನಹೊಳೆ ಯೋಜನೆಗೆ ಚುರುಕು, ಮಾವು ಸಂಸ್ಕರಣಾ ಘಟಕ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಬಜೆಟ್‌ನಲ್ಲಿ ಪ್ರಕಟಿಸುವಂತೆ ಆಗ್ರಹಿಸಿದ್ದಾರೆ.
ಹಿಂದುಳಿದ ಕೋಲಾರ ಜಿಲ್ಲೆರಾಜಧಾನಿ ಬೆಂಗಳೂರಿಗೆ ೭೦ ಕಿ.ಮೀ ದೂರದಲ್ಲಿರುವ ಕೋಲಾರ ಜಿಲ್ಲೆಯು ನೆರೆಯ ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದಿದೆ, ಅನೇಕ ವರ್ಷದಿಂದಲೂ ಈ ವಿಚಾರ ಚರ್ಚೆಯ ಹಂತದಲ್ಲಿ ಇದ್ದರೂ ಬಗೆಹರಿಸುವಲ್ಲಿ ಯಾವುದೇ ಸರ್ಕಾರ ಮುಂದಾಗುತ್ತಿಲ್ಲ.ಸರಕಾರಿ ಮೆಡಿಕಲ್ ಕಾಲೇಜು ಅಗತ್ಯವಾಗಿದ್ದು, ಅದರ ಬಗ್ಗೆ ಅನೇಕ ಬಾರಿ ಪ್ರಸ್ತಾಪವಾಗಿದ್ದರೂ ಈ ಬಜೆಟ್, ಮುಂದಿನ ಬಜೆಟ್ ಎಂದು ಹೇಳಿಕೊಂಡೇ ಬರುತ್ತಿದೆ ಹೊರತು ಆಗಿದ್ದೇನೂ ಇಲ್ಲ, ಇನ್ನು ಟೊಮೆಟೋ ಮಾರುಕಟ್ಟೆಗೆ ಸುಮಾರು ೫೦ ಎಕರೆ ಜಾಗಬೇಕಾಗಿದ್ದು, ಅನೇಕ ವರ್ಷದಿಂದಲೂ ಹುಡುಕಿಕೊಂಡೇ ಕಾಲಹರಣ ಮಾಡಲಾಗುತ್ತಿದೆ.ರಿಂಗ್ ರಸ್ತೆ ನಿರ್ಮಾಣ ಅನುಮಾನ
ರಿಂಗ್ ರಸ್ತೆಗೆ ಸರ್ವೇ ಮುಗಿದಿದೆ, ೨೫೦ ಕೋಟಿ ರು. ಅನುದಾನದಲ್ಲಿ ೧೫೦ ಕೋಟಿರೂ ಅನುದಾನ ನೀಡುತ್ತೇವೆಂದು ಹೇಳುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ, ಅನುದಾನ ಕೇಂದ್ರ ಸರ್ಕಾರ ವಾಪಸ್ ಪಡೆದಿದೆ ಎಂದು ಆರೋಪಿಸಿ ಜಾರಿಕೊಂಡಿದ್ದಾರೆ. ಅಲ್ಲದೆ ಕೆಸಿ ವ್ಯಾಲಿ ಮೂರನೇ ಹಂತದ ಶುದ್ಧೀಕರಣವಾದರೆ ನೀರಿನ ಪ್ರಮಾಣ ಕಡಿಮೆಯಾಗುತ್ತದೆ, ಹೀಗಾಗಿ ೩ನೇ ಹಂತದ ಶುದ್ಧೀಕರಣ ಅವಶ್ಯಕತೆಯಿಲ್ಲವೆಂದೂ ಹೇಳಿದ್ದಾರೆ.ಆದರೆ, ಕೆಸಿವ್ಯಾಲಿ ನೀರು ಬಂದ ಬಳಿಕ ಜಿಲ್ಲೆಯ ಕೆಲವು ಭಾಗದ ಟೊಮೆಟೊ ಗುಣಮಟ್ಟ ಕಳೆದುಕೊಂಡಿದ್ದು, ತಜ್ಞರ ಸಮಿತಿ ರಚನೆ ಮಾಡಬೇಕೆಂಬ ಆಗ್ರಹ ಜೋರಾಗಿ ಎದ್ದಿದ್ದರೂ ಅದರ ಬಗ್ಗೆ ಜನಪ್ರತಿನಿಧಿಗಳು ಕಿವಿಗೊಡುತ್ತಿಲ್ಲ. ಮಾವು ಬೆಳೆಯಲ್ಲಿ ಜಿಲ್ಲೆಯ ಶ್ರೀನಿವಾಸಪುರ ವಿಶ್ವವಿಖ್ಯಾತಿ ಪಡೆದಿದ್ದು, ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಬೇಕಿದೆ.ಎತ್ತಿನಹೊಳೆ: ಜಿಲ್ಲೆಗೆ ಕೊನೆಯ ಸ್ಥಾನ
ಇವುಗಳ ಜತೆಗೆ ಪ್ರಮುಖವಾಗಿ ಎತ್ತಿನಹೊಳೆ ಯೋಜನೆ ಕೋಲಾರ-ಚಿಕ್ಕಬಳ್ಳಾಪುರ ಭಾಗಕ್ಕೆ ನೀರು ಒದಗಿಸುವ ಸಲುವಾಗಿ ಆರಂಭಿಸಲಾಯಿತಾದರೂ ಬೇರೆ ಬೇರೆ ಜಿಲ್ಲೆ, ತಾಲೂಕುಗಳನ್ನು ಯೋಜನೆಗೆ ಒಳಪಡಿಸಿಕೊಳ್ಳುವ ಮೂಲಕ ಜಿಲ್ಲೆಯನ್ನು ಕೊನೆಯ ಸ್ಥಾನದಲ್ಲಿ ಇರಿಸಿದೆ, ಹೀಗಾಗಿ ನಮ್ಮ ಭಾಗಕ್ಕೆ ನೀರು ಬರುವುದೇ ಅನುಮಾನ ಎಂಬಂತಾಗಿದ್ದು, ಸರಕಾರವು, ಕುಂಟುತ್ತಾ ಸಾಗುತ್ತಿರುವ ಯೋಜನೆಗೆ ಚುರುಕು ಮುಟ್ಟಿಸಿ ಕೋಲಾರಕ್ಕೆ ನೀರು ಸಿಗುವಂತೆ ಮಾಡಬೇಕಿದೆ ಎನ್ನುವ ಒತ್ತಾಯವೂ ಜನರದ್ದಾಗಿದೆ.ಶುಕ್ರವಾರ ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ಯಾವ ಯೋಜನೆಗಳು ಸಿಗುತ್ತವೆ ಎನ್ನುವ ಬಗ್ಗೆ ಜನತೆ ಕಾತುರದಲ್ಲಿದ್ದಾರೆ, ಮೊದಲಿನಂತೆ ಅನ್ಯಾಯ ಮಾಡದೆ ಸೂಕ್ತ ಯೋಜನೆಗಳನ್ನು ಘೋಷಿಸಿ ಅಂತೆಯೇ ಅನುದಾನ ಶೀಘ್ರ ನೀಡಲಿ ಎನ್ನುವುದು ಜಿಲ್ಲೆಯ ಜನರ ಒತ್ತಾಯವಾಗಿದೆ.