ಕಟ್ಟಿಗೆ ಕಿಟಕಿ, ಬಾಗಿಲುಗಳು ಜನಮಾನಸದಿಂದ ಸರಿದಿದ್ದು, ಯುಪಿಯುಸಿ, ಅಲ್ಯುಮಿನಿಯಂ ಸ್ಟೀಲ್‌ ಕಿಟಕಿಗಳು ಹಾಗೂ ಬಾಗಿಲುಗಳಿವೆ. ವೆಟ್ರಿಫೈಯ್ಡ್‌ ಟೈಲ್ಸ್‌ನಲ್ಲಿ ಪೋಲ್ಡೇಬಲ್‌ ಬಂದಿವೆ. ಮನೆ ನಿರ್ಮಾಣವಾಗದೇ ತಾವು ಕಟ್ಟುವ ಮನೆಯಲ್ಲಿ ಸಂಪೂರ್ಣ ಸಂಚಾರ ಮಾಡಿ ಮನೆ ಹೇಗಿರುತ್ತದೆ ಎಂದು 3ಡಿ ಡಿಸೈನ್‌ ಮೂಲಕ ಅನುಭವ ಪಡೆಯುವ ತಂತ್ರಜ್ಞಾನದ ಪರಿಚಯ ಇಲ್ಲಾಗುತ್ತದೆ.

ಧಾರವಾಡ:

ಪ್ರತಿಯೊಬ್ಬರಲ್ಲೂ ಕನಸಿನ ಮನೆ ನಿರ್ಮಾಣ ಮಾಡುವುದು ಜೀವನದ ಗುರಿಯಾಗಿರುತ್ತದೆ. ಆದರೆ, ಮನೆ ಕಟ್ಟಿ ನೋಡು ಎಂಬ ಗಾದೆಯಂತೆ ಮನೆ ನಿರ್ಮಾಣ ಈಗಿನ ಸಂದರ್ಭದಲ್ಲಿ ಸುಲಭದ ಮಾತಲ್ಲ. ಈ ಹಿನ್ನೆಲೆಯಲ್ಲಿ ಧಾರವಾಡದ ಅಸೋಸಿಯೇಶನ್‌ ಆಫ್‌ ಕನ್ಸಲ್ಟಿಂಗ್‌ ಎಂಜಿನಿಯರ್‌ ಮನೆ ನಿರ್ಮಿಸುತ್ತಿರುವವರಿಗೆ, ನಿರ್ಮಿಸಲು ಯೋಚಿಸುತ್ತಿರುವವರಿಗೆ ಹಾಗೂ ಮನೆಗಳ ನವೀಕರಣ ಮಾಡುತ್ತಿರುವವರಿಗೂ ಪರಿಹಾರವಾಗಿ ಬಿಲ್ಡ್‌ ಎಕ್ಸ್‌ ಪೋ ಶುರು ಮಾಡಿದ್ದಾರೆ.

ಇಲ್ಲಿಯ ಕರ್ನಾಟಕ ವಿಜ್ಞಾನ ಕಾಲೇಜು ಆವರಣದಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಈ ಕಟ್ಟಡದ ಮೇಳಕ್ಕೆ ಭಾನುವಾರ ತೆರೆ ಬೀಳಲಿದ್ದು, ಈಗಾಗಲೇ ಎರಡು ದಿನಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿ ಮನೆ ಬಗೆಗೆ ತಮಗಿರುವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡಿದ್ದಾರೆ. ಈ ಮೇಳದಲ್ಲಿ ಮನೆಗೆ ಬಳಸುವ ಸಾಮಾನ್ಯ ವಸ್ತುಗಳ ಮಳಿಗೆಗಳಲ್ಲದೇ ಹೊಸ ತಂತ್ರಜ್ಞಾನ, ಪರಿಸರ ಸ್ನೇಹಿ, ಕಡಿಮೆ ವೆಚ್ಚದ ಸ್ಮಾರ್ಟ್‌ ವಸ್ತುಗಳು ಗ್ರಾಹಕರ ಗಮನ ಸೆಳೆಯುತ್ತಿವೆ.

