ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ಸಿಲಿಂಡರ್ ಸೋರಿಕೆಯಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ 9 ಜನ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗಾಯಗೊಂಡು ಇಬ್ಬರು ಮೃತಪಟ್ಟಿರುವ ಘಟನೆ ಬೆನ್ನಲ್ಲೇ ಇದೀಗ ಎಲ್ಲ ಜಿಲ್ಲೆಗಳಲ್ಲಿ "ಹಜ್ ಭವನ " ಮಾದರಿಯಲ್ಲೇ "ಅಯ್ಯಪ್ಪ ಭವನ " ನಿರ್ಮಿಸಿ ಎಂಬ ಕೂಗು ಕೇಳಿ ಬಂದಿದೆ.
ಅಯ್ಯಪ್ಪ ಮಾಲಾಧಾರಿಗಳ ವ್ರತ ಅತ್ಯಂತ ಕಠಿಣ. ಮನೆಯಲ್ಲೇ ಇರಬಾರದು. ಮಾಲಾಧಾರಿಗಳೆಲ್ಲ ಸೇರಿಕೊಂಡು ಸನ್ನಿದಾನ ಮಾಡಿಕೊಂಡು ಬೆಳಗಿನಜಾವ 4ಗಂಟೆಗೆ ಎದ್ದು ಪೂಜೆ, ಪುನಸ್ಕಾರ ಮಾಡುವುದು. ಶರಣು ಕೂಗುವುದು. ತಮ್ಮ ಅಡುಗೆ ತಾವೇ ಮಾಡಿಕೊಂಡು ಪ್ರಸಾದ ಸೇವಿಸುವುದು. ಹೀಗೆ ಅಕ್ಷರಶಃ ವ್ರತ ಕಠಿಣವಾಗಿ ಆಚರಿಸುತ್ತಾರೆ. ಅವರವರ ಶಕ್ತಾನುಸಾರ ಅಯ್ಯಪ್ಪ ಸನ್ನಿಧಾನ ಮಾಡಿಕೊಂಡು ವಾಸವಾಗಿರುತ್ತಾರೆ. ಕೆಲವರು ಬಾಡಿಗೆ ಮನೆ ಹಿಡಿದರೆ, ಕೆಲವರು ಯಾವುದಾದರೂ ದೇವಸ್ಥಾನಗಳಲ್ಲಿ ಸನ್ನಿಧಾನ ಮಾಡಿಕೊಂಡಿರುತ್ತಾರೆ. ಸನ್ನಿಧಾನಗಳಲ್ಲೇ ಬರೋಬ್ಬರಿ 48 ದಿನ ವಾಸ್ತವ್ಯ ಹೂಡಿರುತ್ತಾರೆ. ಕೆಲವರು ಕಡಿಮೆ ದಿನದ್ದು ಮಾಡಿರುತ್ತಾರೆ. ಬಡವ ಬಲ್ಲಿದ, ಸಿರಿವಂತ ಎಂಬ ಭೇದ ಭಾವ ಇಲ್ಲಿ ಇರುವುದಿಲ್ಲ. ಸನ್ನಿದಾನದಲ್ಲೂ ಎಷ್ಟೇ ಸ್ಥಿತಿವಂಥರಾದರೂ ಎಲ್ಲರೂ ಸೇರಿಯೇ ಇರುತ್ತಾರೆ. ಸನ್ನಿಧಾನದಲ್ಲೇ ಅಡುಗೆ, ಪೂಜೆ ಮಾಡುವುದರಿಂದ ಅಪಾಯ ಕೂಡ ಹೆಚ್ಚಾಗಿದೆ ಎಂಬುದಕ್ಕೇ ಹುಬ್ಬಳ್ಳಿಯ ಸಾಯಿನಗರದಲ್ಲಿನ ಈಶ್ವರ ದೇವಸ್ಥಾನದಲ್ಲಿ ನಡೆದ ಅಗ್ನಿ ಅವಘಡವೇ ಸಾಕ್ಷಿಯಾಗಿದೆ.ಏನ್ಮಾಡಬೇಕು?
