ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಕೊಪ್ಪಳ ನಗರಸಭೆಯ ಪೌರಕಾರ್ಮಿಕರು ಕಸ ಎಸೆಯುವ ಜಾಗದಲ್ಲಿಯೇ ಕಿರುಉದ್ಯಾನ ನಿರ್ಮಿಸಿ, ನಾಗರಿಕರಿಗೆ ಪಾಠ ಮಾಡುತ್ತಿದ್ದಾರೆ.
ಕೊಪ್ಪಳ: ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಸ್ಥಳೀಯ ನಗರಸಭೆಯ ಪೌರಕಾರ್ಮಿಕರು ಕಸ ಎಸೆಯುವ ಜಾಗದಲ್ಲಿಯೇ ಕಿರುಉದ್ಯಾನ ನಿರ್ಮಿಸಿ, ನಾಗರಿಕರಿಗೆ ಪಾಠ ಮಾಡುತ್ತಿದ್ದಾರೆ.
ಹೌದು, ಎಲ್ಲೆಂದರಲ್ಲಿ ಕಸ ಎಸೆಯಬೇಡಿ ಎಂದು ನಿತ್ಯವೂ ಕಸ ಸಂಗ್ರಹಿಸುವ ವಾಹನದಲ್ಲಿ ಕಳಕಳಿಯಿಂದ ಮನವಿ ಮಾಡಿದ್ದು ಆಯಿತು. ಅಷ್ಟೇ ಅಲ್ಲ, ಕಸ ಎಸೆಯುವ ಸ್ಥಳದಲ್ಲಿಯೇ ನಿಂತು ಕೈಮುಗಿದು, ಇಲ್ಲಿ ಕಸ ಎಸೆಯಬೇಡಿ, ನಿಮ್ಮ ಮನೆಯ ಮುಂದೆ ಬರುವ ಕಸದ ವಾಹನದಲ್ಲಿಯೇ ಕಸ ಹಾಕಿ ಎಂದು ಪರಿಪರಿಯಾಗಿ ಬೇಡಿಕೊಂಡರು. ಅದರೂ ನಾಗರಿಕರು ಮಾತ್ರ ಕೇಳದೆ ಕಸ ಎಸೆಯುತ್ತಲೇ ಇದ್ದರು. ಇದನ್ನು ಮೀರಿ ಕಸ ಎಸೆಯದಂತೆ ಜಾಗೃತಿ ಮೂಡಿಸಲು ರಂಗೋಲಿಯನ್ನೂ ಹಾಕಿದರು. ಆದರೂ ಕೊಪ್ಪಳ ಕೆಲ ನಾಗರಿಕರಿಗೆ ಬುದ್ಧಿ ಬರಲಿಲ್ಲ.ಈಗ ನಗರಸಭೆಯ ಪೌರಕಾರ್ಮಿಕರು ಈಗ ಕಿರುಉದ್ಯಾನ ನಿರ್ಮಿಸುತ್ತಿದ್ದಾರೆ. ತ್ಯಾಜ್ಯ ವಸ್ತುಗಳನ್ನೇ ಬಳಕೆ ಮಾಡಿಕೊಂಡು ಕಿರು ಉದ್ಯಾನ ನಿರ್ಮಿಸಿ, ಅಲ್ಲಿ ಕಸ ಎಸೆಯದಂತೆ ಮಾಡಿದ್ದಾರೆ.
ನಗರದ ಟ್ರಿನಿಟಿ ಪಬ್ಲಿಕ್ ಶಾಲೆಯ ಬಳಿ, ಟಿಪ್ಪುಸುಲ್ತಾನ ಸರ್ಕಲ್ ಬಳಿ, ಅಂಚೆ ಕಚೇರಿ ಬಳಿ, ಜವಾಹರ ರಸ್ತೆಯಲ್ಲಿ ಹೀಗೆ ಎಲ್ಲೆಂದರಲ್ಲಿ ಕಸ ಎಸೆಯುವ ಜಾಗಗಳನ್ನು ಗುರುತು ಮಾಡಿ, ಪೌರಕಾರ್ಮಿಕರೇ ಕಿರು ಉದ್ಯಾನ ನಿರ್ಮಾಣ ಮಾಡಿದ್ದಾರೆ.ಇದೊಂದು ಹೊಸ ಪ್ರಯತ್ನವಾಗಿದ್ದು, ಭಾರಿ ಪ್ರಸಂಶೆ ವ್ಯಕ್ತವಾಗುತ್ತಿದೆ.
ಪೌರಕಾರ್ಮಿಕರ ಕಾರ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಡಿಹೊಗಳಲಾಗುತ್ತಿದೆ. ಇನ್ನಾದರೂ ಕಸ ಎಸೆಯುವ ಭೂಪರಿಗೆ ಬುದ್ಧಿ ಬರಲಿ ಎಂದು ಕುಟುಕುತ್ತಿದ್ದಾರೆ.ಮನೆಯ ಮುಂದೆಯೇ ಕಸದ ವಾಹನ ಬಂದರೂ ಅದರಲ್ಲಿ ಕಸ ಎಸೆಯದೇ ಈ ರೀತಿ ಅನಾಗರಿಕ ವರ್ತನೆ ನಿಲ್ಲಿಸಲು ಪೌರಕಾರ್ಮಿಕರು ಕೈಗೊಂಡಿರುವ ಕಾರ್ಯ ಮೆಚ್ಚುಗೆಗೆ ಪಾತ್ರವಾಗುತ್ತಿದೆ.ಹೇಳಿ ಹೇಳಿ ಸಾಕಾಗಿದ್ದರಿಂದ ಈಗ ಕಸ ಎಸೆಯುವ ಸ್ಥಳಗಳನ್ನು ಗುರುತಿಸಿ, ಅಲ್ಲಿಯೇ ಕಿರು ಉದ್ಯಾನ ನಿರ್ಮಾಣ ಮಾಡಿದ್ದೇವೆ ಎಂದು ಪೌರಕಾರ್ಮಿಕರ ಮುಖ್ಯಸ್ಥ ಲಾಲಸಾಬ ಹೇಳಿದರು.