ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ, ಕೊಡವ ಮತ್ತು ಯಕ್ಷಗಾನ ಅಕಾಡೆಮಿ, ದ.ಕ. ಉಡುಪಿ ಮತ್ತು ಕೊಡಗು ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಂಗಳೂರಿನ ಪುರಭವನದಲ್ಲಿ ಶುಕ್ರವಾರ ಏರ್ಪಡಿಸಿದ ‘ಬಹುಸಂಸ್ಕೃತಿ ಉತ್ಸವ’ದಲ್ಲಿ ಸ್ಪೀಕರ್ ಯು.ಟಿ.ಖಾದರ್ ಮತ್ತಿತರರು ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸೌಹಾರ್ದತೆ, ಸಹೋದರತೆಯ ಸಮಾಜ ನಿರ್ಮಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಅಥವಾ ಅಕಾಡೆಮಿಗಳು ಮಾತ್ರವಲ್ಲ, ಪ್ರತಿಯೊಂದು ಮನೆಯವರಿಗೂ ಜವಾಬ್ದಾರಿ ಇದೆ ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್‌ ಯು.ಟಿ.ಖಾದರ್‌ ಫರೀದ್‌ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ, ಕೊಡವ ಮತ್ತು ಯಕ್ಷಗಾನ ಅಕಾಡೆಮಿ, ದ.ಕ. ಉಡುಪಿ ಮತ್ತು ಕೊಡಗು ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಂಗಳೂರಿನ ಪುರಭವನದಲ್ಲಿ ಶುಕ್ರವಾರ ಏರ್ಪಡಿಸಿದ ‘ಬಹುಸಂಸ್ಕೃತಿ ಉತ್ಸವ’ದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಪ್ರೀತಿ, ವಿಶ್ವಾಸದ ವಾತಾವರಣ ಈಗ ಕಡಿಮೆಯಾಗಿದೆ. ಎಲ್ಲರನ್ನೂ ಸಂಶಯದಿಂದ ನೋಡುವ ಪ್ರಮೇಯ ಬಂದೊದಗಿದೆ. ಬೇರೆ ಬೇರೆ ಸಂಸ್ಕೃತಿಗಳ ಆಚಾರ, ವಿಚಾರವನ್ನು ತಿಳಿದುಕೊಳ್ಳದೇ ಇರುವುದು ಇದಕ್ಕೆ ಕಾರಣ. ಹಾಗಾಗಿ ಇಂತಹ ಕಾರ್ಯಕ್ರಮಗಳನ್ನು ಆಯಾ ಅಕಾಡೆಮಿಗಳೇ ಪ್ರತ್ಯೇಕವಾಗಿ ಮಾಡುವ ಬದಲು ಎಲ್ಲರೂ ಒಟ್ಟಾಗಿ ನಡೆಸಿದಾಗ ಮಾತ್ರ ಸಾಂಸ್ಕೃತಿಕ ವೈವಿಧ್ಯತೆ, ವಿನಿಮಯವನ್ನು ಮನಗಾಣಬಹುದು ಎಂದರು.

ಪ್ರತಿಯೊಬ್ಬರ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕು. ಈ ಮೂಲಕ ಸಂಸ್ಕೃತಿಯ ವರ್ಗಾವಣೆ ನಡೆಯಬೇಕು. ವಿಶ್ವಾಸ ಮತ್ತು ಅಭಿವೃದ್ಧಿ ಸಮಾಜದಿಂದ ಬಲಿಷ್ಠ ಭಾರತ ನಿರ್ಮಾಣವಾಗಬೇಕು. ಅದಕ್ಕೆ ಬಹುಸಂಸ್ಕೃತಿಯ ಉತ್ಸವ ನಾಂದಿ ಹಾಡಬೇಕು ಎಂದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ನಡೆದ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಅಕಾಡೆಮಿಗಳ ಅಧ್ಯಕ್ಷರುಗಳೇ ಬಹುಮಾನ ವಿತರಿಸಿದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್‌, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್‌ ಯು.ಎಚ್‌, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಮಹೇಶ್‌ ನಾಚಯ್ಯ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಂಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ, ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ, ಉಡುಪಿ ಎಸ್ಪಿ ಡಾ.ಅರುಣ್‌, ದ.ಕ. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಂತೋಷ್‌ ಕುಮಾರ್‌ ಮತ್ತಿತರರಿದ್ದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್‌ ನಿರೂಪಿಸಿದರು.