ದೇವರನ್ನು ಪೂಜಿಸುವುದು ವ್ರತ ಮಾಡುವುದೆಲ್ಲವೂ ಅವರವರ ಭಾವನೆ, ಭಕ್ತಿಗೆ ಸಂಬಂಧಿಸಿದ್ದು. ಆದರೆ, ಭಕ್ತರಿಗೆ ಸಾಧ್ಯವಾದಂತಹ ನೆರವು ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ ಕೂಡ ಆಗಿದೆ. ಅದಕ್ಕಾಗಿ ಹಜ್ ಯಾತ್ರೆಗೆ ತೆರಳುವ ಮುಸ್ಲಿಂ ಸಮಾಜ ಬಾಂಧವರಿಗೆ ಅನುಕೂಲವಾಗಲು ಹಜ್ ಭವನ ತೆರೆಯಲಾಗಿದೆ. ಅದೇ ರೀತಿ ರಾಜ್ಯಾದ್ಯಂತ ಸಾಧ್ಯವಾದಷ್ಟು ಅಯ್ಯಪ್ಪ ಭವನ ನಿರ್ಮಿಸಬೇಕು. ಅದರಲ್ಲಿ ಶೌಚಾಲಯ, ಅಡುಗೆ ಮನೆ (ಕಲ್ಯಾಣ ಮಂಟಪದಂತೆ) ಮಾಡುವುದು ಸೂಕ್ತ. ಆ ಊರಿನ ಅಯ್ಯಪ್ಪ ಮಾಲಾಧಾರಿಗಳು ಅಲ್ಲೇ ಸನ್ನಿಧಾನ ಮಾಡಿಕೊಂಡು ವಾಸವಾಗಿರಬಹುದು. ಮಾಲಾಧಾರಿಗಳು ಇಲ್ಲದ ವೇಳೆ ಅದನ್ನು ಬೇರೆ ಬೇರೆ ಕಾರ್ಯಕ್ರಮಗಳಿಗೆ ಬಾಡಿಗೆಗೂ ಕೊಡಬಹುದು. ಇದರಿಂದ ಆ ಸ್ಥಳೀಯ ಸಂಸ್ಥೆಗಳ ಆದಾಯ ಸಂಪನ್ಮೂಲ ಕೇಂದ್ರ ಕೂಡ ಆಗುತ್ತವೆ. ಎಲ್ಲೆಲ್ಲೂ ಖರ್ಚು ಮಾಡುವ ಸರ್ಕಾರ ಇಂಥ ಅಯ್ಯಪ್ಪ ಸ್ವಾಮಿ ಭವನ ನಿರ್ಮಿಸಲು ಅನುದಾನ ಖರ್ಚು ಮಾಡಿದರೆ ಮಾಲಾಧಾರಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.ಇಲ್ಲದಿದ್ದಲ್ಲಿ ಎಲ್ಲ ಊರು, ಗಲ್ಲಿ-ಗಲ್ಲಿಗಳಲ್ಲಿ ಬೇರೆ ಬೇರೆ ಸಮುದಾಯಗಳಿಗೆ ಸಂಬಂಧಪಟ್ಟಂತೆ ಭವನಗಳನ್ನು ಸರ್ಕಾರಗಳೇ ಕಟ್ಟಿಸಿವೆ. ಆ ಭವನಗಳನ್ನು ಆಯಾ ಸ್ಥಳೀಯ ಸಂಸ್ಥೆಗಳೇ ನಿರ್ವಹಿಸುತ್ತವೆ. ಇಂಥ ಭವನಗಳನ್ನಾದರೂ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ವ್ರತಾಚರಣೆ ವೇಳೆ ನೀಡಬೇಕು. ಇದರಿಂದಾಗಿ ಅಗ್ನಿ ಅವಘಡ ಸೇರಿದಂತೆ ಯಾವುದೇ ಬಗೆಯ ಸಮಸ್ಯೆ ಎದುರಾಗುವುದಿಲ್ಲ. ಜತೆಗೆ ಎಲ್ಲ ಮಾಲಾಧಾರಿಗಳು ಒಂದೇ ಸ್ಥಳದಲ್ಲೇ ಇರುವುದರಿಂದ ಆ ಭವನಕ್ಕೂ ಒಂದು ರೀತಿ ಕಳೆ ಬರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕು. ಇನ್ನು ಇದೀಗ ಗಾಯಾಳುಗಳ ಚಿಕಿತ್ಸೆಗೆ ಹೆಚ್ಚಿನ ಮುತುವರ್ಜಿ ವಹಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಯೋಚಿಸಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂಬುದು ಮಾಲಾಧಾರಿಗಳ ಒಕ್ಕೊರಲಿನ ಆಗ್ರಹ.ಎಲ್ಲ ಜಿಲ್ಲೆಗಳಲ್ಲೂ ಅಯ್ಯಪ್ಪ ಭವನ ನಿರ್ಮಿಸಬೇಕು. ಅಂದಾಗ ಮಾತ್ರ ಅಗ್ನಿ ಅವಘಡ ಸೇರಿದಂತೆ ಯಾವುದೇ ಅಹಿತಕರ ಘಟನೆ ಆಗುವುದನ್ನು ತಡೆಗಟ್ಟಬಹುದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಿ ಕ್ರಮ ಕೈಗೊಳ್ಳಬೇಕು ಎಂದು 18 ವರ್ಷದಿಂದ ಮಾಲೆ ಧರಿಸುತ್ತಿರುವ ರಮೇಶ ಪಾಟೀಲ ಹೇಳಿದರು.
;Resize=(128,128))
;Resize=(128,128))
;Resize=(128,128))