ಗ್ರಾಮೀಣ ಮಕ್ಕಳ ಆತ್ಮವಿಶ್ವಾಸ ಮೂಡಿಸಿ: ಜಿಲ್ಲಾಧಿಕಾರಿ ದಿವ್ಯಪ್ರಭು

| Published : Feb 15 2025, 12:33 AM IST

ಗ್ರಾಮೀಣ ಮಕ್ಕಳ ಆತ್ಮವಿಶ್ವಾಸ ಮೂಡಿಸಿ: ಜಿಲ್ಲಾಧಿಕಾರಿ ದಿವ್ಯಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ನಗರಕ್ಕಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಜಾಣರಿದ್ದರೂ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಅವರಿಗೆ ಬರೀ ಪಾಠ-ಪ್ರವಚನ ಮಾತ್ರವಲ್ಲದೇ ಆತ್ಮವಿಶ್ವಾಸ ಮೂಡಿಸುವ ಕಲಿಕೆ ಸಹ ಹೇಳಿ ಕೊಡಬೇಕು.

ಧಾರವಾಡ:

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಈ ಬಾರಿ ಧಾರವಾಡ ಜಿಲ್ಲೆಯು ಒಂದಂಕಿ ಸ್ಥಾನ ಪಡೆಯಬೇಕು ಎಂದು ಹಠ ತೊಟ್ಟಿರುವ ಜಿಲ್ಲಾಧಿಕಾರಿ ದಿವ್ಯಪ್ರಭು, ಈಗಾಗಲೇ ಆರಂಭಿಸಿರುವ ಮಿಶನ್‌ ವಿದ್ಯಾಕಾಶಿಗೆ ಪೂರಕವಾಗಿ ಶುಕ್ರವಾರ ತಾಲೂಕಿನ ಉಪ್ಪಿನ ಬೆಟಗೇರಿ, ಯಾದವಾಡ ಹಾಗೂ ಲಕಮಾಪೂರ ಶಾಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಭೇಟಿ ನೀಡಿ ಮಾರ್ಗದರ್ಶನ ಮಾಡಿದರು.

ನಗರಕ್ಕಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಜಾಣರಿದ್ದರೂ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಅವರಿಗೆ ಬರೀ ಪಾಠ-ಪ್ರವಚನ ಮಾತ್ರವಲ್ಲದೇ ಆತ್ಮವಿಶ್ವಾಸ ಮೂಡಿಸುವ ಕಲಿಕೆ ಸಹ ಹೇಳಿ ಕೊಡಬೇಕು ಎಂದರು. ಈ ವೇಳೆ ಅನೇಕ ಮಕ್ಕಳು ತಮಗಿರುವ ಸಂದೇಹಗಳನ್ನು ಡಿಸಿ ಅವರಿಗೆ ಕೇಳಿ ಬಗೆಹರಿಸಿಕೊಂಡರು. ಪರೀಕ್ಷೆ ಹೇಗೆ ಎದುರಿಸಬೇಕು? ಅದಕ್ಕೆ ತಯಾರಿ ಹೇಗೆ? ಎಂಬ ವಿಷಯಗಳನ್ನು ತಿಳಿಸಿದರು.

ಜೀವನದಲ್ಲಿ ಉನ್ನತ ಗುರಿ ಇರಬೇಕು. ಪ್ರತಿದಿನ ವೇಳಾಪಟ್ಟಿ ಅನುಸಾರ ಅಭ್ಯಾಸ ಮಾಡಬೇಕು. ಕಠಿಣ ಎನಿಸುವ ವಿಷಯ ಮೊದಲು ಓದಬೇಕು. ಒತ್ತಡಕ್ಕೆ, ಉದ್ವೇಗಕ್ಕೆ ಒಳಗಾಗದೇ ಪರೀಕ್ಷೆ ಬರೆಯಬೇಕು. ಅದಕ್ಕಾಗಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ರೂಢಿ ಪರೀಕ್ಷೆ ಬರೆಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯ ದೂರವಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಬಿಸಿಯೂಟ ಸವಿದ ಡಿಸಿ:

ಮಧ್ಯಾಹ್ನ ಯಾದವಾಡದ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರೊಂದಿಗೆ ನೆಲದಲ್ಲಿ ಕುಳಿತು ಬಿಸಿಯೂಟ ಸವಿದರು. ಅನ್ನ, ಬಿಸಿ ಬೇಳೆಬಾತು, ಸಜಕ, ಚಿಕ್ಕಿ, ತತ್ತಿ, ಹಸಿರು ತರಕಾರಿ, ಮಜ್ಜಿಗೆ ಸವಿದರು. ನಿತ್ಯ ಎಷ್ಟು ಸಮಯಕ್ಕೆ ಏನೆಲ್ಲ ಊಟ ಕೊಡುತ್ತಾರೆ? ಊಟದ ಗುಣಮಟ್ಟವನ್ನು ಊಟ ಮಾಡುತ್ತಲೇ ವಿದ್ಯಾರ್ಥಿಗಳಿಂದ ತಿಳಿದುಕೊಂಡರು. ತದನಂತರ ಶಾಲೆಯ ಶೌಚಾಲಯ ಸ್ವಚ್ಛತೆ, ಕೊಠಡಿ ವೀಕ್ಷಿಸಿದರು.