ವಿವಿಧ ಅಕಾಡೆಮಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಬಾಕ್ಸ್‌ಗಳು----

ಬಹುಸಂಸ್ಕೃತಿ ಉತ್ಸವದಲ್ಲಿ ಸಾಂಸ್ಕೃತಿಕ ವೈವಿಧ್ಯತೆಯ ಅನಾವರಣಬಹು ಸಂಸ್ಕೃತಿ ಉತ್ಸವದ ಅಂಗವಾಗಿ ಪುರಭವನದ ವೇದಿಕೆಯಲ್ಲಿ ವಿವಿಧ ಅಕಾಡೆಮಿಗಳ ತಂಡಗಳಿಂದ ಕರಾವಳಿಯ ಸಾಂಸ್ಕೃತಿಕ ವೈಭವ ಅನಾವರಣಗೊಂಡಿತು. ಕೊಂಕಣಿಯ ಬೈಲಾ ಹಾಡು ಹಾಗೂ ನೃತ್ಯ, ಕೊಡವರ ಉಮ್ಮತ್ತಾಟ್‌ ನೃತ್ಯ, ಸಿದ್ಧಿ ಸಮುದಾಯದವರ ನೃತ್ಯ ಮೋಡಿ ಮಾಡಿತು. ತುಳುವಿನ ಕೊರಗರ ಡೋಲು - ಕೊಳಲಿನ ನಿನಾದದೊಂದಿಗೆ ಕುಣಿತ, ಬ್ಯಾರಿ ಹುಡುಗರ ದಫ್‌, ದುಡಿ ಕುಣಿತದೊಂದಿಗೆ ಸುವರ್ಣ ಕರ್ನಾಟಕ ಸಂಭ್ರಮವನ್ನು ಬಿಂಬಿಸುವ ನೃತ್ಯಗಳು ಬೆಳಗ್ಗಿನಿಂದ ಸಂಜೆಯವರೆಗೂ ಪುರಭವನದ ವೇದಿಕೆಯಲ್ಲಿ ನಡೆಯಿತು. ಮೈಮ್‌ ರಾಮದಾಸ್‌ರವರ ತುಳು ಹಾಡುಗಳು, ಫಯಾಜ್‌ರವರ ಬ್ಯಾರಿ, ಝೀನಾರವರ ಬೈಲಾ ಹಾಗೂ ಜ್ಯೋತಿ ಜೋಗಿಯವರ ಜನಪದ ಹಾಡುಗಳು ಸಭಿಕರನ್ನು ರಂಜಿಸಿದವು.

‘ಬಹು ಸಂಸ್ಕೃತಿ ಉತ್ಸವ’ಕ್ಕೆ ಮುಖ್ಯಮಂತ್ರಿ ಗೈರು!

ಸುವರ್ಣ ಕರ್ನಾಟಕ ಸಂಭ್ರಮದ ಭಾಗವಾಗಿ ದ.ಕ., ಉಡುಪಿ ಮತ್ತು ಕೊಡಗು ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಆಯೋಜಿಸಲಾದ ಬಹು ಸಂಸ್ಕೃತಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಗೈರು ಸಂಘಟಕರಿಗೆ ನಿರಾಸೆ ಮೂಡಿಸಿತು.

ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ, ಯಕ್ಷಗಾನ ಹಾಗೂ ಕೊಡವ ಸಾಹಿತ್ಯ ಅಕಾಡೆಮಿ ಸೇರಿ ಒಟ್ಟು ಆರು ಆಕಾಡೆಮಿಗಳ ಸಹಭಾಗಿತ್ವದಲ್ಲಿ ಇದೇ ಮೊದಲ ಬಾರಿಗೆ ಜಂಟಿ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು. ವಿವಿಧ ಅಕಾಡೆಮಿಗಳು ಕಳೆದ ಸುಮಾರು ಎರಡು ತಿಂಗಳಿನಿಂದೀಚೆಗೆ ಸಾಕಷ್ಟು ಸಿದ್ಧತೆಯನ್ನೂ ನಡೆಸಿದ್ದವು. ಎರಡು ಬಾರಿ ಕಾರ್ಯಕ್ರಮ ಮುಂದೂಡಿಕೆಯಾಗಿ ಶುಕ್ರವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಉದ್ಘಾಟನೆಯೊಂದಿಗೆ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು.

