ಸಾರಾಂಶ
ಕುಶಾಲನಗರ: ಮನೆ ಮನೆಗೆ ಪೊಲೀಸ್, ಗಣೇಶೋತ್ಸವ ಪೂರ್ವಭಾವಿ ಸಭೆಕನ್ನಡಪ್ರಭ ವಾರ್ತೆ ಕುಶಾಲನಗರಪೊಲೀಸ್ ಇಲಾಖೆಗೆ ಸಾರ್ವಜನಿಕರ ಬೆಂಬಲದ ಮೂಲಕ ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಅಭಿಪ್ರಾಯಪಟ್ಟರು.ಅವರು ಕುಶಾಲನಗರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ನಡೆದ ಮನೆ ಮನೆಗೆ ಪೊಲೀಸ್ ಮತ್ತು ಗಣೇಶ ಪ್ರತಿಷ್ಠಾಪನ ಸಮಿತಿಯ ಪದಾಧಿಕಾರಿಗಳ ಪೂರ್ವಭಾವಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಅಪರಾಧ ರಹಿತ, ಶಾಂತಿ ನೆಮ್ಮದಿಯ ಸಮಾಜಕ್ಕಾಗಿ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಇಲಾಖೆಯ ಮೂಲಕ ಮನೆ ಮನೆಗೆ ಪೊಲೀಸ್ ಎಂಬ ವಿನೂತನ ವ್ಯವಸ್ಥೆ ಪೊಲೀಸ್ ಇಲಾಖೆ ಮೂಲಕ ಹಮ್ಮಿಕೊಳ್ಳಲಾಗುತ್ತಿದ್ದು, ಈ ಮೂಲಕ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಕೆಲಸ ನಡೆಯಲಿದೆ ಎಂದರು.ಇತ್ತೀಚಿನ ದಿನಗಳಲ್ಲಿ ಕಳ್ಳತನ, ದರೋಡೆ, ಸೈಬರ್ ಕ್ರೈಂ, ಗಾಂಜಾ ಮತ್ತಿತರ ಪಿಡುಗುಗಳು ಹಾಗೂ ವಂಚನೆ, ಮೋಸ ಜಾಲಗಳು ಅಧಿಕವಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಮನೆ ಮನೆಗೆ ಭೇಟಿ ಕಾರ್ಯಕ್ರಮ ನಡೆಯಲಿದೆ ಎಂದರು.50ರಿಂದ 75 ಮನೆಗಳಿಗೆ ಒಂದು ಬೀಟ್ ಸ್ಥಾಪನೆ:
ಪ್ರತಿ ವಾರ್ಡ್‌ಗಳಲ್ಲಿ 50ರಿಂದ 75 ಮನೆಗಳಿಗೆ ಒಂದು ಬೀಟ್ ಸ್ಥಾಪಿಸುವ ಮೂಲಕ ಕುಂದು ಕೊರತೆಗಳ ಬಗ್ಗೆ ಚರ್ಚೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಕೆಲಸ ನಡೆಯಲಿದೆ. ನಾಗರಿಕರ ಗುಂಪಿಗೆ ನಾಯಕನ ನೇಮಕ ಮಾಡುವುದು, ನಂತರ ಪ್ರತಿ ಎರಡನೇ ಶನಿವಾರ ವಾರ್ಡ್ ನಾಯಕರ ಸಭೆಯನ್ನು ಪೊಲೀಸ್ ಠಾಣೆಯಲ್ಲಿ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚಿಸುವ ಮೂಲಕ ಪರಿಹಾರ ಕಂಡುಹಿಡಿಯಲಾಗುವುದು ಎಂದರು.ಈ ಸಂದರ್ಭ ಸೋಮವಾರಪೇಟೆ ಉಪವಿಭಾಗದ ಎರಡು ತಾಲೂಕುಗಳ ವ್ಯಾಪ್ತಿಯಲ್ಲಿ ಗೌರಿ ಗಣೇಶ ಹಬ್ಬ ಸಂದರ್ಭ ಗಣಪತಿ ಪ್ರತಿಷ್ಠಾಪನೆ ಮಾಡುವ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ದಿನೇಶ್ ಕುಮಾರ್, ಭಕ್ತಿ ಮೂಲಕ ಶಾಂತಿಯುತ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದರು. ಗಣೇಶೋತ್ಸವ: ನೀತಿ ನಿಯಮ ಪಾಲಿಸಿ:
ಪ್ರಾಸ್ತಾವಿಕವಾಗಿ ಮಾತನಾಡಿದ ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಚಂದ್ರಶೇಖರ್, ಪೊಲೀಸ್ ಮತ್ತು ಸಾರ್ವಜನಿಕರ ಸಂಬಂಧ ಉತ್ತಮಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕ ಗಣೇಶ ಕಾರ್ಯಕ್ರಮ ಸಂದರ್ಭ ಎರಡು ತಾಲೂಕುಗಳಲ್ಲಿ 250ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯುವ ಸಾಧ್ಯತೆ ಇದೆ. ಈ ಸಂದರ್ಭ ಕಾರ್ಯಕ್ರಮ ಆಯೋಜಕರು ಸಮರ್ಪಕ ವ್ಯವಸ್ಥೆ ಕಲ್ಪಿಸುವುದರೊಂದಿಗೆ, ಯಾವುದೇ ಅವ್ಯವಸ್ಥೆಗಳು ಆಗದಂತೆ ಎಚ್ಚರ ವಹಿಸಬೇಕು. ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಸಾರ್ವಜನಿಕರಿಗೆ ಕಿರಿಕಿರಿ ಆಗದಂತೆ ಎಚ್ಚರ ವಹಿಸಬೇಕು ಎಂದರು.ಉಪ ವಿಭಾಗ ವ್ಯಾಪ್ತಿಯಲ್ಲಿ ಕುಶಾಲನಗರ, ಸೋಮವಾರಪೇಟೆ, ಶನಿವಾರ ಸಂತೆ, ಸುಂಟಿಕೊಪ್ಪ ಪಟ್ಟಣಗಳ ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮರಾ ವ್ಯವಸ್ಥೆ ಕಲ್ಪಿಸಲು ಇಲಾಖೆ ಚಿಂತನೆ ಹರಿಸಿದೆ. ಈ ಸಂಬಂಧ ಸಂಘ ಸಂಸ್ಥೆಗಳು ಅಪರಾಧ ಮುಕ್ತ ಪಟ್ಟಣಗಳ ಸ್ಥಾಪನೆಗೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದರು.ಉದ್ಯಮಿ ಸುದೀಪ್ ಕುಮಾರ್ ಮಾತನಾಡಿ, ತಮ್ಮ ಬಡಾವಣೆಯ ಸಮಿತಿ ಮೂಲಕ ಹಾರಂಗಿ ರಸ್ತೆಯಲ್ಲಿ ಈಗಾಗಲೇ ಅತ್ಯಾಧುನಿಕ ತಂತ್ರಜ್ಞಾನಗಳ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಈ ಭಾಗದಲ್ಲಿ ಆಗುತ್ತಿದ್ದ ಅಪರಾಧಗಳ ಪತ್ತೆ ಕಾರ್ಯಕ್ಕೆ ಮುಂದಾಗಿರುವ ಬಗ್ಗೆ ಸಭೆಗೆ ತಿಳಿಸಿದರು. ಎಲ್ಲ ಬಡಾವಣೆಗಳು ಇದೇ ರೀತಿ ಕಾರ್ಯಯೋಜನೆ ರೂಪಿಸಿದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಲಿದೆ ಎಂದರು.ಸಭೆಗೂ ಮುನ್ನ ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖರಾದ ಶ್ರೀನಾಥ್ ಗಣಪತಿ ಪ್ರತಿಷ್ಠಾಪನಾ ಸಮಿತಿಯ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ಗಣೇಶ ಆಚರಣೆ, ಉದ್ದೇಶ ಮತ್ತು ಪೂಜಾ ವಿಧಿ ವಿಧಾನಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು. ಅನಗತ್ಯ ದುಂದು ವೆಚ್ಚ ಮಾಡದೆ ಧಾರ್ಮಿಕವಾಗಿ ಆದರ್ಶ ಗಣೇಶೋತ್ಸವ ಆಚರಿಸುವಂತೆ ತಿಳಿ ಹೇಳಿದರು.ಸಭೆಯಲ್ಲಿ ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಎರಡು ತಾಲೂಕುಗಳ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು. ಕುಶಾಲನಗರ ಪೊಲೀಸ್ ಇನ್‌ಸ್ಪೆಕ್ಟರ್ ದಿನೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪೊಲೀಸ್ ಇನ್‌ಸ್ಪೆಕ್ಟರ್ ಕೃಷ್ಣರಾಜು ಸ್ವಾಗತಿಸಿದರು. ಇನ್‌ಸ್ಪೆಕ್ಟರ್ ಮುದ್ದು ಮಹಾದೇವಯ್ಯ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))