ಸಾರಾಂಶ
ನಗರದಲ್ಲಿ ನಡೆಯುತ್ತಿರುವ ಗ್ರಾಮದೇವತೆ ಉತ್ಸವದಲ್ಲಿ ಕೋಣ ಬಲಿ ನೀಡಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ
ಹರಿಹರ: ನಗರದಲ್ಲಿ ನಡೆಯುತ್ತಿರುವ ಗ್ರಾಮದೇವತೆ ಉತ್ಸವದಲ್ಲಿ ಕೋಣ ಬಲಿ ನೀಡಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ. ದೇವರ ಹೆಸರಲ್ಲಿ ಕೋಣವೊಂದನ್ನು ಬಲಿ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಪರಿಶೀಲಿಸಿ, ಭಾರತೀಯ ನ್ಯಾಯ ಸಂಹಿತೆ-2023 (ಬಿಎನ್‍ಎಸ್)ರ ಕಲಂ 325 ಹಾಗೂ 190 ಮತ್ತು ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಅಧಿನಿಯಮ-1959ರಡಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ.
ಸುಮಾರು 15ರಿಂದ 20 ಜನರು ಸೇರಿಕೊಂಡು ಅಜ್ಞಾತ ಸ್ಥಳದಲ್ಲಿ ಪ್ರಾಯದ ಕೋಣವನ್ನು ನೆಲಕ್ಕೆ ಕೆಡವಿ ವಧೆ ಮಾಡುತ್ತಿರುವ 30 ಸೆಕೆಂಡ್ ಅವಧಿಯ ವಿಡಿಯೋ ಇದಾಗಿದೆ.ಕಠಿಣ ಕ್ರಮ ಕೈಗೊಳ್ಳಿ:
ದೇವರ ಹೆಸರಲ್ಲಿ ಪ್ರಾಣಿ ಬಲಿ ನೀಡುವುದು ಅಪರಾಧ. ಆದರೂ ಹರಿಹರ ಸೇರಿದಂತೆ ವಿವಿಧೆಡೆ ಪ್ರಾಣಿ ಬಲಿ ನಡೆಯುತ್ತಿದೆ. ಧರ್ಮಾಚರಣೆ ಮತ್ತು ಮೌಢ್ಯತೆಯ ನಡುವೆ ದೊಡ್ಡ ಅಂತರವಿದೆ. ಧರ್ಮಾಚರಣೆಗೆ ಅಭ್ಯಂತರವಿಲ್ಲ, ಆದರೆ ಮೌಢ್ಯವನ್ನು ಖಂಡಿಸುತ್ತೇವೆ. ಹರಿಹರದಲ್ಲಿ ಕೋಣ ಬಲಿ ನೀಡಿದ ಆರೋಪಿತರನ್ನು ಶೀಘ್ರವೇ ಪತ್ತೆಹಚ್ಚಿ, ಜಿಲ್ಲಾಡಳಿತ ಪ್ರಾಮಾಣಿಕವಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷರಾದ ದಯಾನಂದ ಸ್ವಾಮೀಜಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಪಿ.ಜೆ.ಮಹಾಂತೇಶ್, ಮಂಜುನಾಥ್ ಎಂ. ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.