ಬೆಳಗ್ಗೆ 10 ಗಂಟೆಯಿಂದಲೇ ಪುರಭವನದ ವೇದಿಕೆಯಲ್ಲಿ ವಿವಿಧ ಅಕಾಡೆಮಿಗಳ ತಂಡಗಳಿಂದ ಬಹು ಸಂಸ್ಕೃತಿಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡಿತ್ತು. ಕಳೆದೆರಡು ದಿನಗಳ ಹಿಂದೆ ನಿಗದಿಯಾದಂತೆ ಪುರಭವನದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರು 12.15ಕ್ಕೆ ಭೇಟಿ ನೀಡಿ ಉದ್ಘಾಟನೆ ನೆರವೇರಿಸಬೇಕಿತ್ತು. ಆದರೆ ಮಂಗಳೂರಿಗೆ ಮುಖ್ಯಮಂತ್ರಿ ಆಗಮನವೇ ಸುಮಾರು ಎರಡು ಗಂಟೆಗಳಷ್ಟು ತಡವಾದ ಕಾರಣ ಮಧ್ಯಾಹ್ನ 1.30ರ ಬಳಿಕವಾದರೂ ಭೇಟಿ ನೀಡಬಹುದೆಂಬ ನಿರೀಕ್ಷೆ ಸಂಘಟಕರದ್ದಾಗಿತ್ತು. ಪುರಭವನದ ಹೊರ ಆವರಣದಲ್ಲಿ ಮುಖ್ಯಮಂತ್ರಿಗೆ ಸ್ವಾಗತ ಕೋರಿ ಬೃಹತ್‌ ಸೆಲ್ಫಿ ಸ್ಟಾಂಡ್‌ ಕೂಡಾ ರಚಿಸಲಾಗಿತ್ತು. ಮಧ್ಯಾಹ್ನ ವೇಳೆಗೆ ಶ್ವಾನ ದಳದದೊಂದಿಗೆ ಸುರಕ್ಷಾ ತಂಡ ಪುರಭವನದ ವೇದಿಕೆಯ ತಪಾಸಣೆಯನ್ನೂ ನಡೆಸಿತ್ತು. ಸಂಜೆ 3.45ರ ವರೆಗೆ ಮುಖ್ಯಮಂತ್ರಿಗಾಗಿ ಕಾರ್ಯಕ್ರಮ ಸಂಘಟಕರು ಎದುರು ನೋಡುತ್ತಿದ್ದರು. ಅದಾಗಲೇ ಪುರಭವನದ ಮುಖ್ಯಮಂತ್ರಿ ಭೇಟಿ ರದ್ದುಗೊಂಡಿತ್ತು.

ಶಿಲಾನ್ಯಾಸ ಕಾರ್ಯಕ್ರಮವೂ ವಿಳಂಬ:

ಮಂಗಳೂರಿನಲ್ಲಿ ಬೆಳಗ್ಗೆ 11 ಗಂಟೆಗೆ ಮೇರಿಹಿಲ್‌ನಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಬೇಕಿತ್ತು. ಇದಕ್ಕಾಗಿ ರಾಜೀವ ಗಾಂಧಿ ಯೂನಿವರ್ಸಿಟಿಗೆ ಒಳಪಟ್ಟ ಮಂಗಳೂರಿನ ಹಲವು ನರ್ಸಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳನ್ನು ಕರೆಸಲಾಗಿತ್ತು. ನೂರಾರು ವಿದ್ಯಾರ್ಥಿಗಳು ಸ್ಥಳದಲ್ಲಿ ಸೇರಿದ್ದು ಹಾಕಿರುವ ಶಾಮಿಯಾನ, ಕುರ್ಚಿ ಸಾಕಾಗದೆ ಹೊರಗಡೆಯೂ ನಿಂತಿದ್ದರು. ಅಧಿಕಾರಿಗಳ ಮಾಹಿತಿ ಪ್ರಕಾರ, ಸಿಎಂ 12.45 ರ ವೇಳೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪಿದ್ದರು. ಮೇರಿಹಿಲ್ ಕಾರ್ಯಕ್ರಮ ಸ್ಥಳಕ್ಕೆ 1.20 ಗಂಟೆಗೆ ತಲುಪಿದ್ದಾರೆ. ಸಿಎಂ ಆಗಮನಕ್ಕೂ ಮುನ್ನ ಸ್ಪೀಕರ್ ಯು.ಟಿ. ಖಾದ‌ರ್, ಸ್ಥಳೀಯ ಶಾಸಕ ಡಾ. ಭರತ್ ಶೆಟ್ಟಿ ಭಾಷಣ ಮಾಡಿದರು.