ಸಾರಾಂಶ
ಸ್ವಚ್ಛತೆ ಸರ್ಕಾರದ ಜವಾಬ್ದಾರಿ ಎಂಬ ಮನೋಭಾವ ಬದಲಾಗಬೇಕೆಂದು ಹಾಗೂ ಪ್ರತಿಯೊಬ್ಬ ನಾಗರಿಕರು ಸ್ವಚ್ಛತೆಯಲ್ಲಿ ಕೈಜೋಡಿಸಬೇಕೆಂದು ಶಾಸಕ ಶ್ರೀನಿವಾಸ ಮಾನೆ ಕರೆ ನೀಡಿದ್ದಾರೆ.
ಹಾನಗಲ್ಲ: ಸ್ವಚ್ಛತೆ ಸರ್ಕಾರದ ಕೆಲಸ ಎನ್ನುವ ಮನೋಭಾವನೆಯಿಂದ ಹೊರಬಂದು, ನನ್ನ ಕಸ, ನನ್ನ ಜವಾಬ್ದಾರಿ, ಎಂಬುದನ್ನು ಅರಿತು ಕಸ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸುವ ಮೂಲಕ ಪ್ರತಿಯೊಬ್ಬ ನಾಗರಿಕರು ಕೈ ಜೋಡಿಸಿದರೆ ಸ್ವಚ್ಛ ಮತ್ತು ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಮಂಗಳವಾರ ತಾಲೂಕಿನ ತಿಳವಳ್ಳಿ ಗ್ರಾಮದ ಗ್ರಾಪಂ ಸಮುದಾಯ ಭವನದಲ್ಲಿ ಜಿಪಂ, ತಾಪಂ ಹಾಗೂ ಗ್ರಾಪಂ ಆಯೋಜಿಸಿದ್ದ ಸ್ವಚ್ಛತೆಯೇ ಸೇವೆ2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಚ್ಛತೆ, ಗ್ರಾಮ ನೈರ್ಮಲ್ಯದ ಕುರಿತಾಗಿ ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕಿದೆ.
ಕಸ ಎಲ್ಲೆಂದರಲ್ಲಿ ಚೆಲ್ಲಿ ವಾತಾವರಣ ಹದಗೆಡಿಸದೇ ಹಸಿ ಮತ್ತು ಒಣ ಕಸ ಬೇರ್ಪಡಿಸಿ ಕಸ ಸಂಗ್ರಹಿಸುವ ವಾಹನಕ್ಕೆ ನೀಡಬೇಕಿದೆ. ಸಂಗ್ರಹಗೊಂಡ ತ್ಯಾಜ್ಯವನ್ನು ವೈಜ್ಞಾನಿಕ ಮಾದರಿಯಲ್ಲಿ ವಿಲೇವಾರಿ ಮಾಡುವುದರಿಂದ ಅನೇಕ ಲಾಭಗಳಿದ್ದು, ಕಾಂಪೋಸ್ಟ್ ಗೊಬ್ಬರ ತಯಾರಿಸಿ ಆದಾಯ ಗಳಿಸಬಹುದಾಗಿದೆ. ಇಂಥ ಪ್ರಯೋಗ ಹಾನಗಲ್ ಪುರಸಭೆಯಲ್ಲಿ ಈಗಾಗಲೇ ಯಶ ಕಂಡಿದ್ದು, ಕಾಂಪೋಸ್ಟ್ ಗೊಬ್ಬರಕ್ಕೆ ಮಾರುಕಟ್ಟೆಯಲ್ಲಿ ರೈತರಿಂದ ಉತ್ತಮ ಬೇಡಿಕೆಯೂ ಇದೆ. ತಾಲೂಕಿನ ಅಕ್ಕಿಆಲೂರು, ತಿಳವಳ್ಳಿ, ಆಡೂರು, ಬಮ್ಮನಹಳ್ಳಿ, ನರೇಗಲ್, ಚಿಕ್ಕಾಂಶಿ ಹೊಸೂರು ಮತ್ತಿತರ ಗ್ರಾಮಗಳಲ್ಲಿಯೂ ಕಸ ವಿಲೇವಾರಿ ಮೂಲಕ ಗೊಬ್ಬರ ತಯಾರಿಸಿ ಸ್ಥಳೀಯ ಗ್ರಾಪಂಗಳು ಆದಾಯ ಕಂಡುಕೊಳ್ಳಬಹುದಾಗಿದೆ ಎಂದರು.ತಾಪಂ ಇಒ ಪರಶುರಾಮ ಪೂಜಾರ ಮಾತನಾಡಿ, ಆ. ೨ರ ವರೆಗೆ ತಾಲೂಕಿನಲ್ಲಿ ಸ್ವಚ್ಛತೆಯೇ ಸೇವೆ ಅಭಿಯಾನ ಕೈಗೊಳ್ಳಲಾಗಿದೆ.
ಈ ಅಭಿಯಾನದ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯವಾಗಿದೆ. ಪ್ರಮುಖವಾಗಿ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳನ್ನು ಸ್ವಚ್ಛಗೊಳಿಸುವ ಉದ್ದೇಶ ಹೊಂದಲಾಗಿದೆ.
ಜತೆಗೆ ಸಮುದಾಯದಲ್ಲಿ ನೈರ್ಮಲ್ಯದ ಮಹತ್ವದ ಕುರಿತು ಅರಿವು ಮೂಡಿಸಲಾಗುವುದು. ಸ್ವಚ್ಛತಾ ಸಿಬ್ಬಂದಿಯನ್ನು ಗೌರವಿಸಲಾಗುವುದು ಎಂದು ಹೇಳಿದರು.ಗ್ರಾಪಂ ಅಧ್ಯಕ್ಷೆ ಅಫ್ರೋಜಾ ಕನವಳ್ಳಿ, ತಾಪಂ ಸಹಾಯಕ ನಿರ್ದೇಶಕ ಮೌಲಾನಾಸಾಬ ಎಲವಿಗಿ, ಎಡಿಪಿಆರ್ ಸಹಾಯಕ ನಿರ್ದೇಶಕ ಸಿ.ಎಂ. ರೂಡಗಿ, ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ಮುಖಂಡರಾದ ವಿನಾಯಕ ಪವಾರ, ರಾಜೂ ಶೇಷಗಿರಿ, ಫಯಾಜ್ ಲೋಹಾರ, ಆರೀಫ್ ಲೋಹಾರ, ಮಂಜು ಗೊರಣ್ಣನವರ, ರೇಖಾ ಕುರುಬರ, ಲಕ್ಷ್ಮೀಬಾಯಿ ಪಾಟೀಲ, ಸುಶೀಲಾ ತಳವಾರ, ಭಾಗ್ಯಲಕ್ಷ್ಮೀ ಮೇಲಗಿರಿ, ಖಾದರಸಾಬ ಮೂಗೂರ, ಅಬ್ದುಲ್ ಕನವಳ್ಳಿ, ವೀರನಗೌಡ ಪಾಟೀಲ, ವಾಸೀಂ ಪಠಾಣ ಇದ್ದರು. ಇದೇ ಸಂದರ್ಭದಲ್ಲಿ ಗ್ರಾಪಂ ಸ್ವಚ್ಛತಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಸ್ವಚ್ಛತೆ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.