ಕಟ್ಟಿಗೆ ಕಿಟಕಿ, ಬಾಗಿಲುಗಳು ಜನಮಾನಸದಿಂದ ಸರಿದಿದ್ದು, ಯುಪಿಯುಸಿ, ಅಲ್ಯುಮಿನಿಯಂ ಸ್ಟೀಲ್‌ ಕಿಟಕಿಗಳು ಹಾಗೂ ಬಾಗಿಲುಗಳಿವೆ. ವೆಟ್ರಿಫೈಯ್ಡ್‌ ಟೈಲ್ಸ್‌ನಲ್ಲಿ ಪೋಲ್ಡೇಬಲ್‌ ಬಂದಿವೆ. ಮನೆ ನಿರ್ಮಾಣವಾಗದೇ ತಾವು ಕಟ್ಟುವ ಮನೆಯಲ್ಲಿ ಸಂಪೂರ್ಣ ಸಂಚಾರ ಮಾಡಿ ಮನೆ ಹೇಗಿರುತ್ತದೆ ಎಂದು 3ಡಿ ಡಿಸೈನ್‌ ಮೂಲಕ ಅನುಭವ ಪಡೆಯುವ ತಂತ್ರಜ್ಞಾನದ ಪರಿಚಯ ಇಲ್ಲಾಗುತ್ತದೆ. ಮನೆಯ ಇಂಟೀರಿಯರ್‌ ಡಿಸೈನ್‌ಗೆ ಬೇಕಾದ ಎಲ್ಲ ಸಲಹೆ, ವಸ್ತುಗಳು ಲಭ್ಯ. ಸೋಲಾರ್‌ದಲ್ಲಿ ಇತ್ತೀಚೆಗೆ ಹೊಸ ತಂತ್ರಜ್ಞಾನ ಬಂದಿದ್ದು, ಬಿಸಿಲು ಕಡಿಮೆ ಇದ್ದರೂ ಬರೀ ಬಿಸಿ ಗಾಳಿ ಮೂಲಕ ನೀರು ಕಾಯಿಸುವ ತಂತ್ರಜ್ಞಾನ, ಕಡಿಮೆ ತೂಕದ ಇಟ್ಟಿಗೆ, ಎಎಸಿ ಬ್ಲಾಕ್ಸ್‌ (ಎರಿಯೇಟೆಡ್‌ ಆಟೋ ಕ್ಲೇವ್‌), ಗ್ಲಾಸ್‌ ರೀಲಿಂಗ್ಸ್‌, ಇನವಿಸಿಬಲ್‌ ಸೇಪ್ಟಿ ಗ್ರಿಲ್ಸ್‌, ಸನ್‌ರೂಪ್‌ ಲೈಟ್‌, ಲ್ಯಾಂಡ್‌ ಸರ್ವೆ ಇಕ್ಯೂಪಮೆಂಟ್‌ ಸೇರಿದಂತೆ ಒಟ್ಟಾರೆ ಕಟ್ಟಡ ನಿರ್ಮಾಣದ ವಿಚಾರವಾಗಿ ಎಲ್ಲ ರೀತಿಯ ಸಮಸ್ಯೆಗಳಿಗೆ ಇಲ್ಲಿ ಪರಿಹಾರವಿದೆ.

ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಂಪರ್ಕ ಕೊಂಡಿಯಾಗಿ ಬಿಲ್ಡ್‌ ಎಕ್ಸ್‌ಪೋ ಕಾರ್ಯ ಮಾಡುತ್ತಿದೆ. ಪರಿಸರ ಸ್ನೇಹಿ, ನೂತನ ತಂತ್ರಜ್ಞಾನದ ವಸ್ತುಗಳನ್ನು ಉತ್ತೇಜಿಸುತ್ತಿದೆ. ಬರೀ ಹು-ಧಾ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಎಂಜಿನಿಯರ್‌ ಹಾಗೂ ಸಾರ್ವಜನಿಕರು ಆಗಮಿಸುತ್ತಿರುವುದು ಸಾರ್ಥಕ ಎನಿಸಿದೆ.

ಅಜಿತ ಕರೋಗಲ್‌, ಎಕ್ಸ್‌ಪೋ ಚೇರಮನ್‌

ಪ್ರತಿ ಎರಡು ವರ್ಷಕ್ಕೊಮ್ಮೆ ಬಿಲ್ಡ್‌ ಎಕ್ಸ್‌ಪೋ ನಡೆಯುತ್ತಿದ್ದು ಈ ಬಾರಿ 60ಕ್ಕೂ ಹೆಚ್ಚು ಉದ್ದಿಮೆದಾರರು ಮಳಿಗೆ ಹಾಕಿದ್ದು, ಹು-ಧಾ ಅವಳಿ ನಗರ ಎಂಜಿನಿಯರ್‌ ಸೇರಿ ಸಾರ್ವಜನಿಕರು ಅಭೂತಪೂರ್ವ ಸ್ಪಂದನೆ ನೀಡಿದ್ದು, ಭಾನುವಾರ ಕೊನೆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು.

ಸುನೀಲ ಬಾಗೇವಾಡಿ, ಅಸೋಸಿಯೇಶನ್‌ ಅಧ್ಯಕ್ಷ

ಕೈಪಿಡಿ ಬಿಡುಗಡೆ...

ಮೊದಲ ದಿನ ಈ ಮೇಳಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದ್ದು, ಅದೇ ದಿನ ಸಂಜೆ ಮಾಹಿತಿ ಕೈಪಿಡಿಯನ್ನು ಮಾಜಿ ಮೇಯರ್‌ ಈರೇಶ ಅಂಚಟಗೇರಿ ಬಿಡುಗಡೆ ಮಾಡಿದರು. ಕಟ್ಟಡ ವಸ್ತುಗಳು ಮಾತ್ರವಲ್ಲದೇ ನಿರ್ಮಾಣ ತಂತ್ರಜ್ಞಾನಗಳು, ಪರಿಸರ ಸ್ನೇಹಿ ಉತ್ಪನ್ನಗಳು ಮತ್ತು ನವೀಕೃತ ಸಾಧನಗಳು ಮತ್ತು ಇತರ ಸೇವೆಗಳ ಕುರಿತು ಉಪಯುಕ್ತ ಮಾಹಿತಿ ಒದಗಿಸಲು ಕೈಪಿಡಿ ಸಹಕಾರಿ ಎಂದರು. ಅಂಜುಮನ್‌ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ, ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಎಸ್. ಸಾಳುಂಕೆ ಇದ್ದರು. ಶನಿವಾರ ವಿಪ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ ಸಹ ಎಕ್ಸ್‌ಪೋ ಮೇಳದಲ್ಲಿ ಭಾಗವಹಿಸಿ ವೀಕ್ಷಿಸಿದರು. ಇನ್ನು, ಎಕ್ಸ್‌ಪೋದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಜನರನ್ನು ಆಕರ್ಷಿಸುತ್ತಿವೆ.