ಕನ್ನಡಪ್ರಭ ವಾರ್ತೆ ಕೋಲಾರ
ಕೋಲಾರ ಜಿಲ್ಲೆಯ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುವ ಪ್ರಸ್ತಾವಿತ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಎದುರಾಗಿರುವ ಎಲ್ಲಾ ತಾಂತ್ರಿಕ ಆಡಚಣೆಗಳನ್ನು ಅರಣ್ಯ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ತಕ್ಷಣವೇ ನಿವಾರಿಸಬೇಕು. ಎಲ್ಲಾ ಪೂರ್ವಭಾವಿ ಕಾರ್ಯಕಲಾಪಗಳನ್ನು ತ್ವರಿತವಾಗಿ ಮುಗಿಸಿ, ಆದಷ್ಟು ಬೇಗ ಕಾಲೇಜು ನಿರ್ಮಾಣ ಕಾರ್ಯಕ್ಕೆ ಮುಂದಡಿಯಿಡಬೇಕು ಎಂದು ಶಾಸಕ ಡಾ. ಕೊತ್ತೂರು ಜಿ.ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯ ಸಾರ್ವಜನಿಕರ ದಶಕಗಳ ದೀರ್ಘಕಾಲದ ಕನಸಾಗಿರುವ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಯೋಜನೆಯನ್ನು ಕಾಲಮಿತಿಯಲ್ಲಿ ಮುಗಿಸಲು ಯುದ್ಧೋಪಾದಿ ಸಿದ್ಧತೆಗಳನ್ನು ಕೈಗೊಳ್ಳಲು ಸೂಚಿಸಿದರು.
ಕೋಲಾರ ತಾೂಲೂಕಿನ ಗಾಜಲದಿನ್ನೆ ಸರ್ವೇ ನಂ.೧೨ ರಲ್ಲಿ ಲಭ್ಯವಿರುವ ೨೨ ಎಕರೆ ೩೬ ಗುಂಟೆ (೯.೦೪೮೧ ಹೆಕ್ಟೇರ್) ಜಮೀನಿನಲ್ಲಿ ಭವ್ಯ ವೈದ್ಯಕೀಯ ಕಾಲೇಜು, ೬೦೦ ಹಾಸಿಗೆಗಳ ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಆರೋಗ್ಯ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಜಾಗದಲ್ಲಿ ೧೯೫೫ ರಿಂದ ಕೆ.ಎನ್.ಟಿ.ಬಿ ಸ್ಯಾನಿಟೋರಿಯಂ ಕ್ಷಯ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿತ್ತು.ಪ್ರಸ್ತಾವಿತ ಭೂಮಿ ಪ್ರಸ್ತುತ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ, ಅದಕ್ಕೆ ಪರ್ಯಾಯವಾಗಿ ಸುಗಟೂರು ಹೋಬಳಿಯ ಮದನಹಳ್ಳಿ ಸರ್ವೇ ನಂ.೧೨೫ರಲ್ಲಿ ಅಷ್ಟೇ ಪ್ರಮಾಣದ ಕಂದಾಯ ಜಮೀನನ್ನು ಅರಣ್ಯ ಇಲಾಖೆಗೆ ಒದಗಿಸಲಾಗಿದೆ. ಕೇಂದ್ರ ಸರ್ಕಾರದ ಪರಿವೇಶ್ ಪೋರ್ಟಲ್ ಮೂಲಕ ಈಗಾಗಲೇ ಅರ್ಜಿ ಸಲ್ಲಿಸಲಾಗಿದ್ದು, ೨ನೇ ಹಂತದ ಅನುಮೋದನೆಗೆ ಇರುವ ಸಣ್ಣಪುಟ್ಟ ತಾಂತ್ರಿಕ ದೋಷಗಳನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಯೋಜನೆಯ ವೇಗವರ್ಧನೆಗೆ ಅಗತ್ಯವಿರುವ ಎಲ್ಲಾ ಸಾಂಸ್ಥಿಕ ಬೆಂಬಲ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗರ್, ಡಾ.ವೆಂಕಟರಾಘವನ್, ಡಿಹೆಚ್‌ಓ ಡಾ.ಶ್ರೀನಿವಾಸ್ ಇದ್ದರು.