ವಾಲ್ಮೀಕಿ ವಾಸಿಸುವ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಿಸಿ: ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ

| Published : Oct 16 2024, 12:48 AM IST

ವಾಲ್ಮೀಕಿ ವಾಸಿಸುವ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಿಸಿ: ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲಾತಿ ಹೆಚ್ಚಿಸುವ ಮೂಲಕ ಸಾಮಾಜಿಕ ನ್ಯಾಯದೆಡೆಗೆ ಹೆಜ್ಜೆ ಹಾಕಿದೆ. ಈ ಸಮುದಾಯಗಳ ಶೈಕ್ಷಣಿಕ ಹಾಗೂ ಆರ್ಥಿಕಾಭಿವೃದ್ಧಿಗೆ ಪೂರಕವಾದ ಯೋಜನೆ ತರಲಾಗಿದೆ

ಕನ್ನಡಪ್ರಭ ವಾರ್ತೆ ಲೋಕಾಪುರ

ಸರ್ಕಾರ ವಾಲ್ಮೀಕಿ ಸಮುದಾಯ ವಾಸಿಸುವ ಪ್ರತಿ ಗ್ರಾಮದಲ್ಲೂ ಸಮುದಾಯ ಭವನ ನಿರ್ಮಾಣ ಮಾಡಬೇಕು. ಆ ಮೂಲಕ ಸಮುದಾಯವು ಸಾಂಘಿಕ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಸಮೀಪದ ವರ್ಚಗಲ್ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ನಿರ್ಮಿತ ಕೇಂದ್ರದಿಂದ ಅಂದಾಜು ₹೩೦ ಲಕ್ಷಗಳಲ್ಲಿ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಸಚಿವರು, ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲಾತಿ ಹೆಚ್ಚಿಸುವ ಮೂಲಕ ಸಾಮಾಜಿಕ ನ್ಯಾಯದೆಡೆಗೆ ಹೆಜ್ಜೆ ಹಾಕಿದೆ. ಈ ಸಮುದಾಯಗಳ ಶೈಕ್ಷಣಿಕ ಹಾಗೂ ಆರ್ಥಿಕಾಭಿವೃದ್ಧಿಗೆ ಪೂರಕವಾದ ಯೋಜನೆ ತರಲಾಗಿದೆ ಎಂದರು.

ವರ್ಚಗಲ್ ಗ್ರಾಮದಲ್ಲಿ ವಾಲ್ಮೀಕಿ ಜನರ ಬಳಕೆಗೆ ಸಮುದಾಯ ಭವನ ನಿರ್ಮಿಸಿದ್ದು ಸಂತೋಷದ ಸಂಗತಿ. ಗ್ರಾಮದ ವಿದ್ಯಾವಂತ ಸಮುದಾಯ ಅದನ್ನು ಜ್ಞಾನ ದೇಗುಲದಂತೆ ಬಳಸಿಕೊಳ್ಳಬೇಕು, ಸಾಮೂಹಿಕ ಕಾರ್ಯಕ್ರಮಗಳಿಗೂ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವರ್ಚಗಲ್ ಗ್ರಾಮದಲ್ಲಿ ₹೧೮ ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕೇಂದ್ರದ ನಿರ್ಮಾಣವನ್ನು ಇದೇ ವೇಳೆ ಉದ್ಘಾಟಿಸಿದ ಅವರು, ಇಂದಿನ ಕಾಲಘಟ್ಟದಲ್ಲಿ ಮಕ್ಕಳು ಮಾನವೀಯ ಬಾಂಧವ್ಯ ಕಡಿಮೆಗೊಳಿಸುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಸಮಾಜ ಗೌರವಿಸುವ ಗುಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದು ಸಮಾಜಕ್ಕೆ ಮಾರಕವಾಗುವ ದಿನಗಳು ದೂರವಿಲ್ಲ. ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳು ಎಚ್ಚೆತ್ತುಕೊಂಡು ಗುಣಾತ್ಮಕ ಸಂಸ್ಕಾರ ಕಲಿಸುವ ಕೇಂದ್ರಗಳಾಗಿ, ಭವಿಷ್ಯದ ದಿನದಲ್ಲಿ ಸಮಾಜ ಗಟ್ಟಿಗೊಳಿಸುವ ಮಕ್ಕಳನ್ನು ರೂಪಿಸುವ ಕೇಂದ್ರಗಳಾಗಿ ಮೂಡಿಬರಲಿ ಎಂದು ಆಶಿಸಿದರು.

ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ ಮಾತನಾಡಿ, ವಾಲ್ಮೀಕಿ ಸಮುದಾಯ ಸಾಂಸ್ಕೃತಿಕವಾಗಿ ತನ್ನದೇ ಆದ ಸ್ಥಾನ ಹೊಂದಿದೆ. ಅದಕ್ಕೆ ಮಹರ್ಷಿ ವಾಲ್ಮೀಕಿ ಕಾರಣ, ಅವರು ರಚಸಿದ ಮಹಾಕಾವ್ಯ ರಾಮಾಯಣ ಹಲವು ಶತಮಾನಗಳಿಂದ ನಿತ್ಯ ನೂತನವಾಗಿ ಜನರ ಬಾಯಲ್ಲಿ ನಲಿದಾಡುತ್ತಿದೆ. ಅದೊಂದು ಜೀವನ ಧರ್ಮವಾಗಿ ಉಳಿದಿದೆ. ರಾಮಾಯಣ ವಾಲ್ಮೀಕಿ ಸಮುದಾಯ ಬಹುದೊಡ್ಡ ಕೊಡುಗೆ ಎಂದು ಹೇಳಿದರು.

ಮುಖಂಡರಾದ ಬಿಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಗೋವಿಂದಪ್ಪ ಕೌಲಗಿ, ಲೋಕಣ್ಣಗೌಡ ವಿ.ಪಾಟೀಲ, ವಿಠ್ಠಲ ತುಳಸಿಗೇರಿ, ರಾಮನಗೌಡ ಪಾಟೀಲ, ಈರಪ್ಪ ಬಲ್ಕಿ, ವೆಂಕಪ್ಪ ಪೂಜಾರ, ಈರಣ್ಣ ಪೂಜಾರ, ಬಸಲಿಂಗಪ್ಪ ಕಟ್ಟಿ, ಬಸವರಾಜ ಹಣಗಲಿ, ಶ್ರೀಕಾಂತ ತುಳಸಿಗೇರಿ, ಲಂಕೇಶ ಮಾದರ, ಪುಂಡಲೀಕ ಮುತ್ತಣ್ಣವರ, ಯಂಕಣ್ಣ ಮುತ್ತಣ್ಣವರ, ಯಮನಪ್ಪ ಬುಡ್ರಿ, ಹಣಮಂತ ಮಾದರ, ತಹಸೀಲ್ದಾರ್‌ ಮಹಾದೇವ ಸನಮುರಿ, ತಾಲೂಕು ಮಟ್ಟದ ಅಧಿಕಾರಿಗಳಾದ ಇಒ ಉಮೇಶ ಸಿದ್ನಾಳ, ಮಹಹಮ್ಮದ ಹನಿಪ್ ತಹಸೀಲ್ದಾರ್, ಮಹೇಶ ದಂಡನ್ನವರ, ವಿಜಯಕುಮಾರ ಜಿ.ಕೆ., ವಿದ್ಯಾ ಕೋರೆವ್ವಗೋಳ, ಬಸವರಾಜ ಅಂಬಿಗೇರ, ರಾಘವೇಂದ್ರ ಕಳ್ಳಿಮನಿ, ವಿನೋದ ಸಂಕೆಣ್ಣವರ, ವರ್ಚಗಲ್ ಗ್ರಾಮಸ್ಥರು, ರೈತರು ಇದ್ದರು.