ಸಾರಾಂಶ
ಹೊನ್ನಾಳಿ: ಗ್ರಾಮಗಳಲ್ಲಿ ದೇವಾಲಯಗಳ ನಿರ್ಮಿಸುವ ಬದಲಿಗೆ ಆಸ್ಪತ್ರೆಗಳು, ಶಾಲೆಗಳ ನಿರ್ಮಾಣ ಮಾಡಿ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡುವ ಮೂಲಕ ಇಡೀ ಸಮಾಜದ ಅಭಿವೃದ್ಧಿಗೆ ಎಲ್ಲಾ ವರ್ಗದ ಜನ ಮುಂದಾಗಬೇಕು ಎಂದು ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ ಶನಿವಾರ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಕಂಚಿನ ಪ್ರತಿಮೆ ಅನಾವರಣ ಹಾಗೂ ಕನಕದಾಸರ 537ನೇ ಜಯಂತ್ಯುತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅಶೀರ್ವಚನ ನೀಡಿದರು.ಕನಕದಾಸರು ಭಕ್ತಿಯ ಸಂಕೇತವಾದರೆ ಸಂಗೊಳ್ಳಿ, ರಾಯಣ್ಣ ಹೋರಾಟದ ಬದುಕಿಗೆ ಸಂಕೇತವಾಗಿ ಹೊರಹೊಮ್ಮಿದ್ದಾರೆ. ದೇಶದ ಇತಿಹಾಸದ ಪ್ರಥಮವಾಗಿ ಬ್ರೀಷರ ವಿರುದ್ಧ ಹೋರಾಡಿ ಹುತಾತ್ಮನಾಗಿದ್ದು ಸಂಗೊಳ್ಳಿರಾಯಣ್ಣ ಆದರೆ ಇವರ ಬದಲು ಮಂಗಲ ಪಾಂಡೆ ಅವರ ಹೆಸರು ಪ್ರಥಮ ಹೋರಾಟಗಾರ ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ ಎಂದು ತಿಳಿಸಿದರು.
ಕನಕದಾಸರು ಜನರಿಗೆ ಅರ್ಥವಾಗದ ಸಂಸ್ಕೃತದಲ್ಲಿ ಸಾಹಿತ್ಯ ರಚಿಸದೇ ಜನಸಾಮಾನ್ಯರಿಗೂ ಆರ್ಥವಾಗುವ ಸರಳ ಕನ್ನಡದಲ್ಲಿ ಸಾಹಿತ್ಯ ರಚಿಸುವ ಮೂಲಕ ಸಮಾಜದ ಎಲ್ಲಾ ವರ್ಗಗಳ ಜನ ಇವರ ಸಾಹಿತ್ಯವನ್ನು ಓದಿ ಸಂಸ್ಕಾರವಂತರಾಗುವಂತೆ ಮಾಡಿದ್ದಾರೆ. ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಜಾತಿ, ಧರ್ಮ ವ್ಯವಸ್ಥೆಗಳ ಮಧ್ಯದಲ್ಲಿನ ಮೇಲು ಕೀಳು ತಾರತಮ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ ಎಂದರು.ಜಾತಿ, ಧರ್ಮಗಳಿಂದ ಯಾರೂ ದೊಡ್ಡವರಾಗುವುದಿಲ್ಲ. ಬದಲಿಗೆ ಅವರು ಜೀವನದಲ್ಲಿ ಅಳವಡಿಸಿಕೊಳ್ಳುವ ಸಿದ್ಧಾಂತಗಳ ಮೂಲಕ ಉತ್ತಮರಾಗುತ್ತಾರೆ. ಜೀವನನದಲ್ಲಿ ಭಕ್ತಿ ಮತ್ತು ಹೋರಾಟಗಳು ಮುಖ್ಯವಾಗುತ್ತವೆ. ಇವುಗಳಿಂದಲೇ ಕುರುಬ ಸಮಾಜ ದೇಶದ ಇತಿಹಾಸದಲ್ಲಿ ಆಜರಾಮರವಾಗಿದೆ ಎಂದರು.
ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಭಕ್ತನ ಭಕ್ತಿಗೆ ಮೆಚ್ಚಿ ಹಿಂದಕ್ಕೆ ತಿರುಗಿ ದರ್ಶನ ನೀಡಿದ ಕನಕ ಕಿಂಡಿ ಐತಿಹಾಸಿಕ ಪ್ರಸಂಗ ಜಗತ್ತಿನ ಯಾವ ದೇಶದಲ್ಲೂ ಇಲ್ಲ. ಬಸವ, ಅಂಬೇಡ್ಕರ್, ಕನಕದಾಸರಂತಹ ಮಹಾತ್ಮರ ಕೊಡುಗೆಯಿಂದಾಗಿ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರದಲ್ಲಿ ದೇಶ ತನ್ನದೇ ಆದ ಖ್ಯಾತಿ ಹೊಂದಿದೆ ಎಂದು ತಿಳಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಂಪುರ ಮಠದ ಶಿವಕುಮಾರ ಹಾಲಸ್ವಾಮೀಜಿ, ಮುಖಂಡರಾದ ಎಚ್.ಎ.ಉಮಾಪತಿ, ಕುರುಬ ಸಮಾಜದ ಅಧ್ಯಕ್ಷ ಎಂ.ಸಿ.ಮೋಹನ, ಡಾ.ಈಶ್ವರ ನಾಯ್ಕ, ಕುಳಗಟ್ಟೆ ರಂಗಪ್ಪ, ಎ.ಆರ್.ಚಂದ್ರಶೇಖರ, ಶಿಲ್ಪಿನಂದಕುಮಾರ ಚಂದರಗಿ, ಎಂ.ಪಿ.ರಾಜು, ಎಚ್.ಎ.ಗದ್ದಿಗೇಶ್ ಮಾತನಾಡಿದರು.
ನಿವೃತ್ತ ಆಧಿಕಾರಿಕ ಬಿ.ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು.ಎಂ.ಆರ್.ಮಹೇಶ್, ಕೆ.ವಿ.ಚನ್ನಪ್ಪ, ಎಚ್.ಮಂಜಪ್ಪ. ಹಿರಿಯ ಮುಖಂಡ ಎಚ್.ಬಿ.ಗಿಡ್ಡಪ್ಪ, ಸ್ಥಳ ದಾನಿ ಕರೇಕಲ್ಲಾರ ಹಾಲೇಶಪ್ಪ, ಗ್ರಾಪಂ ಅಧ್ಯಕ್ಷೆ ಗೀತಮ್ಮಮಲ್ಲೇಶಪ್ಪ, ಉತ್ಸವ ಸಮಿತಿ ಪದಾಧಿಕಾರಿಗಳಾದ ರವಿ, ನಾಗರಾಜ್, ಸಿದ್ದೇಶ್ ಮುಂತಾದವರು ಇದ್ದರು.
ಉಭಯ ಸ್ವಾಮಿಜಿಗಳ ಅದ್ಧೂರಿ ಮೆರವಣಿಗೆ ಮಾಡಲಾಯಿತು. ಸಂಗೋಳ್ಳಿ ರಾಯಣ್ಣ ಕಂಚಿನ ಪ್ರತಿಮೆಯನ್ನು ಸ್ವಾಮಿಜಿಗಳು ಅನಾವರಣ ಮಾಡಿದರು. ಎಲ್ಲರಿಗೂ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ 2 ಅವಧಿ ಸಿಎಂ ಅಗಿ ದಾಖಲೆಯಾಗುತ್ತದೆ ಎನ್ನುವ ಕಾರಣಕ್ಕೆ ಅವರ ಮೇಲೆ ಭ್ರಷ್ಟಾಚಾಗಳ ಆರೋಪ ಮಾಡುತ್ತಿರುವ ಮುಂದುವರೆದ ಸಮಾಜಗಳ ರಾಜಕಾರಣಿಗಳು ಸಾವಿರಾರು ಎಕರೆ ಆಸ್ತಿ ಮಾಡಿರುವ ಇವರು ಎಷ್ಟು ಎಕರೆ ಭೂಮಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ ಎಂದು ಹೇಳಲಿ.- ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಹೊಸದುರ್ಗ ಕನಕ ಗುರುಪೀಠ