ಸುಭದ್ರ ಸಮಾಜ ನಿರ್ಮಾಣಕ್ಕೆ ಹಣ ಗುಣ ಎರಡೂ ಬೇಕು: ಶಿವಾನಂದ ಹೆಗಡೆ ಕಡತೋಕಾ

| Published : Feb 04 2025, 12:33 AM IST

ಸಾರಾಂಶ

ಹಣದ ಜತೆಗೆ ಒಳ್ಳೆಯ ಗುಣವೂ ಬೇಕು. ಹಣವಂತರಲ್ಲಿ ಗುಣವಿದ್ದರೆ ಶ್ರೇಷ್ಠತೆಗೆ ಕಾರಣವಾಗುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

ಕುಮಟಾ: ಹಣವಂತಿಕೆ ಈ ಕಾಲದ ಅತ್ಯಗತ್ಯವಾದರೂ ಸುಭದ್ರ ಸಮಾಜವನ್ನು ನಿರ್ಮಾಣಕ್ಕೆ ಹಣವಂತರು ಮಾತ್ರ ಸಾಲದು. ಉತ್ತಮ ಗುಣವಂತರು ಬೇಕೇ ಬೇಕು ಸಮಾಜ ಸೇವಕ ಶಿವಾನಂದ ಹೆಗಡೆ ಕಡತೋಕಾ ತಿಳಿಸಿದರು.ಇಲ್ಲಿನ ಸತ್ವಾಧಾರ ಫೌಂಡೇಷನ್ ವತಿಯಿಂದ ವಿಧಾತ್ರಿ ಅಕಾಡೆಮಿ ಹಾಗೂ ರಂಗ ಸಾರಸ್ವತದ ಸಹಯೋಗದಲ್ಲಿ ಸರಸ್ವತಿ ಪಿಯು ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯಾರು ಹಿತವರು ನಿಮಗೆ? ಚಿಂತನ- ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಸಕ ದಿನಕರ ಶೆಟ್ಟಿ ಮಾತನಾಡಿ, ಹಣದ ಜತೆಗೆ ಒಳ್ಳೆಯ ಗುಣವೂ ಬೇಕು. ಹಣವಂತರಲ್ಲಿ ಗುಣವಿದ್ದರೆ ಶ್ರೇಷ್ಠತೆಗೆ ಕಾರಣವಾಗುತ್ತದೆ ಎಂದರು. ಕೊಂಕಣ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮುರಳೀಧರ ಪ್ರಭು ಮಾತನಾಡಿ, ಸಮಾಜದಲ್ಲಿ ವೈಚಾರಿಕತೆ ಮತ್ತು ಮೌಲ್ಯಗಳು ಹೆಚ್ಚಬೇಕು. ಹಣವಂತರಲ್ಲಿ ಗುಣ, ಗುಣವಂತರಲ್ಲಿ ಹಣ ಇದ್ದರೆ ಸಾಮಾಜಿಕ ಸಮತೋಲನವಾಗುತ್ತದೆ ಎಂದರು. ಉದ್ಯಮಿ ವಸಂತ ರಾವ್ ಮಾತನಾಡಿ, ಇದೊಂದು ವಿಭಿನ್ನ ಕಾರ್ಯಕ್ರಮವಾಗಿದ್ದು, ಸತ್ವಾಧಾರ ಫೌಂಡೇಶನ್ ವರ್ಷದಿಂದ ವರ್ಷಕ್ಕೆ ಹೊಸತನ್ನು ನೀಡುತ್ತಿದೆ ಎಂದರು. ಚಾರ್ಟೆಡ್ ಅಕೌಂಟೆಂಟ್ ವಿನಾಯಕ ಹೆಗಡೆ, ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್. ಭಟ್ಟ, ಉದ್ಯಮಿ ಮಂಜುನಾಥ ಭಟ್ಟ ಸುವರ್ಣಗದ್ದೆ, ಪ್ರಾಚಾರ್ಯ ಕಿರಣ ಭಟ್ಟ, ಆಭರಣ ಜ್ಯುವೆಲರಿಯ ರಮೇಶ ಪೈ ಮಾತನಾಡಿದರು. ಬಳಿಕ, ಸಮಾಜದಲ್ಲಿ ಮನ್ನಣೆ ಯಾರಿಗೆ? ಹಣವಂತರಿಗೋ? ಗುಣವಂತರಿಗೋ ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಿತು. ಗುಣವಂತರಿಗೆ ಸಮಾಜದಲ್ಲಿ ಮನ್ನಣೆ ಕುರಿತು ಕುಂದಾಪುರದ ದಾಮೋದರ ಶರ್ಮ, ಶಿಕ್ಷಕ ಮಂಜುನಾಥ ಗಾಂವ್ಕರ್ ಬರ್ಗಿ, ತಿಗಣೇಶ ಮಾಗೋಡ, ಪ್ರಶಾಂತ ಹೆಗಡೆ ಮೂಡಲಮನೆ ಮಾತನಾಡಿದರು. ಹಣವಂತರಿಗೆ ಮನ್ನಣೆ ಇದೆ ಎಂದು ಕುಂದಾಪುರದ ಮನು ಹಂದಾಡಿ, ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ, ವಾಗ್ಮಿ ಸಂದೀಪ ಭಟ್ಟ, ಉಪನ್ಯಾಸಕ ಚಿದಾನಂದ ಭಂಡಾರಿ ವಾದ ಮಂಡಿಸಿದರು.

ಲಘು ಹಾಸ್ಯದೊಂದಿಗೆ ವಿಷಯದ ಗಂಭೀರತೆಯನ್ನು ಎತ್ತಿ ಹಿಡಿದ ಎಲ್ಲ ವಾಗ್ಮಿಗಳು ಆದಿಕಾಲದಿಂದ ಭವಿಷ್ಯದ ಜಾಗತಿಕ ಅಗತ್ಯತೆ, ಅನಿವಾರ್ಯತೆಯಲ್ಲಿ, ಕುಟುಂಬ ಹಾಗೂ ಸಾಮಾಜಿಕ ಬದ್ಧತೆಗಳಲ್ಲಿ ಹಣ ಹಾಗೂ ಗುಣ ಎರಡರ ಪ್ರಬಲ ಭೂಮಿಕೆಯನ್ನು ಒತ್ತು ತಿಳಿಸಿದರು.

ರವೀಂದ್ರ ಭಟ್ಟ ಸೂರಿ ಚರ್ಚೆ ನಿರ್ವಹಿಸಿದರು. ಡಾ. ಜಿ.ಎಲ್. ಹೆಗಡೆ ಅಭಿನಂದಿಸಿದರು. ಸತ್ವಾಧಾರ ಫೌಂಡೇಷನ್ ಸಂಸ್ಥಾಪಕ ಗಣೇಶ ಜೋಶಿ ಸ್ವಾಗತಿಸಿದರು. ಜಯದೇವ ಬಳಗಂಡಿ ನಿರೂಪಿಸಿದರು. ಪ್ರೇಕ್ಷಕರಲ್ಲಿ ಅದೃಷ್ಟವಂತರನ್ನು ಆಯ್ಕೆಮಾಡಿ ಬಹುಮಾನ ನೀಡಲಾಯಿತು.