ಯಾದವಾಡದಲ್ಲಿ ಪಿಯು ಕಾಲೇಜಿಗೆ ಮನವಿ:

ಇದೇ ವೇಳೆ ಮುಳಮುತ್ತಲ ಹಾಗೂ ಲಕಮಾಪೂರ ಗ್ರಾಮಗಳಿಂದ ಯಾದವಾಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕಲಿಯಲು ಬರುತ್ತಿದ್ದು, ಎಸ್ಸೆಸ್ಸೆಲ್ಸಿ ನಂತರ ಪಿಯುಸಿಗೆ ಕಾಲೇಜು ಆರಂಭಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಇದಕ್ಕೂ ಮುಂಚೆ ಗ್ರಾಪಂಗೆ ಭೇಟಿ ನೀಡಿದ ಸಮಯದಲ್ಲಿ ತೋಟಗಾರಿಕೆ ಬೆಳೆ ವಿಮೆ ಬಗ್ಗೆ ರೈತರೊಬ್ಬರ ಪ್ರಶ್ನೆಗೆ, ಈ ಕುರಿತು ಪರಿಶೀಲಿಸಿ ವಿಮೆ ನೀಡುವ ಭರವಸೆ ನೀಡಿದರು.

ಪಾಲಕರಿಗೆ ಸಲಹೆ:

ಪರೀಕ್ಷೆ ಹತ್ತಿರ ಬಂದಿದ್ದು, ವಿದ್ಯಾರ್ಥಿಗಳಿಗೆ ಮನೆಯಲ್ಲಿ ಓದುವ ವಾತಾವರಣ ಕಲ್ಪಿಸಬೇಕು. ಟಿವಿ, ಮೊಬೈಲ್‌ಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕು. ಪಾಲಕರೂ ಸಹ ಮನೆಯಲ್ಲಿ ಟಿವಿ, ಮೊಬೈಲ್‌ ಅಗತ್ಯವಿರುವಷ್ಟು ಮಾತ್ರ ಬಳಸಿ, ಮಕ್ಕಳ ಓದಿನ ಕಡೆಗೆ ಗಮನ ಹರಿಸಬೇಕು ಎಂದು ಪಾಲಕರಿಗೆ ಜಿಲ್ಲಾಧಿಕಾರಿ ಸಲಹೆ ನೀಡಿದರು.

ಈ ವೇಳೆ ತಹಸೀಲ್ದಾರ್‌ ಡಾ. ಡಿ.ಎಚ್. ಹೂಗಾರ, ಆರೋಗ್ಯಾಧಿಕಾರಿ ಡಾ. ಕೆ.ಎನ್. ತನುಜಾ, ಸಹಾಯಕ ಕೃಷಿ ನಿರ್ದೇಶಕ ಅಣಗೌಡರ, ಬಿಇಒ ರಾಮಕೃಷ್ಣ ಸದಲಗಿ, ಶಿಕ್ಷಣ ಸಂಯೋಜಕರಾದ ಬಸವರಾಜ ಛಬ್ಬಿ, ಶ್ರೀಕಾಂತ ಗೌಡರ, ಶಿಕ್ಷಕರಾದ ನಾರಾಯಣ ಪತ್ತಾರ, ಉಮಾಕಾಂತ ಕರ್ಚಕಟ್ಟಿ, ಬಿ.ಬಿ. ದುಬ್ಬನಮರಡಿ, ಎ.ಎ. ಮುಲ್ಲಾ, ಎಂ.ಜೆ. ಹಳವೂರ, ಯಾಕೂಬ್‌ ಜೋರಮನ್ನವರ, ಉಪ್ಪಿನಬೇಟಗೇರಿ ಗ್ರಾಪಂ ಅಧ್ಯಕ್ಷ ಬಸೀರ ಮಾಳಗಿಮನಿ ಹಾಗೂ ಯಾದವಾಡ ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ಗಳಗಿ, ಸದಸ್ಯರಾದ ಪಾರ್ವತಿ ಹಿರೇಮಠ, ಮಡಿವಾಳಪ್ಪ ದಿಂಡಲಕೊಪ್ಪ, ಎಸ್‌ಡಿಎಂ ಅಧ್ಯಕ್ಷ ಹನುಮಂತಪ್ಪ ದೊಡಮನಿ, ರಾಚಯ್ಯ ಹಳ್ಳಿಗೇರಿಮಠ, ಶೇಖಣ್ಣ ಕುಂಬಾರ, ಈರಪ್ಪ ಮಾನಪ್ಪನವರ, ಸುರೇಶ ತೋಟಗೇರ ಇದ್ದರು. ಎರಡೂ ಗ್ರಾಮಗಳಲ್ಲಿ ಜಿಲ್ಲಾಧಿಕಾರಿಯನ್ನು ಸನ್ಮಾನಿಸಲಾಯಿತು.ನನ್ನಂತೆ ಡಿಸಿ ಆಗಿ...

ಮಕ್ಕಳು ಕಷ್ಟಪಟ್ಟು ಪ್ರಾಮಾಣಿಕತೆಯಿಂದ ನಿರಂತರವಾಗಿ ಓದಿ, ತಮ್ಮಂತೆ ಜಿಲ್ಲಾಧಿಕಾರಿ ಆಗಬೇಕು. ಐಎಎಸ್, ಐಪಿಎಸ್ ಹುದ್ದೆಗಳಿಗೆ ಆಯ್ಕೆ ಆಗಬೇಕು. ಅಂತಹ ಕನಸು, ಛಲ ಈಗಿನಿಂದಲೇ ಬೆಳೆಸಿಕೊಳ್ಳಬೇಕು. ತಾವು ಸಹ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ರ‍್ಯಾಂಕ್ ಬಂದಿದ್ದೆ. ನಂತರ ಡಿಸಿ ಆಗಿರುವೆ. ನೀವು ರಾಜ್ಯಕ್ಕೆ ಉತ್ತಮ ರ‍್ಯಾಂಕ್ ಪಡೆದು, ಒಳ್ಳೆಯ ಅಧಿಕಾರಿ ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಹುರಿದುಂಬಿಸಿದರು.