ಮುಂದಿನ 25 ವರ್ಷಗಳಲ್ಲಿ ಮಹಾನ್ ಕರ್ನಾಟಕ ನಿರ್ಮಿಸಬೇಕು: ಗೆಹಲೋತ್‌

| Published : Dec 13 2023, 01:00 AM IST

ಮುಂದಿನ 25 ವರ್ಷಗಳಲ್ಲಿ ಮಹಾನ್ ಕರ್ನಾಟಕ ನಿರ್ಮಿಸಬೇಕು: ಗೆಹಲೋತ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳಾದ ಸಂದರ್ಭದಲ್ಲಿ ಸುವರ್ಣಸೌಧದ ಮುಂಭಾಗದಲ್ಲಿ ಕರ್ನಾಟಕ ವಿಧಾನ ಮಂಡಲದಿಂದ ಆಯೋಜಿಸಿದ್ದ ಸುವರ್ಣ ಸಂಭ್ರಮಾಚರಣೆ ಹಾಗೂ ಕರ್ನಾಟಕ ವಿಧಾನ ಮಂಡಲದ ಮಾಜಿ ಸಭಾಪತಿ ಹಾಗೂ ಸಭಾಧ್ಯಕ್ಷರ ಸನ್ಮಾನ ಸಮಾರಂಭ

ಕನ್ನಡಪ್ರಭ ವಾರ್ತೆ ಬೆಳಗಾವಿಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ರಾಜ್ಯವು ಪ್ರತಿ ಕ್ಷೇತ್ರದಲ್ಲಿ ಅಭಿವೃದ್ಧಿಯ ದಾಪುಗಾಲು ಹಾಕುತ್ತಿದೆ. ದೇಶದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ 2ನೇ ರಾಜ್ಯ ಕರ್ನಾಟಕ. ಮುಂಬರುವ 25 ವರ್ಷಗಳ ಅವಧಿಯಲ್ಲಿ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಸ್ಪಷ್ಟ ದಿಕ್ಸೂಚಿಯನ್ನು ರಾಜ್ಯ ಹಾಕಿಕೊಂಡು ಮಹಾನ್ ಕರ್ನಾಟಕ, ಮಹಾನ್ ಭಾರತ ನಿರ್ಮಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಲಹೆ ನೀಡಿದರು.ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳಾದ ಸಂದರ್ಭದಲ್ಲಿ ಸುವರ್ಣಸೌಧದ ಮುಂಭಾಗದಲ್ಲಿ ಕರ್ನಾಟಕ ವಿಧಾನ ಮಂಡಲದಿಂದ ಆಯೋಜಿಸಿದ್ದ ಸುವರ್ಣ ಸಂಭ್ರಮಾಚರಣೆ ಹಾಗೂ ಕರ್ನಾಟಕ ವಿಧಾನ ಮಂಡಲದ ಮಾಜಿ ಸಭಾಪತಿ ಹಾಗೂ ಸಭಾಧ್ಯಕ್ಷರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಂಗೀತ, ಕಲೆ, ಸಾಂಸ್ಕೃತಿಕ ಕ್ಷೇತ್ರಕ್ಕೆ ಈ ನಾಡಿನ ಕೊಡುಗೆ ದೊಡ್ಡದು. ಶಿಕ್ಷಣ, ಔದ್ಯೋಗೀಕರಣದಲ್ಲಿಯೂ ರಾಜ್ಯ ಪ್ರಗತಿ ಸಾಧಿಸಿದೆ. ಕನ್ನಡದ ಎಂಟು ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಅನೇಕ ಮಹನೀಯರ ತ್ಯಾಗ, ಬಲಿದಾನಗಳಿಂದ ಅಖಂಡ ಕರ್ನಾಟಕ ನಿರ್ಮಾಣ ಸಾಧ್ಯವಾಯಿತು. ಆ ಹೋರಾಟಗಾರರನ್ನೆಲ್ಲ ಸ್ಮರಿಸಬೇಕು. 1956ರಲ್ಲಿ ಒಂದುಗೂಡಿದರೂ ರಾಜ್ಯಕ್ಕೆ ಮೈಸೂರು ರಾಜ್ಯ ಎಂದೇ ಕರೆಯಲಾಗುತ್ತಿತ್ತು. 1973ರಲ್ಲಿ ಡಿ.ದೇವರಾಜ ಅರಸು ಅವರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ್ದು, ಐತಿಹಾಸಿಕ ಕಾರ್ಯ. ಭಾಷೆಯ ಅಭಿಮಾನ ಇರಬೇಕು, ದುರಭಿಮಾನಿಗಳಾಗಬಾರದು. ಯಾವುದೇ ಭಾಷೆ ಕಲಿಯಬಹುದು, ನಮ್ಮ ಮಾತೃ ಭಾಷೆ ಮರೆಯಬಾರದು. ಸುವರ್ಣ ಸಂಭ್ರಮಾಚರಣೆಯ ಈ ಸಂದರ್ಭದಲ್ಲಿ ನಾವು ಕನ್ನಡಿಗರ ಜೊತೆ ಕನ್ನಡದಲ್ಲೇ ಮಾತನಾಡುವ ನಿರ್ಣಯ ಪಾಲಿಸಬೇಕು ಎಂದು ಹೇಳಿದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡ ನಂತರ ಆಗಿರುವ ಸರ್ವಾಂಗೀಣ ವಿಕಾಸಕ್ಕೆ ಕೊಡುಗೆ ನೀಡಿರುವ ಹಿರಿಯರನ್ನು ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ. ಮುಂದಿನ ಪೀಳಿಗೆಗೆ ಒಂದು ಮಾದರಿ ರಾಜ್ಯ ಮತ್ತು ಪರಂಪರೆ ನೀಡುವ ಕೆಲಸ ಕಾರ್ಯಗಳನ್ನು ನಾವು ಮಾಡಬೇಕು. ಪ್ರೀತಿ ಪೂರ್ವಕ ದ್ವೇಷರಹಿತ ರಾಜ್ಯ ನಮ್ಮದು. ಆ ಹಿರಿಮೆ ಗರಿಮೆ ಎತ್ತಿಹಿಡಿಯಬೇಕು ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಹಿಂದಿನ ಹಿರಿಯರು ಸವೆಸಿದ ಹಾದಿ ಹಾಗೂ ಮಾರ್ಗದರ್ಶನ ಸದಾ ಕಾಲ ನಮಗೆ ಬೇಕು. ಸರ್ಕಾರ ಹಾಗೂ ವಿಧಾನಮಂಡಲದ ಸಮನ್ವಯ, ಸಹಕಾರದಿಂದ ಈ ಅರ್ಥಪೂರ್ಣ ಕಾರ್ಯಕ್ರಮ ಸಾಧ್ಯವಾಗಿದೆ ಎಂದರು.ಸಚಿವ ಎಚ್.ಕೆ.ಪಾಟೀಲ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರು, ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಉಪಸಭಾಪತಿ ಎಂ.ಕೆ‌.ಪ್ರಾಣೇಶ ಇತರರು ಹಾಜರಿದ್ದರು.